
ಕನ್ನಡದ ನಟಿಯರು ಇತ್ತೀಚೆಗೆ ಪ್ಯಾನ್ ಇಂಡಿಯಾ (Pan India) ಲೆವೆಲ್ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಶ್ರೀನಿಧಿ ಶೆಟ್ಟಿ, ರುಕ್ಮಿಣಿ ವಸಂತ್, ಪ್ರಣಿತಾ ಸುಭಾಷ್, ಶ್ರದ್ಧಾ ಶ್ರೀನಾಥ್ ಇನ್ನೂ ಕೆಲ ನಟಿಯರು ಕನ್ನಡದಿಂದ ವೃತ್ತಿ ಆರಂಭಿಸಿ ಪರ ಭಾಷೆಗಳ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಅತಿ ಹೆಚ್ಚು ಹೆಸರು ಕೇಳಿ ಬರುತ್ತಿರುವುದು ರಶ್ಮಿಕಾ ಮಂದಣ್ಣ ಅವರದ್ದು. ಆದರೆ ಅವರಿಗೆ ಎಲ್ಲ ಭಾಷೆಗಳಲ್ಲಿಯೂ ಸಖತ್ ಸ್ಪರ್ಧೆ ನೀಡುತ್ತಿರುವುದು ಕನ್ನಡದ ಮತ್ತೊಬ್ಬ ನಟಿ ಶ್ರೀಲೀಲಾ. ಅಷ್ಟಕ್ಕೂ ಇಬ್ಬರಲ್ಲಿ ಯಾರ ಕೈಯಲ್ಲಿ ಹೆಚ್ಚು ಸಿನಿಮಾಗಳಿವೆ? ಯಾರ ಕೈಯಲ್ಲಿ ದೊಡ್ಡ ಸಿನಿಮಾಗಳಿವೆ?
ಬಾಕ್ಸ್ ಆಫೀಸ್ ಯಶಸ್ಸಿನ ಆಧಾರದಲ್ಲಿ ಲೆಕ್ಕ ಹಾಕುವುದಾದರೆ ರಶ್ಮಿಕಾ ಮಂದಣ್ಣ ಅವರನ್ನು ಹಿಂದಿಕ್ಕುವವರು ಯಾರೂ ಇಲ್ಲ. ಕನ್ನಡದ ನಟಿಯರು ಮಾತ್ರವಲ್ಲ ಬಾಲಿವುಡ್ ನಟಿಯರು ಸಹ ರಶ್ಮಿಕಾ ಮುಂದೆ ಫೇಲ್. ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿವೆ. ‘ಅನಿಮಲ್’, ‘ಪುಷ್ಪ 2’, ‘ಛಾವಾ’ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸಾವಿರ ಕೋಟಿ ಗಳಿಸಿವೆ. ಅದರ ಜೊತೆಗೆ ‘ಕುಬೇರ’, ‘ಸಿಖಂಧರ್’ ಸಿನಿಮಾಗಳು 300 ಕೋಟಿಗೂ ಹೆಚ್ಚು ಗಳಿಕೆ ಮಾಡಿವೆ. ಬಾಕ್ಸ್ ಆಫೀಸ್ ವಿಚಾರದಲ್ಲಿ ಶ್ರೀಲೀಲಾಗಿಂತಲೂ ಬಹಳ ಮುಂದಿದ್ದಾರೆ ರಶ್ಮಿಕಾ.
ಕೈಯಲ್ಲಿರುವ ಸಿನಿಮಾಗಳ ಲೆಕ್ಕಕ್ಕೆ ಬರುವುದಾದರೆ ಶ್ರೀಲೀಲಾ, ರಶ್ಮಿಕಾಗಿಂತಲೂ ತುಸುವೇ ಮುಂದಿದ್ದಾರೆ. ಶ್ರೀಲೀಲಾ ಈಗ ಬಲು ಬ್ಯುಸಿ ನಟಿ. ಶ್ರೀಲೀಲಾ ಈಗಾಗಲೇ ಎರಡು ತೆಲುಗು ಸಿನಿಮಾಗಳ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಒಂದು ತಮಿಳು ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಇನ್ನು ಹಿಂದಿಯಲ್ಲಿ ಬರೋಬ್ಬರಿ ನಾಲ್ಕು ಸಿನಿಮಾಗಳು ಶ್ರೀಲೀಲಾ ಕೈಯಲ್ಲಿವೆ. ತೆಲುಗಿನಲ್ಲಿ ರವಿತೇಜ ಜೊತೆಗೆ ‘ಮಾಸ್ ಜಾತರ’, ಪವನ್ ಕಲ್ಯಾಣ್ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ತಮಿಳಿನಲ್ಲಿ ‘ಪರಾಶಕ್ತಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ‘ಆಶಿಖಿ 3’ ಹಾಗೂ ಸೈಫ್ ಅಲಿ ಖಾನ್ ಪುತ್ರನ ಹೊಸ ಸಿನಿಮಾ. ಧರ್ಮಾ ಪ್ರೊಡಕ್ಷನ್ನ ಹೊಸ ಸಿನಿಮಾ ಹಾಗೂ ಇತ್ತೀಚೆಗಷ್ಟೆ ಘೋಷಣೆಯಾದ ಬಾಬಿ ಡಿಯೋಲ್ ನಟನೆಯ ಹೊಸ ಸಿನಿಮಾನಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ, ಏಜೆಂಟ್ ಮಿರ್ಚಿ ಆದ ಶ್ರೀಲೀಲಾ
ಇನ್ನು ರಶ್ಮಿಕಾ ವಿಷಯಕ್ಕೆ ಬರುವುದಾದರೆ ಹಿಂದಿಯ ‘ಥಮ’ ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಕಾರ್ತಿಕ್ ಆರ್ಯನ್ ಜೊತೆಗೆ ‘ಕಾಕ್ಟೇಲ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ‘ದಿ ಗರ್ಲ್ಫ್ರೆಂಡ್’ ಚಿತ್ರೀಕರಣ ಮುಗಿಸಿದ್ದಾರೆ. ‘ಗೀತಾ ಗೋವಿಂದಂ 2’ ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಮಾಡಲಿದ್ದಾರೆ. ತೆಲುಗಿನ ‘ಮೈಸಾ’ ಸಿನಿಮಾದ ಚಿತ್ರೀಕರಣ ಶೀಘ್ರ ಆರಂಭಿಸಲಿದ್ದಾರೆ. ತಮಿಳಿನಲ್ಲಿ ರಾಘವ್ ಲಾರೆನ್ಸ್ ನಿರ್ದೇಶನದ ‘ಕಾಂಚನಾ’ ಸರಣಿಯ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ.
ಸಂಖ್ಯೆಯಲ್ಲಿ ಶ್ರೀಲೀಲಾ, ರಶ್ಮಿಕಾ ನಡುವೆ ಹೆಚ್ಚಿನ ಅಂತರ ಇಲ್ಲ. ಆದರೆ ನಿಜವಾಗಿಯೂ ದೊಡ್ಡ ಬ್ಯಾನರ್ನ ದೊಡ್ಡ ಬಜೆಟ್ ಸಿನಿಮಾಗಳು ಹೆಚ್ಚು ಇರುವುದು ರಶ್ಮಿಕಾ ಮಂದಣ್ಣ ಕೈಯಲ್ಲಿಯೇ. ಅಂದಹಾಗೆ ‘ಪುಷ್ಪ 3’ ಸಿನಿಮಾನಲ್ಲಿಯೂ ರಶ್ಮಿಕಾ ಕಡ್ಡಾಯವಾಗಿ ಇರಲಿದ್ದಾರೆ ಎಂಬುದನ್ನು ಸಹ ಮರೆಯುವಂತಿಲ್ಲ. ಈಗ ಚಿತ್ರೀಕರಣವಾಗುತ್ತಿರುವ ಅಲ್ಲು ಅರ್ಜುನ್-ಅಟ್ಲಿ ನಟನೆಯ ಸಿನಿಮಾನಲ್ಲೂ ರಶ್ಮಿಕಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ