Rangitaranga: ‘ರಂಗಿತರಂಗ’ ಚಿತ್ರಕ್ಕೆ 8 ವರ್ಷ; ‘ಬಾಹುಬಲಿ’ಗೂ ಫೈಟ್ ನೀಡಿ 365 ದಿನ ಪ್ರದರ್ಶನ ಕಂಡಿತ್ತು ಈ ಸಿನಿಮಾ
Rangitaranga Kannada Movie: ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದ್ದ ‘ರಂಗಿತರಂಗ’ ಸಿನಿಮಾ ಬಗ್ಗೆ ಪ್ರೇಕ್ಷಕರು ಈಗಲೂ ಮಾತನಾಡುತ್ತಾರೆ. ಆ ಚಿತ್ರ ತೆರೆಕಂಡು 8 ವರ್ಷ ಕಳೆದಿದೆ.
ಕನ್ನಡ ಚಿತ್ರರಂಗದಲ್ಲಿ ‘ರಂಗಿತರಂಗ’ ಚಿತ್ರ (Rangitaranga Movie) ಮಾಡಿದ ಸಾಧನೆ ದೊಡ್ಡದು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ (ಜುಲೈ 3) 8 ವರ್ಷ ಪೂರ್ಣಗೊಂಡಿದೆ. ರಿಲೀಸ್ಗೂ ಮುನ್ನವೇ ಈ ಸಿನಿಮಾ ಹೈಪ್ ಸೃಷ್ಟಿ ಮಾಡಿತ್ತು. ವಿಶೇಷವಾದ ಟ್ರೇಲರ್ ಮೂಲಕ ಗಮನ ಸೆಳೆದಿತ್ತು. ಆದರೆ ಬಿಡುಗಡೆಯಾದ ಒಂದೇ ವಾರಕ್ಕೆ ‘ರಂಗಿತರಂಗ’ ಸಿನಿಮಾಗೆ ಒಂದು ದೊಡ್ಡ ಶಾಕ್ ಎದುರಾಗಿತ್ತು. ಅದೇ ‘ಬಾಹುಬಲಿ’ (Baahubali) ಸಿನಿಮಾ. ಹೌದು, ಅಂಥ ದೈತ್ಯ ಸಿನಿಮಾದ ಎದುರು ಫೈಟ್ ನೀಡಿ ಗೆದ್ದಿದ್ದು ‘ರಂಗಿತರಂಗ’ ಚಿತ್ರದ ಹೆಚ್ಚುಗಾರಿಕೆ. ಆ ಸಿನಿಮಾಗೆ 8 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ತಮ್ಮಿಷ್ಟದ ದೃಶ್ಯಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಿದ ನಿರೂಪ್ ಭಂಡಾರಿ, ರಾಧಿಕಾ ನಾರಾಯಣ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಅವರು ಇಂದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಅದು 2015ರ ಜುಲೈ 3. ಕನ್ನಡದ ಸಿನಿಮಾ ಪ್ರೇಕ್ಷಕರು ‘ರಂಗಿತರಂಗ’ ಸಿನಿಮಾ ನೋಡಿ ಖುಷಿಪಟ್ಟರು. ಆದರೆ ಒಂದು ವಾರದ ನಂತರ (ಜುಲೈ 10) ದೊಡ್ಡ ಪ್ರಮಾಣದಲ್ಲಿ ತೆಲುಗಿನ ‘ಬಾಹುಬಲಿ’ ಸಿನಿಮಾ ಬಿಡುಗಡೆ ಆಯಿತು. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಆಗಿದ್ದ ಆ ಸಿನಿಮಾ ರಿಲೀಸ್ ಆದಾಗ ಎಲ್ಲ ಚಿತ್ರಮಂದಿರಗಳನ್ನು ಕಬಳಿಸಿಕೊಂಡಿತು. ಆಗ ಹಲವು ಕಡೆಗಳಲ್ಲಿ ‘ರಂಗಿತರಂಗ’ ಸಿನಿಮಾಗೆ ಜಾಗ ಇಲ್ಲದಂತೆ ಆಯಿತು. ಅಂಥ ಕಷ್ಟದ ಪರಿಸ್ಥಿತಿಯಲ್ಲೂ ಚಿತ್ರತಂಡ ನಂಬಿಕೆ ಕಳೆದುಕೊಳ್ಳಲಿಲ್ಲ. ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಳ್ಳಲಾಯಿತು. ಕನ್ನಡದ ಸಿನಿಪ್ರಿಯರು ‘ರಂಗಿತರಂಗ’ ಚಿತ್ರವನ್ನು ಕೈ ಹಿಡಿದರು.
ರಂಗಿತರಂಗ ಬಿಡುಗಡೆಯಾಗಿ ಇಂದಿಗೆ ೮ ವರ್ಷ ಪ್ರೀತಿಸಿ ಪ್ರೋತ್ಸಾಹಿಸಿದ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ?? 8 years for Rangitaranga. Thank you ? @anupsbhandari @saaja_sudhakar @saikumaractor @prakash_hk @thizizradhika @avantikashetty1 @AJANEESHB @williamdaviddop pic.twitter.com/uuqwV4MYP1
— Nirup Bhandari (@nirupbhandari) July 3, 2023
ಒಂದೆಡೆ ‘ಬಾಹುಬಲಿ’ ಸಿನಿಮಾ ಅಬ್ಬರಿಸುತ್ತಿದ್ದರೂ ಕೂಡ ಕನ್ನಡದ ಸಿನಿಪ್ರಿಯರು ‘ರಂಗಿತರಂಗ’ ಚಿತ್ರದ ಕೈ ಬಿಡಲಿಲ್ಲ. ತನ್ನ ಸಸ್ಪೆನ್ಸ್-ಥ್ರಿಲ್ಲರ್ ಗುಣದಿಂದಾಗಿ ಪ್ರೇಕ್ಷಕರನ್ನು ಈ ಸಿನಿಮಾ ಸೆಳೆದುಕೊಂಡಿತು. ನೋಡ ನೋಡುತ್ತಿದ್ದಂತೆಯೇ ‘ರಂಗಿತರಂಗ’ ಸಿನಿಮಾಗೆ ಜನರ ಬಾಯಿ ಮಾತಿನ ಪ್ರಚಾರ ಹೆಚ್ಚಿತು. ‘ಬಾಹುಬಲಿ’ಯಂತಹ ಪ್ರವಾಹದ ವಿರುದ್ಧ ಈಜಿದ ಈ ಚಿತ್ರ ಯಶಸ್ವಿಯಾಗಿ ಗೆಲುವಿನ ದಡ ಸೇರಿತು. ವರ್ಷಗಟ್ಟಲೆ ಪ್ರದರ್ಶನ ಕಂಡು ಸೈ ಎನಿಸಿಕೊಂಡಿತು.
ಇದನ್ನೂ ಓದಿ: ‘ಕಮರೊಟ್ಟು ಅನ್ನೋದೇ ಯುನಿವರ್ಸ್’; ‘ರಂಗಿತರಂಗ’-‘ವಿಕ್ರಾಂತ್ ರೋಣ’ ಹೋಲಿಕೆ ಮಾಡಿದವರಿಗೆ ಅನೂಪ್ ಭಂಡಾರಿ ಉತ್ತರ
‘ರಂಗಿತರಂಗ’ ಸಿನಿಮಾಗೆ ಹೆಚ್.ಕೆ. ಪ್ರಕಾಶ್ ಅವರು ಬಂಡವಾಳ ಹೂಡಿದ್ದರು. ಈ ಚಿತ್ರದಿಂದ ನಿರ್ದೇಶಕ ಅನೂಪ್ ಭಂಡಾರಿ, ನಟ ನಿರೂಪ್ ಭಂಡಾರಿ, ನಟಿ ರಾಧಿಕಾ ನಾರಾಯಣ್ ಮುಂತಾದವರಿಗೆ ಭಾರಿ ಜನಪ್ರಿಯತೆ ಸಿಕ್ಕಿತು. ಆ ಸಿನಿಮಾ ಬಗ್ಗೆ ಪ್ರೇಕ್ಷಕರು ಈಗಲೂ ಮಾತನಾಡುತ್ತಾರೆ. ಹಾಡುಗಳು ಇಂದಿಗೂ ಕೇಳುಗರ ಫೇವರಿಟ್ ಆಗಿ ಉಳಿದುಕೊಂಡಿವೆ. ಕ್ಲೈಮ್ಯಾಕ್ಸ್ನಲ್ಲಿ ಸಾಯಿ ಕುಮಾರ್ ಅವರ ಅತ್ಯುತ್ತಮ ನಟನೆಯನ್ನು ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.