AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶರತ್ ಮತ್ತು ಶರಧಿ’ ಕಿರುಚಿತ್ರದಲ್ಲಿ ಅಂಧ ದಂಪತಿ ನಟನೆ; ದತ್ತಣ್ಣ ಮೆಚ್ಚುಗೆ

ಹಿರಿಯ ನಟ ದತ್ತಣ್ಣ ಅವರು ‘ಶರತ್ ಮತ್ತು ಶರಧಿ’ ಕಿರುಚಿತ್ರದಲ್ಲಿ ನಟನೆ ಮಾಡಿದ್ದಾರೆ. ಈ ಕಿರುಚಿತ್ರದಲ್ಲಿ ಅಶ್ವಿನಿ ಮತ್ತು ವೀರೇಶ್ ಎಂ. ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಏಪ್ರಿಲ್​ನ ಹಿಮಬಿಂದು’ ಖ್ಯಾತಿಯ ಎಂ. ಜಗದೀಶ್ ಅವರು ‘ಶರತ್ ಮತ್ತು ಶರಧಿ’ಗೆ ನಿರ್ದೇಶನ ಮಾಡಿದ್ದಾರೆ.

‘ಶರತ್ ಮತ್ತು ಶರಧಿ’ ಕಿರುಚಿತ್ರದಲ್ಲಿ ಅಂಧ ದಂಪತಿ ನಟನೆ; ದತ್ತಣ್ಣ ಮೆಚ್ಚುಗೆ
Sharath Matthu Sharadhi Short Movie
ಮದನ್​ ಕುಮಾರ್​
|

Updated on: Oct 15, 2025 | 5:50 PM

Share

ಅಂಧ ದಂಪತಿ ಬದುಕಿನ ಕಥೆ ಇರುವ ‘ಶರತ್ ಮತ್ತು ಶರಧಿ’ (Sharath Matthu Sharadhi) ಕಿರುಚಿತ್ರದಲ್ಲಿ ನೈಜ ಬದುಕಿನ ಅಂಧ ದಂಪತಿಯೇ ಅಭಿನಯಿಸಿರುವುದು ವಿಶೇಷ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ನಡೆಯಿತು. ಆ ಬಳಿಕ ಸುದ್ದಿಗೋಷ್ಠಿ ಮಾಡಲಾಯಿತು. ಅಶ್ವಿನಿ, ವೀರೇಶ್ ಎಂ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ದತ್ತಣ್ಣ (Dattanna) ಅವರು ಕೂಡ ಅಭಿನಯಿಸಿದ್ದಾರೆ. ಕನ್ನಡದ ಈ ಕಿರುಚಿತ್ರವನ್ನು (Short Film) ಬೇರೆ ಭಾಷೆಗೆ ಡಬ್ ಮಾಡುವ ಕೆಲಸ ಕೂಡ ನಡೆಯಲಿದೆ. ಕಿರುಚಿತ್ರಗಳ ಹಲವು ಫೆಸ್ಟಿವಲ್​​ಗೆ ಕಳಿಸಲು ಈ ತಂಡ ತೀರ್ಮಾನಿಸಿದೆ.

‘ದತ್ತಣ್ಣ ಅವರು ಕಿರುಚಿತ್ರಗಳಲ್ಲಿ ನಟಿಸುವುದಿಲ್ಲ. ಆದರೆ ಅವರು ‘ಶರತ್ ಮತ್ತು ಶರಧಿ’ ಕಿರುಚಿತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಕಥೆ ತುಂಬಾ ಇಷ್ಟ ಆಗಿದ್ದರಿಂದ ಅವರು ಈ ಕಿರುಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡರು. ಅಲ್ಲದೇ, ಈ ಕಿರುಚಿತ್ರದಲ್ಲಿ ನಟಿಸಲು ಅವರು ಯಾವುದೇ ಸಂಭಾವನೆ ಪಡೆದಿಲ್ಲ’ ಎಂದು ನಿರ್ದೇಶಕ ಎಂ. ಜಗದೀಶ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಗದೀಶ್ ಅವರು ಈ ಮೊದಲು ‘ಏಪ್ರಿಲ್​ನ ಹಿಮಬಿಂದು’ ಸಿನಿಮಾ ಮಾಡಿದ್ದರು. ಆ ಚಿತ್ರದಲ್ಲಿ ದತ್ತಣ್ಣ ನಟಿಸಿದ್ದರು. ಆ ಸ್ನೇಹದ ಮೇಲೆ ಅವರು ಈಗ ‘ಶರತ್ ಮತ್ತು ಶರಧಿ’ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ‘8 ವರ್ಷದಿಂದ ಜಗದೀಶ್ ಅವರು ಸುಮಾರು 200 ಕಥೆ ನನಗೆ ಹೇಳಿದ್ದಾರೆ. ಎಲ್ಲ ಕಥೆಗಳಿಗೂ ನಾನು ಓಕೆ ಎಂದಿದ್ದೇನೆ. ಅವೆಲ್ಲವನ್ನೂ ಬಿಟ್ಟು ಈಗ ಈ ಕಥೆಯನ್ನು ಕಿರುಚಿತ್ರ ಮಾಡಿದ್ದಾರೆ. ಅವರಿಗೆ ಏನು ಮಾಡಬೇಕು ಎಂಬ ಸ್ಪಷ್ಟತೆ ಇದೆ’ ಎಂದು ದತ್ತಣ್ಣ ಹೇಳಿದರು.

‘ನೈಜ ಪಾತ್ರಗಳನ್ನು ಇಟ್ಟುಕೊಂಡು ಈ ಕಿರುಚಿತ್ರ ಮಾಡಿರುವುದು ಮೆಚ್ಚುಗೆಯ ವಿಷಯ. ಆದ್ದರಿಂದ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ಪಡೆಯುತ್ತದೆ. ಹುಟ್ಟಿನಿಂದ ಅಂಧರಾದವರಿಗೆ ಕನಸುಗಳು ಬೀಳುತ್ತಾ ಎಂಬ ಪ್ರಶ್ನೆ ನನಗೆ ಮೂಡಿತ್ತು. ಅದನ್ನೇ ಇಟ್ಟುಕೊಂಡು ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. ಅಂಧರಿಗೆ ಬಣ್ಣಗಳ ಕಲ್ಪನೆ ಇಲ್ಲ. ನಾವು ಹೇಳಿದರೆ ತಮ್ಮದೇ ಆದ ರೀತಿಯಲ್ಲಿ ಕಲ್ಪನೆ ಮಾಡಿಕೊಳ್ಳುತ್ತಾರೆ. ಇದು ಬರೀ ಅಭಿನಯಕ್ಕೆ ಸೀಮಿತವಾಗಿ ಇರಲಿಲ್ಲ. ಅವರ ನೋವು-ನಲಿವು ಅರ್ಥ ಮಾಡಿಕೊಳ್ಳಲು ಸಹಕಾರಿ ಆಯಿತು’ ಎಂದಿದ್ದಾರೆ ದತ್ತಣ್ಣ.

ಇದನ್ನೂ ಓದಿ: ಹಿರಿಯ ನಟ ದತ್ತಣ್ಣ ಮದುವೆ ಆಗದೇ ಇರಲು ಇತ್ತು ಪ್ರಮುಖ ಕಾರಣ; ಇಲ್ಲಿದೆ ವಿವರ

‘ಟಾಕ್‌ಗುರು ಕ್ರಿಯೇಶನ್ಸ್’ ಮೂಲಕ ಗಣೇಶ್ ಬಿ.ಎಂ. ಅವರು ಈ ಕಿರುಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸತೀಶ್ ಪದ್ಮನಾಬನ್ ಅವರು ಸಂಗೀತ ನೀಡಿದ್ದಾರೆ. ವಿನಯ್ ಹೊಸಗೌಡರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಚೇತನ್ ತ್ರಿವೇಣ್ ಅವರ ಸಹ-ನಿರ್ದೇಶನ, ಸುಪ್ರೀತ್ ಬಿ.ಕೆ. ಅವರ ಸಂಕಲನ ಈ ಕಿರುಚಿತ್ರಕ್ಕಿದೆ. ‘ಈ ಕಿರುಚಿತ್ರಕ್ಕೆ ದೊಡ್ಡ ಮಾನ್ಯತೆ ಸಿಗಬೇಕು. ಯಾಕೆಂದರೆ, ಕಷ್ಟಕರವಾದ ವಿಷಯವನ್ನು ಇಟ್ಟುಕೊಂಡು ಈ ಕಿರುಚಿತ್ರ ಮಾಡಲಾಗಿದೆ’ ಎಂದು ದತ್ತಣ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.