ಕನ್ನಡ ಚಿತ್ರರಂಗದಲ್ಲಿ (Sandalwood) ಭಿನ್ನ-ಭಿನ್ನ ಕತೆಗಳು ತೆರೆಗೆ ಬರುತ್ತಿವೆ. ಎಲ್ಲ ಕಾಲದಲ್ಲಿಯೂ ಭಿನ್ನ ಮಾದರಿಯ ಕತೆಗಳು ಕನ್ನಡ ಚಿತ್ರರಂಗದಲ್ಲಿ ಬರುತ್ತಿದ್ದವಾದರೂ ಇತ್ತೀಚೆಗೆ ತುಸು ಹೆಚ್ಚೇ ಭಿನ್ನವಾದ ಕತೆಗಳನ್ನು ಅಲ್ಲಲ್ಲಿ ಹೊಸಬರ ತಂಡ ತೆರೆಗೆ ತರುತ್ತಿವೆ. ಕೆಲವಕ್ಕೆ ಗೆಲುವು ಸಿಗುತ್ತಿವೆ, ಹಲವು ಸೋಲುತ್ತಿವೆ. ಇದರ ನಡುವೆ ಇದೀಗ ‘ರಾವೆನ್‘ (Raven) ಹೆಸರಿನ ಭಿನ್ನ ಕತೆಯನ್ನು ಹೊತ್ತು ತಂಡವೊಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಸಿನಿಮಾದ ಪೋಸ್ಟರ್ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದೆ.
ಹುಣ್ಣಿಮೆ ಚಂದಿರನ ಹಿನ್ನೆಲೆಯಲ್ಲಿ ರೆಂಬೆಯೊಂದರ ಮೇಲೆ ಕುಳಿತಿರುವ ಕಾಗೆಯೊಂದರ ಚಿತ್ರವಿರುವ ‘ರಾವೆನ್’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಪೋಸ್ಟರ್ ಹಲವು ವಿಧದಲ್ಲಿ ಆಕರ್ಷಕವಾಗಿದೆ. ಭಿನ್ನವಾಗಿಯೂ, ಕುತೂಹಲ ಕೆರಳಿಸುವಂತೆಯೂ ಇದೆ ಈ ಪೋಸ್ಟರ್.
‘ರಾವೆನ್’ ಸಿನಿಮಾದ ಕತೆಯಲ್ಲಿ ಕಾಗೆಯೇ ನಾಯಕ ಅಂತೆ! ಇದೇ ಈ ಸಿನಿಮಾದ ವಿಶೇಷ. ಇತ್ತೀಚಿನ ದಿನಗಳಲ್ಲಿ ಕಥಾವಸ್ತು ಪ್ರಧಾನವಾಗಿರುವ ಸಾಕಷ್ಟು ಚಿತ್ರಗಳು ನಮ್ಮ ಚಿತ್ರರಂಗದಲ್ಲಿ ಸದ್ದು ಮಾಡುತ್ತಿವೆ. ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದಲ್ಲಿ ನಾಯಿಯೇ ಪ್ರಮುಖ ಪಾತ್ರದಾರಿ. ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾದಲ್ಲಿ ಮೂಗುತಿ ಹಾಕಿರುವ ಟಗರಿನ ಪೋಸ್ಟರ್ ಸಖತ್ ವೈರಲ್ ಆಗಿದೆ. ‘ಟೋಬಿ’ ಸಿನಿಮಾದಲ್ಲಿ ಟಗರಿಗೂ ಕತೆಯಲ್ಲಿ ಪ್ರಮುಖ ಪಾತ್ರ ಇರುವಂತಿದೆ. ಈಗ ಇದೇ ಸಾಲಿಗೆ ‘ರಾವೆನ್’ ಸಿನಿಮಾ ಸೆರ್ಪಡೆ ಆಗಿದೆ.
ಇದನ್ನೂ ಓದಿ:Hostel Hudugaru Bekagiddare: ಹಾಸ್ಟೆಲ್ ಹುಡುಗರು ಸಿನಿಮಾ ನೋಡಿ ಕೊಂಡಾಡಿದ ರಮೇಶ್
‘ರಾವೆನ್’ ಸಿನಿಮಾದ ಪೂರ್ಣ ಕತೆಯನ್ನು ಕಾಗೆಯ ಮೇಲೆಯೇ ಹೆಣದಿದ್ದಾರೆ ನಿರ್ದೇಶಕ ವೇದ್. ಕನ್ನಡ ಚಿತ್ರರಂಗದಲ್ಲಿ ಸಧಭಿರುಚಿಯ ಚಿತ್ರಗಳನ್ನು ನೀಡಿರುವ ಪ್ರಬಿಕ್ ಮೊಗವೀರ್ ಈ ಸಿನಿಮಾದ ನಿರ್ಮಾಪಕ. ಈ ಹಿಂದೆ ಸಂಕಲನಕಾರರಾಗಿ ಖ್ಯಾತ ನಿರ್ದೇಶಕರುಗಳಾದ ಎ ಪಿ ಅರ್ಜುನ್ ಮತ್ತು ಪಿ ಎನ್ ಸತ್ಯರವರ ಜೊತೆಗೆ ಕೆಲಸ ಮಾಡಿರುವ ಅನುಭವವಿರುವ ವೇದ್ ಈ ಸಿನಿಮಾದ ನಿರ್ದೇಶಕನಾಗಿ ಜವಾಬ್ದಾರಿ ಹೊತ್ತಿದ್ದಾರೆ. ವೇದ್ ‘ಸ್ಕೂಲ್ ರಾಮಾಯಣ’ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಅದು ಕೂಡ ಇನ್ನೇನು ಬಿಡುಗಡೆ ಆಗಬೇಕಿದೆ.
ಪ್ರಬಿಕ್ ಮೊಗವೀರ್ ಅವರ ಹಿಂದಿನ ಚಿತ್ರಗಳಲ್ಲಿ ‘ನಾಗವಲ್ಲಿ’, ‘ಗಡಿಯಾರ’, ‘ನಾಯಿ’, ‘ಅಸುರ’ ಎನ್ನುವ ಕಥಾವಸ್ತು ಪ್ರಧಾನವಾಗಿತ್ತು ಹಾಗೆ ಈ ಸಿನಿಮಾದಲ್ಲಿಯೂ ವಿಭಿನ್ನ ಪ್ರಯತ್ನ ಮಾಡಲಾಗಿದೆ. ವೇದ್ ಮತ್ತು ಪ್ರಬಿಕ್ ಮೊಗವೀರ್ ಜೊತೆಯಾಗಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಪೂರ್ಣಗೊಳಿಸಿದ್ದು ಸಧ್ಯದಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಸಿನಿಮಾದ ನಟರ ಮಾಹಿತಿಯನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಸಿನಿಮಾದಲ್ಲಿ ಸಾಕಷ್ಟು ಅನುಭವಿ ಕಲಾವಿದರು ನಟಿಸಲಿದ್ದಾರೆ ಹಾಗೂ ಅನುಭವಿ ತಂತ್ರಜ್ಞರನ್ನೇ ಆಯ್ಕೆ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ