ರಾಜ್ಯದಲ್ಲಿ ಚುನಾವಣೆ ಬಿಸಿ ಏರಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಬೇಸಿಗೆಯ ಬಿಸಿನಲ್ಲಿ ಜೋರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಪ್ರಚಾರಕ್ಕೆ ಸಿನಿಮಾ ತಾರೆಯನ್ನು ಸಹ ಅಭ್ಯರ್ಥಿಗಳು ಕರೆ ತರುತ್ತಿದ್ದಾರೆ. ನಟ ಸುದೀಪ್ (Sudeep) ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ನಟಿ ಪ್ರೇಮಾ, ಶ್ರುತಿ ಅವರುಗಳು ಸಹ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು ನಟಿ ರಮ್ಯಾ (Ramya), ಸಾಧುಕೋಕಿಲ (Sadhu Kokila) ಅವರುಗಳು ಕಾಂಗ್ರೆಸ್ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಆದರೆ ಸ್ವತಃ ಸ್ಟಾರ್ ಪ್ರಚಾರಕಿ ಆಗಿರುವ ರಮ್ಯಾ, ಸಿನಿಮಾ ನಟರು ಓಟುಗಳನ್ನು ಹಾಕಿಸಲಾರರು ಎಂದಿದ್ದಾರೆ.
ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ರಾಜಕೀಯ ಹಾಗೂ ಸಿನಿಮಾ ಕುರಿತಾಗಿ ಮಾತನಾಡುತ್ತಾ, ಸಿನಿಮಾ ನಟ-ನಟಿಯರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಮಾತನಾಡಿದ ನಟಿ ರಮ್ಯಾ, ಸಿನಿಮಾ ನಟರುಗಳು ಮತದಾರರನ್ನು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಪ್ರೇರೇಪಣೆ ಮಾಡುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಜನರನ್ನು ಸೆಳೆಯಲು ನಟರು ಯಶಸ್ವಿಯಾಗುತ್ತಾರೆ ಆದರೆ ಅವರ ಮಾತು ಕೇಳಿ ಜನ ಓಟು ಹಾಕುವುದಿಲ್ಲ, ಈ ವಿಷಯ ರಾಜಕಾರಣಿಗಳಿಗೂ ಗೊತ್ತಿದೆ ಎಂದಿದ್ದಾರೆ.
ಸಿನಿಮಾ ನಟರನ್ನು ಪ್ರಚಾರಕ್ಕೆ ಕರೆ ತಂದರೆ ಜನ ಸೇರುತ್ತಾರೆ. ಎಲ್ಲರಿಗೂ ಗೊತ್ತೆ ಇರುವಂತೆ ಜನರನ್ನು ಸೇರಿಸಲು ಹಣ ನೀಡಬೇಕಾಗುತ್ತದೆ ಅದರ ಬದಲು ಸ್ಟಾರ್ ನಟ-ನಟಿಯರನ್ನು ಕರೆತಂದರೆ ಜನರು ತಾವಾಗಿಯೇ ಬರುತ್ತಾರೆ. ಹಾಗೆ ಸೇರಿದ ಜನರಿಗೆ ಅಭ್ಯರ್ಥಿ ಹೇಗೆ ತನ್ನ ವಿಷಯ ಮುಟ್ಟಿಸುತ್ತಾನೆ ಎಂಬುದು ಮುಖ್ಯ. ಕೇವಲ ನಟ ಅಥವಾ ನಟಿ ಹೇಳಿದ ಮಾತ್ರಕ್ಕೆ ಜನ ಮತ ಚಲಾಯಿಸುವುದಿಲ್ಲ. ಜನ ಸೇರಿಸಲಷ್ಟೆ ನಟ-ನಟಿಯರು ಸಹಾಯ ಮಾಡುತ್ತಾರೆ ಎಂದಿದ್ದಾರೆ ರಮ್ಯಾ.
ಇದೇ ಸಂದರ್ಶನದಲ್ಲಿ ಸುದೀಪ್, ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವುದಾಗಿಯೂ ಮಾತನಾಡಿದ ರಮ್ಯಾ, ಅದು ಅವರ ವೈಯಕ್ತಿಕ ಆಯ್ಕೆ, ಅವರು ನನ್ನ ಆತ್ಮೀಯ ಗೆಳೆಯರು, ಬಿಜೆಪಿಗೆ ಬೆಂಬಲ ನೀಡುವ ಮುನ್ನ ಈ ಬಗ್ಗೆ ಚರ್ಚಿಸಿದ್ದರು, ಅವರಿಗೆ ಬೇರೆ ಪಕ್ಷಗಳಿಂದವೂ ಆಫರ್ಗಳು ಬಂದಿದ್ದವು. ಸಿಎಂ ಬೊಮ್ಮಾಯಿ ಅವರು ಬಹಳ ಆತ್ಮೀಯರಾಗಿರುವ ಕಾರಣ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಅವರು ಎಂದಾದರು ರಾಜಕೀಯಕ್ಕೆ ಬರಬೇಕು ಅವರಿಗೆ ಬದಲಾವಣೆ ತರುವ ಶಕ್ತಿ, ಯುಕ್ತಿ ಇದೆ ಎಂದಿದ್ದಾರೆ ರಮ್ಯಾ.
ನಟಿ ರಮ್ಯಾ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನೀಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಮ್ಯಾ ಹೆಸರಿದೆ. ಆದರೆ ಅವರಿನ್ನೂ ಪ್ರಚಾರ ಆರಂಭ ಮಾಡಿಲ್ಲ. ಚುನಾವಣಾ ಕಾರ್ಯತಂತ್ರ ಅಥವಾ ಪ್ರಚಾರ ಪಕ್ಷ ಯಾವುದನ್ನು ಹೇಳುತ್ತದೆಯೋ ಅದನ್ನು ನಾನು ಮಾಡುತ್ತೇನೆ ಎಂದು ನಟಿ ರಮ್ಯಾ ಹೇಳಿದ್ದಾರೆ.
ರಮ್ಯಾ ಪ್ರಸ್ತುತ ಉತ್ತರಕಾಂಡ ಹೆಸರಿನ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಇನ್ನಿತರೆ ನಟರೊಟ್ಟಿಗೆ ನಟಿಸುತ್ತಿದ್ದಾರೆ. ಆಪಲ್ ಬಾಕ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಪ್ರಾರಂಭಿಸಿರುವ ರಮ್ಯಾ, ಮೊದಲ ಸಿನಿಮಾ ಆಗಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ರಾಜ್ ಬಿ ಶೆಟ್ಟಿ ನಾಯಕ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ