‘ಸಪ್ತ ಸಾಗರದಾಚೆ ಎಲ್ಲೋ‘ (Sapta Sagaradache Ello) ಸಿನಿಮಾದ ಸೈಡ್ ಬಿ ಅಥವಾ ಎರಡನೇ ಭಾಗದ ಬಿಡುಗಡೆ ದಿನಾಂಕ ನಿಗದಿಯಾಗಿದ್ದು ಸಿನಿಮಾದ ಟೀಸರ್ ಅನ್ನು ನಿನ್ನೆಯಷ್ಟೆ (ನವೆಂಬರ್ 04) ಚಿತ್ರತಂಡ ಬಿಡುಗಡೆ ಮಾಡಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಭಾಗ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಸೈಡ್ ಬಿ ಅನ್ನು ಕನ್ನಡ, ತೆಲುಗು ಜೊತೆಗೆ ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಹ ಬಿಡುಗಡೆ ಆಗಲಿದೆ. ಆದರೆ ಹಿಂದಿಯಲ್ಲಿ ಬಿಡುಗಡೆ ಮಾಡಲಾಗುತ್ತಿಲ್ಲ. ಅದಕ್ಕೆ ಕಾರಣವೇನು ಎಂಬುದನ್ನು ರಕ್ಷಿತ್ ಶೆಟ್ಟಿ ತಿಳಿಸಿಕೊಟ್ಟಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದೆವು, ಅದಾದ ಬಳಿಕ ತಮಿಳು ಹಾಗೂ ಮಲಯಾಳಂನಿಂದಲೂ ಬೇಡಿಕೆ ಬಂತು. ಆದರೆ ನಾವು ಮೊದಲಿಗೆ ಸಿನಿಮಾವನ್ನು ಒಟಿಟಿಗೆ ನೀಡಿಬಿಟ್ಟಿದ್ದೆವು, ಒಟಿಟಿ ಬಿಡುಗಡೆಗೆ ಒಂದು ವಾರ ಇದ್ದಾಗ ಮಲಯಾಳಂ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಸರಿ ಇರುವುದಿಲ್ಲ ಎನಿಸಿ ಬಿಡುಗಡೆ ಮಾಡಿರಲಿಲ್ಲ. ನಮ್ಮ ಮೊದಲ ಸಿನಿಮಾಕ್ಕೆ ಬೇಡಿಕೆ ಇದ್ದ ಕಾರಣ ಈ ಬಾರಿ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುತ್ತಿದ್ದೇವೆ” ಎಂದರು ಸಿನಿಮಾದ ನಿರ್ಮಾಪಕರೂ ಆಗಿರುವ ರಕ್ಷಿತ್ ಶೆಟ್ಟಿ.
ಈ ಸಿನಿಮಾವನ್ನು ಹಿಂದಿಯಲ್ಲಿ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್ ಶೆಟ್ಟಿ, ‘ಹಿಂದಿ ಮಾರುಕಟ್ಟೆ ಬಹಳ ದೊಡ್ಡದು. ಅದೊಂದು ಸಾಗರದ ರೀತಿ. ನಮ್ಮ ಸಿನಿಮಾಕ್ಕೆ ಒಳ್ಳೆ ಟಾಕ್ ಇದ್ದ ಮಾತ್ರಕ್ಕೆ ಅಲ್ಲಿ ಬಿಡುಗಡೆ ಮಾಡಲು ಆಗುವುದಿಲ್ಲ. ಅಲ್ಲಿ ಸಿನಿಮಾದ ಪ್ರಚಾರಕ್ಕೆ ಸುಮಾರು ನಾಲ್ಕರಿಂದ ಐದು ಕೋಟಿ ಹಣ ಖರ್ಚು ಮಾಡಬೇಕಾಗುತ್ತದೆ. ಆ ನಂತರವೂ ಕೆಲಸ ಹೆಚ್ಚಿದೆ. ಈ ಸದ್ಯಕ್ಕೆ ಆ ಸಾಹಸ ಬೇಡ ಎಂದು ಅನಿಸಿ ಹಿಂದಿಯಲ್ಲಿ ಬಿಡುಗಡೆ ಮಾಡಲಿಲ್ಲ” ಎಂದರು ರಕ್ಷಿತ್ ಶೆಟ್ಟಿ.
ಇದನ್ನೂ ಓದಿ:ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿನಲ್ಲಿ ಬಣ್ಣ ಬದಲಿಸಿ ಕೆಂಪಾದ ಕತೆ
ಇನ್ನು ತಮ್ಮ ಸಿನಿಮಾವನ್ನು ಇತರೆ ಭಾಷೆಗಳಲ್ಲಿ ಯಾರು ವಿತರಣೆ ಮಾಡಲಿದ್ದಾರೆ ಎಂಬ ಬಗ್ಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ, ತಮ್ಮ ಸಿನಿಮಾವನ್ನು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್ ಅವರ ನಿರ್ಮಾಣ ಸಂಸ್ಥೆ ವಿತರಣೆ ಮಾಡುತ್ತಿದೆ ಎಂದರು. ತಮಿಳಿನಲ್ಲಿ ಶಕ್ತಿವೇಲನ್ ವಿತರಣೆ ಮಾಡುತ್ತಿದ್ದಾರೆ. ಹಲವು ದೊಡ್ಡ ಬಜೆಟ್ ಸಿನಿಮಾಗಳ ವಿತರಣೆ ಮಾಡಿರುವ ಅನುಭವ ಉಳ್ಳವರು, ನಮ್ಮ ‘777 ಚಾರ್ಲಿ’ ಸಿನಿಮಾವನ್ನು ವಿತರಣೆ ಮಾಡಿದ್ದು ಅವರೇ. ಇನ್ನು ತೆಲುಗಿನಲ್ಲಿ ಮೊದಲ ಭಾಗ ವಿತರಣೆ ಮಾಡಿದ್ದ ಪೀಪಲ್ ಮೀಡಿಯಾ ಫ್ಯಾಕ್ಟರಿ ಅವರೇ ವಿತರಣೆ ಮಾಡುತ್ತಿದ್ದಾರೆ ಎಂದರು.
‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾವು ನವೆಂಬರ್ 17ಕ್ಕೆ ತೆರೆಗೆ ಬರಲಿದೆ. ಸಿನಿಮಾವನ್ನು ನಿರ್ದೇಶಕ ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ಮೊದಲ ಭಾಗದಲ್ಲಿ ಮಾಡದ ತಪ್ಪಿಗೆ ಜೈಲು ಪಾಲಾಗಿದ್ದ ಮನು ಅಲಿಯಾಸ್ ರಕ್ಷಿತ್ ಶೆಟ್ಟಿ, ಸೈಡ್ ಬಿ ನಲ್ಲಿ ಜೈಲಿನಿಂದ ಹೊರಬಂದಿದ್ದಾನೆ. ಸೈಡ್ ಎ ಪ್ರೇಮದ ಕತೆಯಾದರೆ ಸೈಡ್ ಬಿ ದ್ವೇಷದ ಕತೆ ಎಂದು ಹೇಳಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ