ರೇಣುಕಾ ಸ್ವಾಮಿಯ (Renuka Swamy) ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದರ್ಶನ್ ಅವರನ್ನು ನೋಡಲು ವಿನೋದ್ ಪ್ರಭಾಕರ್ ಬಂದಿದ್ದಾರೆ. ಇಂದು (ಜೂನ್ 24) ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ವಿನೋದ್ ಪ್ರಭಾಕರ್ (Vinod Prabhakar) ಮಾತನಾಡಿದರು. ಇಷ್ಟು ದಿನ ದರ್ಶನ್ ಅವರನ್ನು ನೋಡಲು ಬಂದಿಲ್ಲ ಹಾಗೂ ಸೋಶಿಯಲ್ ಮೀಡಿಯಾದಲ್ಲೂ ವಿನೋದ್ ಪ್ರಭಾಕರ್ ಯಾವುದೇ ಪೋಸ್ಟ್ ಹಾಕಿಲ್ಲ ಎಂದು ಕೆಲವರು ಟೀಕೆ ಮಾಡಿದ್ದರು. ಆ ಬಗ್ಗೆಯೂ ಈಗ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಜೈಲಿನ ಒಳಗೆ ದರ್ಶನ್ (Darshan) ಅವರು ಮೌನವಾಗಿದ್ದಾರೆ ಎಂದು ಕೂಡ ವಿನೋದ್ ಪ್ರಭಾಕರ್ ತಿಳಿಸಿದ್ದಾರೆ.
‘ರೇಣುಕಾ ಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕು. ಅವರ ಪತ್ನಿ ಗರ್ಭಿಣಿ ಆಗಿದ್ದಾರೆ. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಕೊಡಲಿ ಅಂತ ನಾನು ಕೇಳಿಕೊಳ್ಳುತ್ತೇನೆ’ ಎನ್ನುವ ಮೂಲಕ ವಿನೋದ್ ಪ್ರಭಾಕರ್ ಮಾತು ಪ್ರಾರಂಭಿಸಿದ್ದಾರೆ. ‘ಇದು ಆಗಬಾರದಾಗಿತ್ತು. ನಿಮಗೆಲ್ಲ ಎಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತಿರುವುದು. ಯಾಕೆಂದರೆ, ನಾನು ದರ್ಶನ್ ಅವರನ್ನು ಭೇಟಿ ಮಾಡಿ 4 ತಿಂಗಳು ಆಗಿತ್ತು. ಕೊನೆಯದಾಗಿ ಬರ್ತ್ಡೇ ಸಮಯದಲ್ಲಿ ಅವರನ್ನು ಭೇಟಿ ಆಗಿದ್ದೆ’ ಎಂದಿದ್ದಾರೆ ವಿನೋದ್ ಪ್ರಭಾಕರ್.
‘ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಬಳಿ ಭೇಟಿ ಮಾಡಲು ತೆರಳಿದ್ದೆ. ಅಲ್ಲಿ ಸಾಧ್ಯವಾಗಲಿಲ್ಲ. ಆದರೆ ಇಂದು ಇಲ್ಲಿ ಭೇಟಿ ಮಾಡಿಕೊಂಡು ಬಂದಿದ್ದೇನೆ. ಅವರು ಮೌನವಾಗಿದ್ದರು. ನಾನು ಸುಮ್ಮನೆ ವಿಶ್ ಮಾಡಿದೆ. ಒಂದೇ ಸೆಕೆಂಡ್ ಮಾತಾಡಿದರು. ಟೈಗರ್ ಅಂತ ಅಂದರು, ನಾನು ಬಾಸ್ ಅಂದೆ. ಅದನ್ನು ಬಿಟ್ಟು ಅವರು ಏನೂ ಮಾತನಾಡಿಲ್ಲ. ಶೇಕ್ ಹ್ಯಾಂಡ್ ಮಾಡಿ ಬಂದೆ’ ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಖೈದಿ ಸಂಖ್ಯೆ 6106; ಈ ನಂಬರ್ನಲ್ಲೇ ವಾಹನ ನೋಂದಣಿಗೆ ಹೆಚ್ಚಿದೆ ಬೇಡಿಕೆ
‘ಬೇರೆ ಸಂದರ್ಭಗಳಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಆದರೆ ಈಗ ಏನು ಹೇಳಬೇಕು ತಿಳಿಯಲಿಲ್ಲ. ನನ್ನನ್ನು ಪ್ರತ್ಯೇಕವಾಗಿ ಒಂದು ರೂಮಿನಲ್ಲಿ ಕೂರಿಸಿದ್ದರು. ವಿಜಯಲಕ್ಷ್ಮಿ ಅಥವಾ ವಿನೀಶ್ ಬಂದಿದ್ದು ನನಗೆ ಗೊತ್ತಿಲ್ಲ. ಬೇರೆ ಯಾರು ಬಂದಿದ್ದಾರೆ ಅಂತ ನಾನು ನೋಡಲಿಲ್ಲ’ ಎಂದಿದ್ದಾರೆ ವಿನೋದ್ ಪ್ರಭಾಕರ್.
‘ಕೆಲವು ದಿನಗಳಿಂದ ನಾನು ನೋಡುತ್ತಿದ್ದೇನೆ. ವಿನೋದ್ ಪ್ರಭಾಕರ್ ಬಂದಿಲ್ಲ, ಹೇಳಿಕೆ ನೀಡಲ್ಲ, ಎಲ್ಲಿಯೂ ಪೋಸ್ಟ್ ಹಾಕಿಲ್ಲ ಅಂತ ಜನರು ಹೇಳುತ್ತಿದ್ದಾರೆ. ಪೋಸ್ಟ್ ಹಾಕುವುದರಿಂದ ಈ ಸಮಸ್ಯೆ ಬಗೆಹರಿಯುವುದಾಗಿದ್ದರೆ ನಾನೇ ಒಂದು ಲಕ್ಷ ಪೋಸ್ಟ್ ಹಾಕುತ್ತಿದ್ದೆ. ಇದು ಬಹಳ ಗಂಭೀರವಾಗಿದೆ. ಪೊಲೀಸ್ ತನಿಖೆ ನಡೆಯುತ್ತಿದೆ. ಅದಕ್ಕೆ ಯಾವುದೇ ತೊಂದರೆ ಆಗಬಾರದು. ನಮಗೆ ಎಷ್ಟು ಗೊತ್ತಿದೆಯೋ ಅಷ್ಟು ಮಾತ್ರ ನಾವು ಹೇಳಬೇಕು. ದರ್ಶನ್ ಅವರನ್ನು ಭೇಟಿ ಮಾಡುವ ತನಕ ನಾನು ಮಾತನಾಡಬಾರದು ಅಂತ ಇದ್ದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಲ್ಲರಿಗೂ ನ್ಯಾಯ ಸಿಗಬೇಕು. ಎಲ್ಲರಿಗೂ ಒಳ್ಳೆಯದಾಗಬೇಕು. ದೇವರ ಮೇಲೆ ನನಗೆ ಅಪಾರವಾದ ಭಕ್ತಿ ಇದೆ’ ಎಂದು ಹೇಳಿದ್ದಾರೆ ವಿನೋದ್ ಪ್ರಭಾಕರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.