ರಕ್ಷಕ್ ಬುಲೆಟ್ (Rakshak Bullet) ಅವರು ಈ ಮೊದಲು ‘ಗುರು ಶಿಷ್ಯರು’ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಈಗ ಅವರು ಹೀರೋ ಆಗೋಕೆ ರೆಡಿ ಆಗಿದ್ದಾರೆ. ಬಿಗ್ ಬಾಸ್ನಲ್ಲಿ ಒಂದು ತಿಂಗಳು ಇದ್ದು ಬಂದ ಬಳಿಕ ಸಾಕಷ್ಟು ಸಂದರ್ಶನಗಳಲ್ಲಿ ಅವರು ಮಾತನಾಡಿದ್ದರು. ವಿವಾದಗಳನ್ನು ಕೂಡ ಮಾಡಿಕೊಂಡಿದ್ದರು. ಈಗ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ಸದ್ಯ ‘RB 01’ ಎಂದು ಟೈಟಲ್ ಇಡಲಾಗಿದೆ. ಶೀಘ್ರವೇ ಸಿನಿಮಾದ ಶೀರ್ಷಿಕೆ ಹಾಗೂ ಟೀಸರ್ ಅನಾವರಣ ಮಾಡುವುದಾಗಿ ರಕ್ಷಕ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಟೈಟಲ್ನಲ್ಲಿ ಲಾಂಗ್ ಕಾಣಿಸಿದೆ. ಹೀಗಾಗಿ, ಇದೊಂದು ರೌಡಿಸಂ ಕಥೆ ಇರಬಹುದು ಎಂದು ಅವರ ಫ್ಯಾನ್ಸ್ ಊಹಿಸುತ್ತಿದ್ದಾರೆ. ಗಣಪತಿ ವಿಸರ್ಜನೆಯ ದೃಶ್ಯವೂ ಇದೆ. ಈ ಎಲ್ಲಾ ಕಾರಣದಿಂದ ಸಿನಿಮಾದ ಪೋಸ್ಟರ್ ಕುತೂಹಲ ಮೂಡಿಸಿದೆ. ‘ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜ್ಜಾನ್ ಗಾಡಿಗಳು ಸೌಂಡು ಮಾಡುತ್ತವೆ. ಆದರೆ ಸೌಂಡ್ ಕೇಳ್ತಿದ್ದ ಹಾಗೆ ಇದೇ ಗಾಡಿ ಅಂತ ಹೇಳೋಕೆ ಆಗೋದು ಒಂದನ್ನೇ ಅದುವೇ ಬುಲೆಟ್. ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಸಂದರ್ಶನಗಳಲ್ಲಿ ಆಡಿದ ಮಾತಿನಿಂದ ಹಿಗ್ಗಾ ಮುಗ್ಗಾ ಟ್ರೋಲ್ ಆದ ಬುಲೆಟ್ ಪ್ರಕಾಶ್ ಮಗ ರಕ್ಷಕ್
ಪೋಸ್ಟರ್ ಹಂಚಿಕೊಂಡು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ ರಕ್ಷಕ್. ‘ಎಲ್ಲಾ ನನ್ನ ಆತ್ಮೀಯರೇ, ಇಂದು ನನ್ನ ಪೂಜ್ಯ ತಂದೆ ದಿವಂಗತ ಬುಲೆಟ್ ಪ್ರಕಾಶ್ ಅವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇನೆ. ಇದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕು ಹರಸಿ ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
ಕ್ರಿಶ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಹರಿ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಶ್ರೀಧರ್ ಕಶ್ಯಪ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಉಳಿದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ