
ಯಶ್, ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ವಿಶ್ವದಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಇದೊಂದು ಮೂಲತಃ ಬಾಲಿವುಡ್ ಸಿನಿಮಾ ಆಗಿದ್ದರೂ ಸಹ ದಕ್ಷಿಣ ಭಾರತದಲ್ಲಿ ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಸಿನಿಮಾಗಳು ದಕ್ಷಿಣದ ರಾಜ್ಯಗಳಲ್ಲಿ ಚೆನ್ನಾಗಿ ಓಡುವುದು ಕಡಿಮೆ ಆದರೆ ‘ರಾಮಾಯಣ’ ಸಿನಿಮಾ, ಇದಕ್ಕೆ ವ್ಯತಿರಿಕ್ತ. ಇದೀಗ ‘ರಾಮಾಯಣ’ ಸಿನಿಮಾವು ಕರ್ನಾಟಕದಲ್ಲಿ ದಾಖಲೆ ಬರೆದಿದೆ. ‘ರಾಮಾಯಣ’ ಸಿನಿಮಾ ಕರ್ನಾಟಕದ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಗಳಿಕೆ ಮಾಡಿದೆ.
ಕರ್ನಾಟದಲ್ಲಿ ಸಿನಿಮಾಗಳು 100 ಕೋಟಿ ಗಳಿಕೆ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ಬಾಲಿವುಡ್ ಸಿನಿಮಾ ಒಂದು ಕರ್ನಾಟಕದಲ್ಲಿ 100 ಕೋಟಿ ಹಣ ಗಳಿಕೆ ಮಾಡುವುದು ಅಪರೂಪದಲ್ಲಿ ಅಪರೂಪ. ‘ಧುರಂಧರ್ 2’ ಸಿನಿಮಾ ಕರ್ನಾಟಕದಲ್ಲಿ 100 ಕೋಟಿ ಗಳಿಸಿತ್ತು. ಅದರ ಹೊರತು ಇದೀಗ ‘ರಾಮಾಯಣ’ ಸಿನಿಮಾ ಕರ್ನಾಟಕದಲ್ಲಿ 100 ಕೋಟಿ ಗಳಿಕೆ ಮಾಡಿದೆ ಅದೂ ಕೇವಲ ಎಂಟು ದಿನಗಳಲ್ಲಿ.
‘ರಾಮಾಯಣ’ ಸಿನಿಮಾ ಕರ್ನಾಟಕದಲ್ಲಿ ಇಷ್ಟು ಅದ್ಭುತ ಪ್ರದರ್ಶನ ಕಾಣುತ್ತಿರುವುದಕ್ಕೆ ಪ್ರಮುಖ ಕಾರಣ ಯಶ್. ಕನ್ನಡದ ನಟ ಯಶ್ ಅವರ ಕಾರಣಕ್ಕೆ ‘ರಾಮಾಯಣ’ ಸಿನಿಮಾವನ್ನು ಹೆಚ್ಚು ಜನ ವೀಕ್ಷಣೆ ಮಾಡುತ್ತಿದ್ದಾರೆ. ಜೊತೆಗೆ ಸಿನಿಮಾ ಸಹ ಉತ್ತಮ ಗುಣಮಟ್ಟದ್ದಾಗಿರುವ ಕಾರಣ ಹೆಚ್ಚಿನ ಮಂದಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಧಾವಿಸುತ್ತಿದ್ದಾರೆ. ಕರ್ನಾಟಕದಲ್ಲಿ ‘ರಾಮಾಯಣ’ ಸಿನಿಮಾವು ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದೆ. ದೊಡ್ಡ ಸಂಖ್ಯೆಯ ಸ್ಕ್ರೀನ್ಗಳು ‘ರಾಮಾಯಣ’ ಸಿನಿಮಾಕ್ಕೆ ಕರ್ನಾಟಕದಲ್ಲಿ ದೊರಕಿವೆ. ಕರ್ನಾಟಕದಲ್ಲಿ ‘ರಾಮಾಯಣ’ ಸಿನಿಮಾದ ವಿತರಣೆಯನ್ನು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಸಂಸ್ಥೆಯೇ ಮಾಡಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:‘ರಾಮಾಯಣ’ದಲ್ಲಿ ಸೀತೆ ಆ್ಯಕ್ಷನ್ ದೃಶ್ಯ ಮಾಡಿದ್ದನ್ನು ಸಮರ್ಥಿಸಿಕೊಂಡ ಲಾರಾ ದತ್ತ
ಕರ್ನಾಟಕದಲ್ಲಿ ಪರ ಭಾಷೆ ಸಿನಿಮಾಗಳು 100 ಕೋಟಿ ಗಳಿಕೆ ಮಾಡಿರುವುದು ಬಹಳ ಕಡಿಮೆ. ‘ಬಾಹುಬಲಿ 2’, ‘ಪುಷ್ಪ 2’, ‘ಆರ್ಆರ್ಆರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಕರ್ನಾಟಕದಲ್ಲಿ 100 ಕೋಟಿ ಗಳಿಸಿದ ಇತರೆ ಭಾಷೆ ಸಿನಿಮಾಗಳಾಗಿವೆ. ಇದೀಗ ಈ ಪಟ್ಟಿಗೆ ‘ರಾಮಾಯಣ’ ಸಿನಿಮಾ ಸಹ ಸೇರಿದ್ದು, ಈ ಎಲ್ಲ ಸಿನಿಮಾಗಳಿಗಿಂತಲೂ ವೇಗವಾಗಿ 100 ಕೋಟಿ ಗಳಿಕೆಯನ್ನು ದಾಟಿದೆ. ‘ಕೆಜಿಎಫ್’, ‘ಕಾಂತಾರ’, ‘ಕಾಂತಾರ 1’, ‘ಕೆಜಿಎಫ್ 2’, ‘ಪ್ರೇಮದ ಊರಲಿ’, ‘ಸು ಫ್ರಂ ಸೋ’, ‘ಕಾಟೇರ’ ಸಿನಿಮಾಗಳು ಕರ್ನಾಟಕದಲ್ಲಿ 100 ಕೋಟಿ ಗಳಿಕೆ ಮಾಡಿರುವ ಕನ್ನಡದ ಸಿನಿಮಾಗಳಾಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ