ಬಿಜೆಪಿ ಪರ ಸುದೀಪ್ ಪ್ರಚಾರ, ಕಿಚ್ಚನ ನಿರ್ಧಾರದ ಬಗ್ಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ರಮ್ಯಾ ಮಾತು

|

Updated on: Apr 22, 2023 | 5:42 PM

Ramya-Sudeep: ನಟ ಸುದೀಪ್, ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವ ಬಗ್ಗೆ ರಮ್ಯಾ ಮಾತನಾಡಿದ್ದಾರೆ. ನಿರ್ಧಾರ ಮಾಡುವ ಮೊದಲು ಸುದೀಪ್ ನನ್ನನ್ನು ಸೇರಿದಂತೆ ಇತರರ ಜೊತೆ ಈ ಬಗ್ಗೆ ಚರ್ಚಿಸಿದ್ದರು ಎಂದಿದ್ದಾರೆ. ಸುದೀಪ್​ರ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯ ಸಹ ತಿಳಿಸಿದ್ದಾರೆ.

ಬಿಜೆಪಿ ಪರ ಸುದೀಪ್ ಪ್ರಚಾರ, ಕಿಚ್ಚನ ನಿರ್ಧಾರದ ಬಗ್ಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ರಮ್ಯಾ ಮಾತು
ರಮ್ಯಾ-ಸುದೀಪ್
Follow us on

ನಟ ಸುದೀಪ್ (Sudeep), ಬಿಜೆಪಿ (BJP) ಪರವಾಗಿ ಚುನಾವಣೆ ಪ್ರಚಾರ (Election Campaign) ಮಾಡುತ್ತಿರುವುದು ಕೆಲವು ದಿನಗಳ ಹಿಂದೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಪ್ರಚಾರಕ್ಕಿಳಿದು ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ ಬೊಮ್ಮಾಯಿ ಅವರನ್ನು ಗೆಲ್ಲಿಸಿಯೇ ತೀರುವುದಾಗಿ ಸುದೀಪ್ ಹೇಳಿದ್ದಾರೆ. ಸುದೀಪ್, ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದರೆ ಇತ್ತ ರಮ್ಯಾ (Ramya) ಕಾಂಗ್ರೆಸ್​ನ ಸ್ಟಾರ್ ಪ್ರಚಾರಕಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಮ್ಯಾ, ಸುದೀಪ್​ರ ನಿರ್ಧಾರವನ್ನು ವಿಮರ್ಶೆ ಮಾಡಿದ್ದಾರೆ.

”ಸುದೀಪ್ ನನ್ನ ಆತ್ಮಿಯ ಗೆಳೆಯ. ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸುವ ಮೊದಲು ನನ್ನೊಟ್ಟಿಗೂ ಚರ್ಚಿಸಿದ್ದರು. ಇದು ಸರಿಯೋ ತಪ್ಪೊ ಎಂಬ ವಿಶ್ಲೇಷಣೆಯನ್ನು ಅವರು ಮಾಡಿದ್ದರು. ಇತರೆ ಪಕ್ಷಗಳವರೂ ಸಹ ಸುದೀಪ್ ಅವರನ್ನು ಸಂಪರ್ಕಿಸಿದ್ದರು. ಸುದೀಪ್ ಸಹ ಬೇರೆ ಬೇರೆ ಪಕ್ಷಗಳ ಮುಖಂಡರ ಸಲಹೆ ಪಡೆದಿದ್ದರು. ಆದರೆ ಅವರಿಗೆ ಸಿಎಂ ಬೊಮ್ಮಾಯಿ ಅವರು ಬಹಳ ಆಪ್ತರು ಅವರನ್ನು ಬೊಮ್ಮಾಯಿ ಮಾಮ ಎಂದೇ ಸುದೀಪ್ ಕರೆಯುತ್ತಾರೆ. ಹಾಗಾಗಿ ಕೊನೆಗೆ ಸಿಎಂ ಪರವಾಗಿ ಅವರು ಪ್ರಚಾರಕ್ಕೆ ಇಳಿಯುವ ನಿರ್ಧಾರ ಮಾಡಿದರು. ಅದು ಅವರ ವೈಯಕ್ತಿಕ ನಿರ್ಧಾರವಾಗಿತ್ತು” ಎಂದಿದ್ದಾರೆ ರಮ್ಯಾ.

ಮತ್ತು ಮಾತು ಮುಂದುವರೆಸಿ, ”ಸುದೀಪ್ ಅದ್ಭುತವಾದ ವ್ಯಕ್ತಿ ಅವರು ಯಾವುದಾದರೂ ಒಂದು ಸಮಯದಲ್ಲಿ ರಾಜಕೀಯಕ್ಕೆ ಬರಬೇಕು. ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ, ಯುಕ್ತಿ ಸುದೀಪ್ ಅವರಿಗೆ ಇದೆ” ಎಂದಿದ್ದಾರೆ. ಆ ಮೂಲಕ ಸುದೀಪ್ ರಾಜಕೀಯಕ್ಕೆ ಬರಬಹುದೆಂಬ ಸುಳಿವನ್ನೂ ಸಹ ನಟಿ ರಮ್ಯಾ ನೀಡಿದ್ದಾರೆ.

ಸುದೀಪ್ ಹಾಗೂ ರಮ್ಯಾ ಆಪ್ತ ಗೆಳೆಯರು. ಕೆಲವು ದಿನಗಳ ಹಿಂದೆ ವೀಕೆಂಡ್ ವಿತ್ ರಮೇಶ್​ಗೆ ಆಗಮಿಸಿದ್ದಾಗಲೂ ನಟಿ ರಮ್ಯಾ, ಸುದೀಪ್​ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದರು. ನನ್ನ ಬಗ್ಗೆ ಬಹಳ ಕೇರ್ ಮಾಡುವ ಗೆಳೆಯ ಸುದೀಪ್, ನಾನು ಎಲ್ಲಿಯೇ ಇದ್ದರೂ ಕರೆ ಮಾಡಿ ಹೇಗಿದ್ದೀರಾ? ಆರೋಗ್ಯ ಹೇಗಿದೆ ಎಂದೆಲ್ಲ ವಿಚಾರಿಸುತ್ತಾರೆ ಅವರು ಅದ್ಭುತವಾಗಿ ಮಾನವೀಯತೆಯುಳ್ಳ ವ್ಯಕ್ತಿ ಎಂದು ನಟಿ ರಮ್ಯಾ ಹೇಳಿದ್ದಾರೆ.

ಇನ್ನು ನಟಿ ರಮ್ಯಾ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಟಾರ್ ಪ್ರಚಾರಕಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಆದರೆ ಯಾವೆಲ್ಲ ಅಭ್ಯರ್ಥಿಗಳ ಪರವಾಗಿ ರಮ್ಯಾ ಪ್ರಚಾರ ಮಾಡಲಿದ್ದಾರೆ ಎಂಬ ಬಗ್ಗೆ ಇನ್ನೂ ಖಾತ್ರಿ ಇಲ್ಲ. ಪಕ್ಷ ಯಾರಿಗೆ ಪ್ರಚಾರ ಮಾಡಲು ಸೂಚಿಸುತ್ತದೆಯೋ ಅವರ ಪರವಾಗಿ ಪ್ರಚಾರ ಮಾಡುತ್ತೇನೆ, ಅಥವಾ ಚುನಾವಣಾ ಕಾರ್ಯತಂತ್ರದ ಜವಾಬ್ದಾರಿ ಹೊರಿಸಿದರೆ ಅದನ್ನೂ ಮಾಡುತ್ತೇನೆ. ನನ್ನಿಂದ ಯಾವುದಾದರು ಅಭ್ಯರ್ಥಿಗೆ ಗೆಲುವು ಸಿಕ್ಕರೆ ಅದು ಖುಷಿ, ಪಕ್ಷಕ್ಕೆ ಮಾಡುವ ಸೇವೆ ಎಂದುಕೊಳ್ಳುತ್ತೇನೆ ಎಂದು ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ:ಆರು ಕ್ಷೇತ್ರದ ಆಫರ್ ಕೊಟ್ಟ ಕಾಂಗ್ರೆಸ್, ಬಿಜೆಪಿ-ಜೆಡಿಎಸ್​ನಿಂದಲೂ ರಮ್ಯಾಗೆ ಬುಲಾವ್

ಇದೇ ಸಂದರ್ಶನದಲ್ಲಿ ತಮಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್​ಗಳು ಟಿಕೆಟ್ ಆಫರ್ ಮಾಡಿದ್ದ ವಿಷಯವನ್ನು ರಮ್ಯಾ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್​ ಪಕ್ಷವು ಆರು ವಿಧಾನಸಭೆ ಕ್ಷೇತ್ರಗಳನ್ನು ನೀಡಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿತು ಹಾಗೂ ಬಿಜೆಪಿಯ ಟಾಪ್ ಲೀಡರ್ ಒಬ್ಬರು ಮಾತನಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ಮಾಡಿದ್ದರು. ಇನ್ನು ಕುಮಾರಸ್ವಾಮಿಯವರು ಸಹ ಆಕಸ್ಮಿಕವಾಗಿ ಸಲೂನ್ ಒಂದರಲ್ಲಿ ಭೇಟಿಯಾಗಿ ರಾಜಕೀಯದಲ್ಲಿ ಸಕ್ರಿಯರಾಗಿರುವಂತೆ ಹೇಳಿದರು ಎಂದು ಹೇಳಿದ್ದಾರೆ. ಒಂದು ಪಕ್ಷದವರಂತೂ ಚುನಾವಣೆ ಗೆದ್ದಕೂಡಲೇ ಮಂತ್ರಿ ಮಾಡುವುದಾಗಿಯೂ ಹೇಳಿದ್ದಾಗಿಯೂ ರಮ್ಯಾ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Sat, 22 April 23