ರಾಮ್ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿ (Ramachari Serial) ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ರಿತ್ವಿಕ್ ಕೃಪಾಕರ್, ಮೌನ ಮೊದಲಾದವರು ನಟಿಸಿದ್ದಾರೆ. ರಿತ್ವಿಕ್ ಅವರು ರಾಮಾಚಾರಿ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ರಾಮಾಚಾರಿ ಸಹೋದರಿಯ ಪಾತ್ರದಲ್ಲಿ ರಾಧಾ ಭಗವತಿ (Radha Bhagavathi) ನಟಿಸುತ್ತಿದ್ದಾರೆ. ಈಗ ಅವರು ದೊಡ್ಡ ಪರದೆಗೆ ಕಾಲಿಡೋಕೆ ರೆಡಿ ಆಗಿದ್ದಾರೆ. ಅವರು ನಟಿಸುತ್ತಿರುವ ಸಿನಿಮಾ ಹೆಸರು ‘ವಸಂತಕಾಲದ ಹೂಗಳು’. ಈ ಚಿತ್ರಕ್ಕೆ ಸಚಿನ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.
ಧಾರಾವಾಹಿಗೂ ಚಿತ್ರರಂಗಕ್ಕೂ ಒಳ್ಳೆಯ ನಂಟಿದೆ. ಚಿತ್ರರಂಗದಲ್ಲಿ ಗುರುತಿಸಿಕೊಂಡ ಬಳಿಕ ಅನೇಕರು ಕಿರುತೆರೆಗೆ ಮರಳುತ್ತಾರೆ. ಅದೇ ರೀತಿ, ಕಿರುತೆರೆಯಲ್ಲಿ ನಟಿಸಿದ ಬಳಿಕ ಅನೇಕರು ಹಿರಿತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ. ಈಗ ರಾಧಾ ಭಗವತಿ ಅವರು ಸಿನಿಮಾಗೆ ನಾಯಕಿ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಅವರಿಗೆ ಅಭಿಮಾನಿಗಳು ಶುಭಕೋರಿದ್ದಾರೆ.
ಶೀರ್ಷಿಕೆಯೇ ಹೇಳುವಂತೆ ‘ವಸಂತಕಾಲದ ಹೂಗಳು’ ಸಿನಿಮಾದಲ್ಲಿ ಟೀನೇಜ್ ಕಥೆಯಿದೆ. ರಾಧಾ ಭಗವತಿ ಬಿಜಾಪುರ ಮೂಲದವರು. ರಾಧಾ ಅವರು ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕೆ ಅವರು ಸೂಕ್ತ ಎನ್ನುವ ಕಾರಣಕ್ಕೆ ನಿರ್ದೇಶಕರು ರಾಧಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
‘ಸಿನಿಮಾ ಶೀರ್ಷಿಕೆ ಆಪ್ತವೆನಿಸಿತು. ಸಿನಿಮಾದ ಕಥೆ ಕೇಳಿದಾಗ ಮೂರು ನಾಲ್ಕು ದಿನ ಅದೇ ಗುಂಗಿನಲ್ಲಿ ಇದ್ದೆ. ಈ ಸಿನಿಮಾ ನೋಡಿದವರಿಗೆ ಕಾಲೇಜು ದಿನಗಳು ನೆನಪಾಗುತ್ತವೆ. ಈ ಚಿತ್ರದಲ್ಲಿ ನಟನೆಗೆ ಹೆಚ್ಚು ಅವಕಾಶ ಇದೆ. ಇಂಥ ಪಾತ್ರ ಸಿಕ್ಕಿದ್ದಕ್ಕೆ ಖುಷಿ ಇದೆ. ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾತುರದಿಂದ ಕಾಯುತ್ತಿದ್ದೇನೆ’ ಎಂದು ಸಂತೋಷ ಹಂಚಿಕೊಂಡಿದ್ದಾರೆ ರಾಧಾ ಭಗವತಿ.
ಇದನ್ನೂ ಓದಿ: ಮತ್ತೆ ತೆರೆ ಮೇಲೆ ಬರಲಿದೆ ಮಾರ್ಗರೇಟ್-ರಾಮಾಚಾರಿಯ ಪ್ರೇಮಕತೆ: ಡಾಲಿಯಿಂದ ಶುಭ ಹಾರೈಕೆ
‘ವಸಂತಕಾಲದ ಹೂಗಳು’ ಸಿನಿಮಾನ ಅಶೋಕ್ ರಾಥೋಡ್ ಹಾಗೂ ಸಿದ್ದು ರಸುರೆ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಪಡೆದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ