
ರಕ್ಷಿತ್ ಶೆಟ್ಟಿ ಅವರ ಖ್ಯಾತಿ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಪರಭಾಷೆಯ ನಟರು ರಕ್ಷಿತ್ ಶೆಟ್ಟಿಯ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ರಕ್ಷಿತ್ ನಟಿಸಿ, ನಿರ್ದೇಶಿಸಿದ್ದ ‘ಉಳಿದವರು ಕಂಡಂತೆ’ ಸಿನಿಮಾ ತಮಿಳಿಗೆ ರಿಮೇಕ್ ಆಗಿತ್ತು. ಜೂನ್ 6ರಂದು ರಕ್ಷಿತ್ ಜನ್ಮದಿನ. ಈ ವಿಶೇಷ ದಿನದಂದು ‘777 ಚಾರ್ಲಿ’ ಟೀಸರ್ ರಿಲೀಸ್ ಆಗುತ್ತಿದೆ. ಪರ ಭಾಷೆಯ ಸ್ಟಾರ್ ನಟರು ಟೀಸರ್ ರಿಲೀಸ್ ಮಾಡುತ್ತಿರುವುದು ವಿಶೇಷ.
‘777 ಚಾರ್ಲಿ’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಹೀಗಾಗಿ, ಟೀಸರ್ ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಟೀಸರ್ ರಿಲೀಸ್ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ತಮಿಳಿನಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಪೃಥ್ವಿರಾಜ್ ಹಸ್ತದಿಂದ ಮಲಯಾಳಂನಲ್ಲಿ ಟೀಸರ್ ಬಿಡುಗಡೆಗೊಳ್ಳಲಿದೆ. ಹಿಂದಿ ಮತ್ತು ಕನ್ನಡ ಟೀಸರ್ಗಳು ಪರಮ್ವಾ ಸ್ಟುಡಿಯೋ ಮೂಲಕ ರಿಲೀಸ್ ಆಗುತ್ತಿದೆ.
ಇನ್ನು, ಮಲಯಾಳಂ ವಲಯದಲ್ಲೂ ‘777 ಚಾರ್ಲಿ’ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಕಾರಣಕ್ಕೆ, ಪೃಥ್ವಿರಾಜ್, ಕುಂಜಾಕ್ಕೊ ಬೋಬನ್, ನಿವೀನ್ ಪೌಲಿ, ಟೊವಿನೋ ಥಾಮಸ್, ಉಣ್ಣಿ ಮುಕುಂದನ್, ಅನ್ನಾ ಬೆನ್, ನಿಖಿಲಾ ವಿಮಲ್, ಆಂಟನಿ ವರ್ಗೀಸ್ ಟೀಸರ್ ಹಂಚಿಕೊಂಡು, ಅದರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಸದ್ಯ, ಈ ವಿಚಾರ ಕೇಳಿದ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ. ಮಲಯಾಳಂ ಖ್ಯಾತ ಗಾಯಕ ವಿನೀಥ್ ಶ್ರೀನಿವಾಸನ್ ಅವರು ‘777 ಚಾರ್ಲಿ’ ಮಲಯಾಳಂ ಮತ್ತು ಕನ್ನಡ ಅವತರಣಿಕೆ ಹಾಡನ್ನು ಹಾಡಿದ್ದಾರೆ.
‘777 ಚಾರ್ಲಿ’ ಸಿನಿಮಾದಲ್ಲಿ ಶ್ವಾನ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಸಿನಿಮಾ ತಂಡದಿಂದ ಸಾಕಷ್ಟು ಪೋಸ್ಟರ್ ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಚಿತ್ರದಲ್ಲಿ ರಕ್ಷಿತ್ ಹಾಗೂ ಶ್ವಾನದ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲಾ ಸಾಧ್ಯತೆ ಇದೆ. 777 ಚಾರ್ಲಿ ತಂಡ ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಳಿಸುವ ಹಂತದಲ್ಲಿದೆ. ಡಬ್ಬಿಂಗ್ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಶೀಘ್ರವೇ ಸಿದ್ಧಗೊಳ್ಳಲಿದೆ. 777 ಚಾರ್ಲಿ ಸಿನಿಮಾಕ್ಕೆ ಸುಮಾರು 160 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಶ್ವಾನದ ಮೂಡ್ ನೋಡಿಕೊಂಡು ಶೂಟ್ ಮಾಡಬೇಕಾದ ಪರಿಸ್ಥಿತಿ ಇದ್ದಿದ್ದರಿಂದ ಶೂಟಿಂಗ್ಗೆ ಹೆಚ್ಚು ದಿನ ಹಿಡಿದಿದೆ.
ಕಿರಣ್ ರಾಜ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಟ್ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಪರಮ್ವಾ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿ ಬರುತ್ತಿದೆ.
ಇದನ್ನೂ ಓದಿ: Rakshit Shetty: ರಕ್ಷಿತ್ ಶೆಟ್ಟಿ ಬರ್ತ್ಡೇಗೆ ಸಿಗುತ್ತಿದೆ ವಿಶೇಷ ಗಿಫ್ಟ್; ಐದು ಭಾಷೆಗಳಲ್ಲಿ 777 ಚಾರ್ಲಿ ಟೀಸರ್
Published On - 3:56 pm, Sat, 5 June 21