ಆರು ಕ್ಷೇತ್ರದ ಆಫರ್ ಕೊಟ್ಟ ಕಾಂಗ್ರೆಸ್, ಬಿಜೆಪಿ-ಜೆಡಿಎಸ್​ನಿಂದಲೂ ರಮ್ಯಾಗೆ ಬುಲಾವ್

|

Updated on: Apr 22, 2023 | 4:12 PM

Ramya: ಸ್ಟಾರ್ ಪ್ರಚಾರಕಿಯಾಗಿ ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ ರಮ್ಯಾ. ಅಲ್ಲದೆ ಇದೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ರಾಜ್ಯದ ಮೂರು ಪ್ರಮುಖ ಪಕ್ಷಗಳು ಟಿಕೆಟ್ ಆಫರ್ ನೀಡಿದ್ದವು ಎಂಬ ಗುಟ್ಟು ರಟ್ಟು ಮಾಡಿದ್ದಾರೆ ನಟಿ.

ಆರು ಕ್ಷೇತ್ರದ ಆಫರ್ ಕೊಟ್ಟ ಕಾಂಗ್ರೆಸ್, ಬಿಜೆಪಿ-ಜೆಡಿಎಸ್​ನಿಂದಲೂ ರಮ್ಯಾಗೆ ಬುಲಾವ್
ರಮ್ಯಾ
Follow us on

ನಟಿ ರಮ್ಯಾ (Ramya) ಚಿತ್ರರಂಗಕ್ಕೆ ರೀ ಎಂಟ್ರಿ ನೀಡುತ್ತಿರುವ ಜೊತೆಗೆ ರಾಜಕೀಯಕ್ಕೂ (Politics) ರೀ ಎಂಟ್ರಿ ನೀಡುತ್ತಿದ್ದಾರೆ. ಈ ಹಿಂದೆ ಸಂಸದೆಯಾಗಿ ಆ ನಂತರ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ (Social Media) ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿದ ರಮ್ಯಾ 2019 ರ ಚುನಾವಣೆ ಬಳಿಕ ಕಾಂಗ್ರೆಸ್ (Congress) ಹಾಗೂ ಒಟ್ಟಾರೆ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ ಇದೀಗ ಮತ್ತೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದು, ಈ ವಿಧಾನಸಭೆ ಚುನಾವಣೆಯಲ್ಲಿ ತಾರಾ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಇದು ರಮ್ಯಾ ಅವರ ರಾಜಕೀಯ ರೀ ಎಂಟ್ರಿ ಎಂದೇ ಹೇಳಲಾಗುತ್ತಿದೆ. ಇದರ ನಡುವೆ ಇಂಗ್ಲೀಷ್ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಮ್ಯಾ, ತಮಗೆ ಕರ್ನಾಟಕದ ಮೂರು ಪ್ರಮುಖ ಪಕ್ಷಗಳಿಂದ ಆಫರ್ ಬಂದಿತ್ತು ಎಂಬ ಗುಟ್ಟು ರಟ್ಟು ಮಾಡಿದ್ದಾರೆ.

ಕಾಂಗ್ರೆಸ್​ಗೆ ಸ್ಟಾರ್ ಪ್ರಚಾರಕಿ ಮಾತ್ರವಲ್ಲ ಕಾಂಗ್ರೆಸ್ ರಮ್ಯಾಗೆ ಟಿಕೆಟ್ ಸಹ ಆಫರ್ ಮಾಡಿತ್ತು ಅಲ್ಲದೆ ಬರೋಬ್ಬರಿ ಆರು ಕ್ಷೇತ್ರದ ಆಯ್ಕೆಯನ್ನು ನೀಡಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿತ್ತೆಂದು ಸ್ವತಃ ರಮ್ಯಾ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಾತ್ರವೇ ಅಲ್ಲದೆ ಬಿಜೆಪಿಯಿಂದಲೂ ಟಾಪ್ ಹಂತದ ವ್ಯಕ್ತಿಯೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದರು. ಸಚಿವೆ ಮಾಡುವ ಆಫರ್ ಅನ್ನು ಸಹ ನೀಡಿತು. ನಾನು ಕೆಲವು ಬಾರಿ ಕಾಂಗ್ರೆಸ್​ನ ಕೆಲವು ನಡೆಗಳನ್ನು ಟೀಕಿಸಿದ್ದಾಗ, ನನಗೂ ಕಾಂಗ್ರೆಸ್​ಗೂ ಭಿನ್ನಮತ ಇದೆ ಎಂದು ಅವರು ಭಾವಿಸಿದ್ದರು ಹಾಗಾಗಿ ಅವರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದರು ಎಂದಿದ್ದಾರೆ ರಮ್ಯಾ.

ಮುಂದುವರೆದು, ಜೆಡಿಎಸ್ ಪಕ್ಷದಿಂದಲೂ ಒಂದು ಬಗೆಯ ಆಫರ್ ಬಂದಿತ್ತು ಎಂದಿರುವ ರಮ್ಯಾ, ಕುಮಾರಸ್ವಾಮಿ ಹಾಗೂ ನಾನೂ ಆಕಸ್ಮಿಕವಾಗಿ ಸೆಲೂನ್ ಒಂದರಲ್ಲಿ ಭೇಟಿಯಾದೆವು. ಪ್ರೀತಿಯಿಂದ ಮಾತನಾಡಿದ ಕುಮಾರಸ್ವಾಮಿ ಅವರು ರಾಜಕೀಯದ ಬಗ್ಗೆ ಮಾತನಾಡುತ್ತಾ, ನೀವು ರಾಜಕೀಯದಿಂದ ದೂರ ಇರಬಾರದು, ನಿಮಗೆ ಶಕ್ತಿ ಇದೆ, ಬುದ್ಧಿ ಇದೆ ನೀವು ಹೀಗೆ ಸುಮ್ಮನೆ ಕೂರುವುದು ಸರಿಯಲ್ಲ ಎಂಬಿತ್ಯಾದಿ ಮಾತುಗಳನ್ನು ಆಡಿದರು. ಒಟ್ಟಾರೆಯಾಗಿ ಅವರು ನಾನು ರಾಜಕೀಯದಿಂದ ದೂರ ಇರಬಾರದು ಎಂಬುದನ್ನೇ ಒತ್ತಿ ಹೇಳಿದರು ಎಂದಿದ್ದಾರೆ ರಮ್ಯಾ.

ಇದನ್ನೂ ಓದಿ:Ramya: ಮುನಿಸುಗಳಿಗೆ ಗುಡ್ ಬೈ, ಯಾವ ನಟರ ಬಗ್ಗೆ ಏನಂದರು ರಮ್ಯಾ?

ನೀವೇಕೆ ಟಿಕೆಟ್ ಪಡೆದು ಎಲೆಕ್ಷನ್​ಗೆ ಸ್ಪರ್ಧಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಚುನಾವಣಾ ರಾಜಕೀಯಕ್ಕೆ ಹೆಚ್ಚಿನ ತೊಡಗಿಕೊಳ್ಳುವಿಕೆ ಬೇಕು, ನಮ್ಮ ಸಂಪೂರ್ಣ ಸಮಯವನ್ನು ಹೂಡಿಕೆ ಮಾಡಬೇಕು, ಗ್ರೌಂಡ್​ನಲ್ಲಿಯೇ ಇದ್ದು ಕೆಲಸ ಬೇಕು ಅದಕ್ಕೆಲ್ಲ ಬಹಳ ಶ್ರಮ ಬೇಕು. ಈಗಿನನ್ನೂ ನಾನು ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದೇನೆ, ಅಲ್ಲದೆ ನಾನು ನನ್ನ ಸಂಪೂರ್ಣ ಸಮಯವನ್ನು ಈ ಹಂತದಲ್ಲಿ ರಾಜಕೀಯಕ್ಕೆ ನೀಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಟಿಕೆಟ್ ಆಫರ್ ಅನ್ನು ನಿರಾಕರಿಸಿದೆ ಎಂದಿದ್ದಾರೆ ರಮ್ಯಾ.

ಈಗ ಹಠಾತ್ತನೆ ಕಾಂಗ್ರೆಸ್​ ಪರವಾಗಿ ಪ್ರಚಾರ ಮಾಡಲು ಕಾರಣವೇನು? ಎಂಬುದಕ್ಕೆ ಉತ್ತರಿಸಿದ ರಮ್ಯಾ, ನಾನು ಕಾಂಗ್ರೆಸ್​ನಿಂದ ದೂರಾಗಿಲ್ಲ. ಕೆಲವು ವಿಷಯಗಳ ಬಗ್ಗೆ ಕೆಲವು ನಾಯಕರ ನಿರ್ದಿಷ್ಟ ಹೇಳಿಕೆಗಳ ಬಗ್ಗೆ ಅಂತೃಪ್ತಿ ವ್ಯಕ್ತಪಡಿಸಿದ್ದೆ ಅಷ್ಟೆ. ಅಲ್ಲದೆ ಈ ಬಾರಿ ಕೆಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲಾ ಅವರುಗಳು ನನ್ನನ್ನು ಸಂಪರ್ಕಿಸಿ ಪ್ರಚಾರ ಮಾಡುವಂತೆ ಕೇಳಿದರು. ನಾನು ಸಹ ಒಪ್ಪಿಕೊಂಡೆ. ಪ್ರಚಾರ ಮಾಡಿ ಯಾರನ್ನಾದರೂ ಗೆಲ್ಲಿಸಲು ಸಾಧ್ಯವಾಯಿತೆಂದರೆ ಅದು ನನ್ನ ಪರವಾಗಿ ಮಾಡಿದ ಸೇವೆ ಎಂದು ಭಾವಿಸುತ್ತೇನೆ ಎಂದಿದ್ದಾರೆ ರಮ್ಯಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ