ಟಾಲಿವುಡ್ ನಟ ರಾಮ್ ಚರಣ್ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನಿಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ನಂತರ ಮಾತನಾಡಿದ ಅವರು, ‘‘ಪುನೀತ್ ರಾಜ್‌ಕುಮಾರ್ ನಿಧನ ಅತಿ ದೊಡ್ಡ ನಷ್ಟ. ನಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಈಗಲೂ ಪುನೀತ್ ನಿಧನದ ಸುದ್ದಿ ನಂಬುವುದಕ್ಕೆ ಆಗುತ್ತಿಲ್ಲ. ನಮ್ಮ ಮನೆಗೆ ಬಂದಾಗ ತುಂಬಾ ಆತ್ಮೀಯವಾಗಿ ಇರುತ್ತಿದ್ದರು. ನಾವು ಅವರಿಗೆ ಗೆಸ್ಟ್ ಅನ್ನುವಂತೆ ನಮ್ಮ ಜತೆ ಇರುತ್ತಿದ್ದರು. ಮಾನವೀಯ ಮೌಲ್ಯಗಳನ್ನು ಪುನೀತ್ರಿಂದ ಕಲಿಯಬೇಕು. ವಿ ಲವ್ ಯು ಪುನೀತ್ ರಾಜ್‌ಕುಮಾರ್’’ ಎಂದು ರಾಮ್ ಚರಣ್ ನುಡಿದಿದ್ಧಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಸಂತಾಪ ಸೂಚಿಸಿದ್ಧಾರೆ. ರಾಮ್ ಚರಣ್ ಶಿವರಾಜ್ ಕುಮಾರ್ ಅವರ ನಿವಾಸಕ್ಕೂ ತೆರಳಿ, ಸಾಂತ್ವನ ಹೇಳಿದ್ಧಾರೆ.
ಪುನೀತ್ ನಿಧನಕ್ಕೆ ಟಾಲಿವುಡ್ ಚಿತ್ರರಂಗ ಶೋಕ ವ್ಯಕ್ತಪಡಿಸಿತ್ತು. ಹಲವು ನಟರು ಆಗಮಿಸಿ, ಅಂತಿಮ ದರ್ಶನ ಪಡೆದಿದ್ದರು. ನಿನ್ನೆ (ಅಕ್ಟೋಬರ್ 02) ನಾಗಾರ್ಜುನ ಆಗಮಿಸಿ, ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಚಿರಂಜೀವಿ, ಅಲಿ, ಜ್ಯೋ.ಎನ್ಟಿಆರ್, ಪ್ರಭುದೇವ, ನಂದಮೂರಿ ಬಾಲಕೃಷ್ಣ ಮೊದಲಾದವರು ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ದರು. ರಾಮ್ ಚರಣ್ ತಂದೆ ಚಿರಂಜೀವಿ ಕೂಡ ಪುನೀತ್ ಜೊತೆಗಿನ ನೆನಪುಗಳನ್ನು ಹಾಗೂ ಡಾ.ರಾಜ್ ಕುಟುಂಬದ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದರು.
‘‘ರಾಜ್‌ಕುಮಾರ್ ಕುಟುಂಬ ಎಲ್ಲ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರು. ಪುನೀತ್ ಅಕಾಲಿಕ ನಿಧನ ಬಹಳ ಅನ್ಯಾಯ. ಒಪ್ಪಿಕೊಳ್ಳಲು ಕಷ್ಟಕರವಾಗಿದೆ. ಭಗವಂತ ಪುನೀತ್ಗೆ ಅನ್ಯಾಯ ಮಾಡಿದ್ದಾರೆ. ಆ ದೇವರೇ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಬೇಕು. ಬೆಂಗಳೂರಿಗೆ ಯಾವಾಗ ಬಂದರೂ ಅವರನ್ನ ಭೇಟಿಯಾಗುತ್ತಿದ್ದೆ. ಡಾ.ರಾಜ್‌ಕುಮಾರ್ ಇದ್ದಾಗ ಅವರ ಮನೆಗೆ ಹೋಗುತ್ತಿದ್ದೆ. ಅವರ ಕುಟುಂಬಸ್ಥರ ಜತೆ ಯಾವಾಗಲೂ ಮಾತನಾಡುತ್ತಿದ್ದೆ. ಇತ್ತೀಚೆಗೆ ಪುನೀತ್, ಶಿವರಾಜ್‌ಕುಮಾರ್‌ರನ್ನು ಭೇಟಿಯಾಗಿದ್ದೆ. ಪುನೀತ್ ಬಹಳ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಪುನೀತ್ ಆತ್ಮಕ್ಕೆ ಶಾಂತಿ ನೀಡುವಂತೆ ಪ್ರಾರ್ಥನೆ ಮಾಡುತ್ತೇನೆ’’ ಎಂದು ಚಿರಂಜೀವಿ ಸಂತಾಪ ಸೂಚಿಸಿದ್ದರು.
ಇದನ್ನೂ ಓದಿ:
Puneeth Rajkumar: ನವೆಂಬರ್ 16ಕ್ಕೆ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ; ಚಿತ್ರರಂಗದವರಿಗೆ ಮಾತ್ರ ಪ್ರವೇಶ
Published On - 12:26 pm, Wed, 3 November 21