ಭಾರತೀಯ ಸಿನಿಮಾರಂಗದಲ್ಲಿ ಡಾ. ರಾಜ್ಕುಮಾರ್ ಅವರಿಗೆ ಬೇರೆ ಯಾರೂ ಸಾಟಿ ಇಲ್ಲ. ಬರೋಬ್ಬರಿ 5 ದಶಕಗಳ ಕಾಲ ಸ್ಯಾಂಡಲ್ವುಡ್ನಲ್ಲಿ ಹೀರೋ ಆಗಿ ಮೆರೆದ ಅವರನ್ನು ಸಿನಿಪ್ರಿಯರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇಂದಿಗೂ ಅಣ್ಣಾವ್ರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ಎದೆಯಲ್ಲಿ ಮೇರುನಟನ ನೆನಪು ಸದಾ ಶಾಶ್ವತ. ಇಂದು (ಏ.12) ಡಾ. ರಾಜ್ಕುಮಾರ್ ಅವರ ಪುಣ್ಯಸ್ಮರಣೆ. ಅವರು ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ 15 ವರ್ಷ ಕಳೆದಿದೆ.
2006ರ ಏ.12ರಂದು ಡಾ. ರಾಜ್ಕುಮಾರ್ ಅವರ ಕೋಟ್ಯಂತರ ಅಭಿಮಾನಿಗಳಿಗೆ ಒಂದು ಬರಸಿಡಿಲು ಬಂದು ಬಡಿದಿತ್ತು. ‘ನಟಸಾರ್ವಭೌಮ’ ಇಹಲೋಕ ತ್ಯಜಿಸಿದರು ಎಂಬ ಸುದ್ದಿ ಕೇಳಿ ಎಲ್ಲರಿಗೂ ಆಘಾತವಾಯಿತು. ಎಷ್ಟೋ ಮಂದಿಗೆ ನೆಲವೇ ಕುಸಿದಂತಹ ಭಾವ ಕಾಡಲು ಶುರುವಾಯಿತು. ಆಗ ಅಣ್ಣಾವ್ರಿಗೆ 76 ವರ್ಷ ವಯಸ್ಸು. ಆ ಪ್ರಾಯದಲ್ಲಿ ಅವರು ನಿಧನರಾಗುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಕನಸಿನಲ್ಲಿಯೂ ಯಾರೂ ಅದನ್ನು ಕಲ್ಪಿಸಿಕೊಂಡಿರಲಿಲ್ಲ. ಅಂಥ ಒಂದು ಘಟನೆ ಏ.12ರಂದು ನಡೆದೇಹೋಯಿತು.
ಅಣ್ಣಾವ್ರು ಭೌತಿಕವಾಗಿ ನಮ್ಮನ್ನು ಅಗಲಿದ್ದಾರೆ ಅಷ್ಟೇ. ಆದರೆ ಸಿನಿಮಾಗಳ ಮೂಲಕ ಸದಾ ಅಭಿಮಾನಿಗಳ ಜೊತೆಯಲ್ಲೇ ಅವರಿದ್ದಾರೆ. ಸುಮಧುರ ಕಂಠದ ಹಾಡುಗಳ ಮೂಲಕ ಕೇಳುಗರ ಕಿವಿಗೆ ಇಂಪು ನೀಡುತ್ತಲೇ ಇದ್ದಾರೆ. ಅಪಾರ ಜೀವನ ಮೌಲ್ಯಗಳ ಮೂಲಕ ಇಂದಿಗೂ ಒಬ್ಬ ಮಾರ್ಗದರ್ಶಕನಾಗಿ ನಮ್ಮೊಳಗೆ ನೆಲೆಸಿದ್ದಾರೆ. ನೂರಾರು ಪಾತ್ರಗಳ ಮೂಲಕ ಒಳ್ಳೆಯತನದ ಪಾಠವನ್ನು ಅವರು ಈಗಲೂ ಹೇಳುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಅಣ್ಣಾವ್ರ ಇರುವಿಕೆ ಪ್ರತಿ ದಿನವೂ ಅನುಭವಕ್ಕೆ ಬರುತ್ತದೆ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ.
ಏ.12ರಂದು ಲಕ್ಷಾಂತರ ಜನರು ಅಣ್ಣಾವ್ರ ನೆನಪಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾರೆ. 15 ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ. ಅನ್ನದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣೆ, ನೇತ್ರದಾನ ನೋಂದಣಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಳ್ಳುತ್ತಾರೆ. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಕಳೆದೊಂದು ವರ್ಷದಿಂದ ಈ ಎಲ್ಲ ಕಾರ್ಯಗಳಿಗೆ ಸ್ವಲ್ಪ ಅಡಚಣೆ ಆಗುತ್ತಿದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸಮಾಧಿಗೆ ನಮಸ್ಕರಿಸುವ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಇಂದು ಗೌರವ ಸಲ್ಲಿಸುತ್ತಾರೆ. ರಾಜ್ ಕುಟುಂಬದವರು ಪುಷ್ಪ ನಮನ ಸಲ್ಲಿಸಿ, ಪೂಜೆ ನೆರವೇರಿಸುತ್ತಾರೆ. ಇನ್ನು, ಸೋಶಿಯಲ್ ಮೀಡಿಯಾದಲ್ಲೂ ಡಾ. ರಾಜ್ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ. 15ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಅವರ ಅನೇಕ ವಿಚಾರಗಳನ್ನು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Rajkumar Death Anniversary: ಡಾ. ರಾಜ್ ನಿಧನರಾದ ದಿನ ಆಕಾಶ ನೋಡಿಕೊಂಡು ದೇವರಿಗೆ ಬೈಯ್ದಿದ್ದ ಮೊಮ್ಮಗಳು ಧನ್ಯಾ!
(Rajkumar Death Anniversary Sandalwood pays tribute to legendary actor Dr Rajkumar on his death anniversary)