
ರಶ್ಮಿಕಾ ಮಂದಣ್ಣ ಸಿನಿಮಾ ವಿಚಾರದಲ್ಲಿ ಸಾಕಷ್ಟು ಖ್ಯಾತಿ ಗಳಿಸಿರಬಹುದು. ಪರಭಾಷೆಯಲ್ಲಿ ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇರಬಹುದು. ಆದರೆ, ರಶ್ಮಿಕಾ ಭಾಷಾ ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಅವರಿಗೆ ಕನ್ನಡದ ಬಗ್ಗೆ ಗೌರವ ಇಲ್ಲ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ನಟಿಯ ಕಡೆಯಿಂದ ಯಾವ ಸಂದರ್ಭದಲ್ಲೂ ಸ್ಪಷ್ಟನೆ ಸಿಕ್ಕಿಲ್ಲ. ಈಗ ರಶ್ಮಿಕಾ ಇದೇ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಏನದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇತ್ತೀಚೆಗೆ ‘ಪುಷ್ಪ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ. ‘ಪುಷ್ಪ’ದಲ್ಲಿ ಅವರು ಭಿನ್ನ ಗೆಟಪ್ ತಾಳಿದ್ದಾರೆ. ಹೀಗಾಗಿ, ಅವರ ಅಭಿಮಾನಿಗಳು ಈ ಸಿನಿಮಾ ನೋಡೋಕೆ ಕಾದು ಕೂತಿದ್ದಾರೆ. ಈ ಚಿತ್ರ ತೆಲುಗು ಮಾತ್ರವಲ್ಲದೆ, ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಹೀಗಾಗಿ ಟ್ರೇಲರ್ಅನ್ನು ಕನ್ನಡದಲ್ಲೂ ರಿಲೀಸ್ ಮಾಡಲಾಗಿದೆ. ಆದರೆ, ರಶ್ಮಿಕಾ ಕನ್ನಡ ಅವತರಣಿಕೆಗೆ ಡಬ್ ಮಾಡಿಲ್ಲ.
ಡಿಸೆಂಬರ್ 9ರಂದು ‘ಆರ್ಆರ್ಆರ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಲ್ಲೊಂದು ಅಚ್ಚರಿ ವಿಚಾರವಿದೆ. ‘ಆರ್ಆರ್ಆರ್’ ಚಿತ್ರದ ಕನ್ನಡ ಅವತರಣಿಕೆಗೆ ಜ್ಯೂ.ಎನ್ಟಿಆರ್, ರಾಮ್ ಚರಣ್ ಅವರೇ ಡಬ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗ ‘ಪುಷ್ಪ’ ಮತ್ತು ‘ಆರ್ಆರ್ಆರ್’ ಟ್ರೇಲರ್ ವಿಚಾರ ಇಟ್ಟುಕೊಂಡು ಚರ್ಚೆ ಮಾಡಲಾಗುತ್ತಿದೆ.
ಜ್ಯೂ.ಎನ್ಟಿಆರ್ ಅಂತಹ ಪರಭಾಷೆ ಕಲಾವಿದರು ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಪರಭಾಷೆಯವರು ಕಷ್ಟವಾದರೂ ಆದಷ್ಟು ಪ್ರಯತ್ನಿಸಿ ಕನ್ನಡ ಮಾತನಾಡುತ್ತಿದ್ದಾರೆ. ಹೀಗಿರುವಾಗ, ಕರ್ನಾಟಕದವರಾಗಿ, ಕನ್ನಡ ಅವತರಣಿಕೆಯನ್ನು ರಶ್ಮಿಕಾ ಡಬ್ ಮಾಡುವುದಿಲ್ಲ ಎಂದರೆ ಅದು ಎಷ್ಟು ಸರಿ? ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ರಶ್ಮಿಕಾ ಕಡೆಯಿಂದ ಇನ್ನೂ ಉತ್ತರ ಬಂದಿಲ್ಲ. ಅವರು ಈ ಕಮೆಂಟ್ಗಳಿಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
‘ಪುಷ್ಪ’ ಚಿತ್ರಕ್ಕೆ ಸುಕುಮಾರ್ ಅವರ ನಿರ್ದೇಶನವಿದೆ. ಡಾಲಿ ಧನಂಜಯ್, ಫಹಾದ್ ಫಾಸಿಲ್, ಜಗಪತಿ ಬಾಬು ಪ್ರಕಾಶ್ ರಾಜ್ ಮುಂತಾದ ಸ್ಟಾರ್ ಕಲಾವಿದರು ಕೂಡ ‘ಪುಷ್ಪ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎರಡು ಪಾರ್ಟ್ಗಳಲ್ಲಿ ಈ ಚಿತ್ರ ತಯಾರಾಗಿದ್ದು, ಡಿ.17ರಂದು ಮೊದಲ ಪಾರ್ಟ್ ಮಾತ್ರ ಬಿಡುಗಡೆ ಆಗುತ್ತಿದೆ.
ಇದನ್ನೂ ಓದಿ: ‘ಪುಷ್ಪ’ ಐಟಂ ಸಾಂಗ್ನಲ್ಲಿ ಹಾಟ್ ಆಗಿ ಮಿಂಚಿದ ಸಮಂತಾ; ಇಲ್ಲಿದೆ ವಿಶೇಷ ಹಾಡು