ಬಿಡುಗಡೆಗೂ ಮುನ್ನ ‘ಮೃದುಲ’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಹಿರಿಯ ನಟ ದತ್ತಣ್ಣ
‘ಲೈಫ್ ಆಫ್ ಮೃದುಲ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರು, ಕುಂದಾಪುರ ಮುಂತಾದ ಕಡೆಗಳಲ್ಲಿ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ. ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿಸಿರುವ ಈ ಚಿತ್ರ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ರಿಲೀಸ್ಗೂ ಮುನ್ನವೇ ಸಿನಿಮಾ ನೋಡಿದ ಹಿರಿಯ ನಟ ದತ್ತಣ್ಣ ಅವರು ಮೆಚ್ಚುಕೊಂಡಿದ್ದು, ಅನಿಸಿಕೆ ತಿಳಿಸಿದ್ದಾರೆ.
ಸಿನಿಮಾ ರಂಗದಲ್ಲಿ ಹಿರಿಯ ನಟ ದತ್ತಣ್ಣ ಅವರು ಅನೇಕ ವರ್ಷಗಳ ಅನುಭವ ಹೊಂದಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರಿಂದ ಪ್ರಶಂಸೆ ಸಿಕ್ಕರೆ ಅದು ಚಿತ್ರತಂಡಕ್ಕೆ ಹೆಮ್ಮೆಯ ವಿಚಾರ. ಈಗ ಹೊಸಬರ ‘ಲೈಫ್ ಆಫ್ ಮೃದುಲ’ ಸಿನಿಮಾವನ್ನು ದತ್ತಣ್ಣ ಅವರು ನೋಡಿ ಮೆಚ್ಚಿಕೊಂಡಿದ್ದಾರೆ. ಬಿಡುಗಡೆಗೂ ಮುನ್ನವೇ ಅವರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಹೊಸಬರೇ ಸೇರಿಕೊಂಡು ಈ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ‘ಲೈಫ್ ಆಫ್ ಮೃದುಲ’ ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆ ದತ್ತಣ್ಣ ಅವರು ತಮ್ಮ ವಿಮರ್ಶೆ ಹಂಚಿಕೊಂಡರು.
‘ಲೈಫ್ ಆಫ್ ಮೃದುಲ’ ಸಿನಿಮಾವನ್ನು ‘ಮದನ್ ಮೂವೀಸ್ ಬ್ಯಾನರ್’ ಮೂಲಕ ಮದನ್ ಕುಮಾರ್ ಸಿ. ಅವರು ನಿರ್ಮಾಣ ಮಾಡಿದ್ದಾರೆ. ನಾಯಕನಾಗಿಯೂ ಅವರು ಅಭಿನಯಿಸಿದ್ದಾರೆ. ಸಂಭಾಷಣೆ ಬರೆದ ಯೋಗಿ ದೇವಗಂಗೆ ಅವರು ಸಿನಿಮಾ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಅವರೊಂದಿಗೆ ತೇಜಸ್ವಿನಿ ಆರ್. ಗೌಡ ಕೂಡ ಸಾಥ್ ನೀಡಿದ್ದಾರೆ. ಹಲವು ನಿರ್ದೇಶಕರ ಬಳಿ ಈಗಾಗಲೇ ಕೆಲಸ ಮಾಡಿದ ಅನುಭವ ಇರುವ ಚೇತನ್ ತ್ರಿವೇಣ್ ಅವರು ‘ಲೈಫ್ ಆಫ್ ಮೃದುಲ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಚನೆ, ಚಿತ್ರಕಥೆ, ಸಾಹಸ ಕೂಡ ಅವರದ್ದೇ.
ಒಂದಷ್ಟು ದಿನಗಳ ಹಿಂದೆ ‘ಲೈಫ್ ಆಫ್ ಮೃದುಲ’ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ ಪ್ರಚಾರದ 2ನೇ ಹಂತವಾಗಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ‘ರೇಣುಕಾಂಬ ಸ್ಟುಡಿಯೋ’ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ನಟ ದತ್ತಣ್ಣ ಅವರು ಹಾಜರಿ ಹಾಕಿದರು. ಟ್ರೇಲರ್ ಹಾಗೂ ಸಿನಿಮಾ ಕುರಿತು ಅವರು ಮಾತನಾಡಿದರು.
‘ಇಂದಿನ ಕಾಲಘಟ್ಟದಲ್ಲಿ ನಾವು ಒಳ್ಳೆಯ ಸಿನಿಮಾವನ್ನು ಮಾಡಿದ್ದೇವೆ. ಅದು ಹೇಗಿದೆ ಎಂಬ ಕುತೂಹಲವನ್ನು ಕೆರಳಿಸಲು ಟ್ರೇಲರ್ ಲಾಂಚ್ ಮಾಡ್ತಾರೆ. ಸೀಮಿತ ಉದ್ದೇಶದಿಂದ ಇಡೀ ವಿಚಾರವನ್ನು ಹೇಳುವ ಅಗತ್ಯವಿಲ್ಲ. 2 ಗಂಟೆಯ ಸಿನಿಮಾವನ್ನು 2 ನಿಮಿಷದಲ್ಲಿ ತೋರಿಸುವ ಪ್ರಕ್ರಿಯೆ. ಅದು ಸೃಜನಾತ್ಮಕವಾದ ಕಾರ್ಯವಿಧಾನವಾಗಿದೆ. ಅದರಲ್ಲಿ ನಿರ್ದೇಶಕ ಹಾಗೂ ಸಂಕಲನಕಾರರ ಶ್ರಮ ನಿಜಕ್ಕೂ ಶ್ಲಾಘನೀಯ. ಅದಕ್ಕೆ ಮೆಚ್ಚುಗೆ ಸಿಗಬೇಕು. ಟ್ರೇಲರ್ ಪೂರಕವಾಗಿದೆ. ಸಿನಿಮಾ ನೋಡಬೇಕು ಅನಿಸುವ ರೀತಿಯಲ್ಲಿ ಸಿದ್ಧವಾಗಿದೆ’ ಎಂದು ದತ್ತಣ್ಣ ಹೇಳಿದರು.
‘ನಾನೊಬ್ಬ ಕೆಟ್ಟ ವಿಮರ್ಶಕ. ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವವನು ನಾನಲ್ಲ. ನಿರ್ದೇಶಕರು ಬೈಟ್ಸ್ ಕೊಡಬೇಕೆಂದು ಮನವಿ ಮಾಡಿಕೊಂಡರು. ಸಿನಿಮಾ ನೋಡಿದ ಮೇಲೆ ಕೊಡುತ್ತೇನೆಂದು ಕಂಡೀಷನ್ ಹಾಕಿದೆ. ನಂತರ 2 ಗಂಟೆ ಸಿನಿಮಾ ನನ್ನನ್ನು ನೋಡಿಸಿಕೊಂಡು ಹೋಯಿತು. ಈ ನೋಡಿಸಿಕೊಂಡು ಹೋಗುವುದೇ ಮೊದಲ ಶಕ್ತಿ. ಪುಸ್ತಕ ಓದಿಸಿಕೊಂಡು ಹೋಗುತ್ತದೆ. ಸಂಗೀತವನ್ನು ಕೇಳುವಾಗ ನಮ್ಮನ್ನು ಬೇರೆಯ ಲೋಕಕ್ಕೆ ಕರೆದುಕೊಂಡು ಹೋಗುವ ರೀತಿಯಲ್ಲಿ ಈ ಸಿನಿಮಾವನ್ನು ಮಾಡಿದ್ದಾರೆ’ ಎಂದು ದತ್ತಣ್ಣ.
‘ಈ ಸಿನಿಮಾ ಗಾಢವಾಗಿ ಮನಸ್ಸಿಗೆ ತಟ್ಟುತ್ತದೆ. ಹೊಸಬರಾದರೂ ಕಲಾವಿದರ ಪ್ರತಿಭೆಯಲ್ಲಿ ಕೊರತೆ ಕಾಣಿಸಿಲ್ಲ. ಮುಂದಿನ ದಿನಗಳಲ್ಲಿ ಸಿನಿಮಾ ಬಿಡುಗಡೆ ಆದಾಗ ಅಲ್ಲಿ ಅವಕಾಶ ಸಿಕ್ಕರೆ ಮತ್ತಷ್ಟು ಮಾತನಾಡುವೆ’ ಎಂದು ದತ್ತಣ್ಣ ಹೇಳಿದ್ದಾರೆ. ಕಾಲ್ಪನಿಕ ಡಾರ್ಕ್ ಡ್ರಾಮಾ ಜಾನರ್‌ನ ಕಹಾನಿಯನ್ನು ‘ಲೈಫ್ ಆಫ್ ಮೃದುಲಾ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಮೃದುಲಾ ಎಂಬುವಳ ಜೀವನದಲ್ಲಿ ಎದುರಾಗುವ ವಿಭಿನ್ನ ಕಾಲಘಟ್ಟಗಳು ಈ ಕಥೆಯಲ್ಲಿ ಇವೆ ಎಂದು ಚಿತ್ರತಂಡದವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ಮೃದುಲ’ ಚಿತ್ರದ ಹಾಡು ಬಿಡುಗಡೆ ಮಾಡಿ ನೇರ ಅನಿಸಿಕೆ ಹಂಚಿಕೊಂಡ ಮೊಹಮ್ಮದ್ ನಲಪಾಡ್
‘ಲೈಫ್ ಆಫ್ ಮೃದುಲಾ’ ಸಿನಿಮಾದಲ್ಲಿ ನಾಯಕಿಯಾಗಿ ಪೂಜ ಲೋಕಪುರ್ ಅಭಿನಯಿಸಿದ್ದಾರೆ. ಆಶಾ ಸುಜಯ್, ಕುಲದೀಪ್, ಯೋಗಿ ದೇವಗಂಗೆ, ಶಶಾಂಕ್, ಅನೂಪ್ ಥಾಮಸ್, ತೇಜಸ್ವಿನಿ ಆರ್. ಗೌಡ, ಪ್ರೀತಿ ಚಿದಾನಂದ್, ಶರೀಫ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ. ರಾಹುಲ್ ಎಸ್. ವಾಸ್ತರ್ ಅವರು ಸಂಗೀತ ನೀಡಿದ್ದಾರೆ. ಅಚ್ಚು ಸುರೇಶ್ ಅವರ ಛಾಯಾಗ್ರಹಣ, ವಸಂತ ಕುಮಾರ್ ಕೆ. ಅವರ ಸಂಕಲನ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.