‘ರಾಮಾಯಣ’ ಸಿನಿಮಾ ಶೂಟಿಂಗ್ ಸಮಯದಲ್ಲಿ ಕಣ್ಣೀರು ಹಾಕಿದ್ದ ಸಾಯಿ ಪಲ್ಲವಿ
‘ರಾಮಾಯಣ’ ಸಿನಿಮಾನಲ್ಲಿ ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟನೆ ಮಾಡಿದ್ದು, ಸಿನಿಮಾ ನೋಡಿದ ಹಲವು ಸೆಲೆಬ್ರಿಟಿಗಳು ಸಾಯಿ ಪಲ್ಲವಿಯ ನಟನೆಯನ್ನು ಕೊಂಡಾಡಿದ್ದಾರೆ. ಸಾಯಿ ಪಲ್ಲವಿ ಸಹ ತಾವು ಬಹಳ ಡೆಡಿಕೇಟೆಡ್ ಆಗಿ ನಿರ್ವಹಿಸಿದ ಪಾತ್ರ ಇದೆಂದು ಹೇಳಿಕೊಂಡಿದ್ದು, ಜೊತೆಗೆ ತಾವು ಚಿತ್ರೀಕರಣದ ಸಮಯದಲ್ಲಿ ಕಣ್ಣೀರು ಹಾಕಿದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.

ಮುಖ್ಯಾಂಶಗಳು
- ‘ರಾಮಾಯಣ’ ಸಿನಿಮಾನಲ್ಲಿ ಸಾಯಿ ಪಲ್ಲವಿ ಪಾತ್ರ
- ಚಿತ್ರೀಕರಣದ ಸಂದರ್ಭದ ಭಾವುಕ ಸನ್ನಿವೇಶ ಸ್ಮರಿಸಿದ ನಟಿ
- ನಟಿಯ ಕಾಲಿಗೆ ನಮಸ್ಕರಿಸಿದ ತರಬೇತುದಾರರು
‘ರಾಮಾಯಣ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೇವಲ ಎಂಟು ದಿನಗಳಲ್ಲಿ ಸಿನಿಮಾ 1000 ಕೋಟಿ ಗಳಿಕೆಯ ಗಡಿಯನ್ನು ದಾಟಿ ಆಗಿದೆ. ಈ ಸಿನಿಮಾ ಪಕ್ಕಾ 2000 ಕೋಟಿ ಗಳಿಕೆ ದಾಟಲಿದೆ ಎನ್ನಲಾಗುತ್ತಿದೆ. ಸಿನಿಮಾದ ಗುಣಮಟ್ಟ, ಪಾತ್ರಧಾರಿಗಳ ನಟನೆಯ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟನೆ ಮಾಡಿದ್ದು, ಸಿನಿಮಾ ನೋಡಿದ ಹಲವು ಸೆಲೆಬ್ರಿಟಿಗಳು ಸಾಯಿ ಪಲ್ಲವಿಯ ನಟನೆಯನ್ನು ಕೊಂಡಾಡಿದ್ದಾರೆ. ಸಾಯಿ ಪಲ್ಲವಿ ಸಹ ತಾವು ಬಹಳ ಡೆಡಿಕೇಟೆಡ್ ಆಗಿ ನಿರ್ವಹಿಸಿದ ಪಾತ್ರ ಇದೆಂದು ಹೇಳಿಕೊಂಡಿದ್ದು, ಜೊತೆಗೆ ತಾವು ಚಿತ್ರೀಕರಣದ ಸಮಯದಲ್ಲಿ ಕಣ್ಣೀರು ಹಾಕಿದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಟಿ ಸಾಯಿ ಪಲ್ಲವಿ, ಚಿತ್ರದ ಸೆಟ್‌ನಲ್ಲಿ ನಡೆದ ಭಾವುಕ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ಸೀತಾ ಮಾತೆಯ ಪಾತ್ರದಲ್ಲಿ ನಟಿಸಿದ ಬಳಿಕ ತಮ್ಮ ಡಬ್ಬಿಂಗ್ ಸಂದರ್ಭದಲ್ಲಿ ಮಾತಿನ ಶೈಲಿಯ ತರಬೇತುದಾರರು (ಡಯಲೆಕ್ಟ್ ಕೋಚ್) ತಮ್ಮ ಪಾದಗಳನ್ನು ಸ್ಪರ್ಶಿಸಿದ್ದು, ಆ ಸಂದರ್ಭದಲ್ಲಿ ತಾವು ಕಣ್ಣೀರಿಟ್ಟಿದ್ದಾಗಿ ಅವರು ನೆನಪು ಮಾಡಿಕೊಂಡಿದ್ದಾರೆ.
‘ನನಗೆ ಸ್ವಲ್ಪ ಭಾವನಾತ್ಮಕವಾಗಿ ಅತಿಯೆನಿಸಿದ ಕ್ಷಣವೆಂದರೆ, ಒಂದು ದೃಶ್ಯದ ನಂತರ ನನ್ನ ಡಯಲೆಕ್ಟ್ ಕೋಚ್ ಬಂದು ನನ್ನ ಪಾದಗಳನ್ನು ಸ್ಪರ್ಶಿಸಿದರು. ನಾನು ಫೋನ್ ಕರೆಗಳಲ್ಲಿರುವುದನ್ನು, ಸಿದ್ಧವಾಗುವುದನ್ನು ಮತ್ತು ಎಲ್ಲವನ್ನೂ ಅವರು ಹತ್ತಿರದಿಂದ ನೋಡಿದ್ದರಿಂದ ನನಗೆ ಆಶ್ಚರ್ಯವಾಯಿತು. ನಾನು ಸಾಯಿ ಪಲ್ಲವಿ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ ನಾವು ಪ್ರತಿದಿನ ಪೂಜಿಸುವ, ತಾಯಿಯಂತೆ ಭಾವಿಸುವ ಪಾತ್ರವನ್ನು ಮಾಡುವಾಗ ಮತ್ತು ಯಾರಾದರೂ ಅದನ್ನು ಸಾಕಾರಗೊಳಿಸಿದಾಗ, ಅದು ನಟಿಯೋ ಅಥವಾ ಇನ್ನೊಬ್ಬ ಮಾನವೀಯೋ ಎಂಬೆಲ್ಲಾ ಯೋಚನೆಗಳು ಬರುವುದಿಲ್ಲ. ನಿಮಗೆ ಆ ಸಮಯದಲ್ಲಿ ಕೇವಲ ಆ ಪ್ರೀತಿ ಮಾತ್ರ ಬೇಕಾಗುತ್ತದೆ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
ಇದನ್ನೂ ಓದಿ:‘ರಾಮಾಯಣ’ ಹೊಸ ದಾಖಲೆ; 2 ಸಾವಿರ ಕೋಟಿ ಮೇಲೆ ಕಣ್ಣಿಟ್ಟ ಯಶ್ ಚಿತ್ರ
ಮಾತು ಮುಂದುವರೆಸಿದ ನಟಿ, ‘ಅವರು ಹಾಗೆ ಮಾಡಿದಾಗ, ನನಗೆ ಕಣ್ಣೀರು ಬಂದು ಬಿಟ್ಟಿತು. ‘ನೀವು ಏನು ಮಾಡುತ್ತಿದ್ದೀರಿ?’ ಎಂದು ನಾನು ಕೇಳಿದೆ. ಅವರೂ ಸಹ ಭಾವುಕರಾಗಿಬಿಟ್ಟಿದ್ದರು. ಹೀಗಾಗಿ ಆ ಕ್ಷಣವು ಈ ಪಾತ್ರವು ಅನೇಕ ಜನರೊಂದಿಗೆ ಎಷ್ಟು ಆಳವಾಗಿ ಮಾತನಾಡುತ್ತದೆ ಎಂಬುದನ್ನು ನನಗೆ ಅನುಭವಿಸಿಕೊಟ್ಟಿತು. ಅಂತಹ ಅಪಾರ ಪ್ರಮಾಣದ ಪ್ರೀತಿಯನ್ನು ಅನುಭವಿಸಿ ನಾನು ಅತ್ಯಂತ ವಿನಮ್ರಳಾದೆ ಮತ್ತು ಭಾವುಕಳಾದೆ’ ಎಂದಿದ್ದಾರೆ.
ರವಿ ದುಬೆ ಮತ್ತು ರಣಬೀರ್ ಕಪೂರ್ ಅವರೊಂದಿಗೆ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ಸಾಯಿ ಪಲ್ಲವಿ ಸೀತಾ ಮಾತೆ ಪಾತ್ರದಲ್ಲಿ ನಟಿಸುವುದರ ಕುರಿತು ಮಾತನಾಡಿದ್ದರು. ‘ಈ ಪಾತ್ರವನ್ನು ನಿರ್ವಹಿಸುವಾಗ ನಾನು ನನ್ನ ಬುದ್ಧಿಯನ್ನು ಬಳಸಲು ಬಯಸಲಿಲ್ಲ. ನಾನು ಯಾವುದೇ ಪಾತ್ರ ಮಾಡಿದಾಗಲೆಲ್ಲಾ, ಆ ಪಾತ್ರಕ್ಕೆ ನಾನು ಏನು ನೀಡಬಲ್ಲೆ ಎಂದು ಯೋಚಿಸುತ್ತೇನೆ. ಆದರೆ ಸೀತಾ ಮಾತೆ ಯಂತಹ ಪಾತ್ರವನ್ನು ನಿರ್ವಹಿಸುವುದರಿಂದ ನನಗೆ ಏನು ಸಿಗಬಹುದು? ಇದರಿಂದ ನನಗೆ ಯಾವ ಜ್ಞಾನ ಸಿಗುತ್ತದೆ? ಎಂದು ನಾನು ಯೋಚಿಸಿದ್ದು ಇದೇ ಮೊದಲ ಬಾರಿ. ಹಾಗಾಗಿ ಈ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿಡಲು ನಾನು ಬಯಸಿದ್ದೆ. ಸೀತಾ ಮಾತೆಯನ್ನು ಪ್ರಾರ್ಥಿಸಿ ನಾನು ಮುಂದೆ ಸಾಗಿದೆ’ ಎಂದು ಅವರು ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




