ದರ್ಶನ್ ಆಪ್ತ ತರುಣ್ ಸುಧೀರ್ ಜತೆ ಹಸೆಮಣೆ ಏರಲು ಸಜ್ಜಾದ ‘ರಾಬರ್ಟ್’ ನಟಿ ಸೋನಲ್?
ದರ್ಶನ್ ನಟನೆಯ ‘ರಾಬರ್ಟ್’, ‘ಕಾಟೇರ’ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್ ಬಗ್ಗೆ ಈಗೊಂದು ಸುದ್ದಿ ಕೇಳಿಬಂದಿದೆ. ನಟಿ ಸೋನಲ್ ಮಾಂಥೆರೋ ಜೊತೆ ತರುಣ್ ಸುಧೀರ್ ಮದುವೆ ಆಗಲಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ತರುಣ್ ಸುಧೀರ್ ನಿರ್ದೇಶನ ಮಾಡಿದ್ದ ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ಅವರು ಒಂದು ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಡೈರೆಕ್ಟರ್ ಆಗಿ ಗುರುತಿಸಿಕೊಂಡಿರುವ ಅವರು ಇಷ್ಟು ದಿನ ಸಿಂಗಲ್ ಆಗಿದ್ದರು. ತರುಣ್ ಸುಧೀರ್ ಮದುವೆ (Tharun Sudhir Marriage) ಯಾವಾಗ ಎಂದು ಆಪ್ತರು, ಅಭಿಮಾನಿಗಳು ಕೇಳುತ್ತಲೇ ಇದ್ದರು. ಈಗ ಅವರ ಕಡೆಯಿಂದ ಒಂದು ಸಿಹಿ ಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಗಾಂಧಿನಗರದಲ್ಲಿ ಗುಸುಗುಸು ಕೇಳಿಬಂದಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ಸೋನಲ್ ಮಾಂಥೆರೋ (Sonal Monteiro) ಜೊತೆ ತರುಣ್ ಸುಧೀರ್ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸೋನಲ್ ಮಾಂಥೆರೋ ಅವರು ಕರಾವಳಿ ಸುಂದರಿ. ತುಳು ಸಿನಿಮಾಗಳ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ‘ಅಭಿಸಾರಿಕೆ’, ‘ಎಂಎಲ್ಎ’, ‘ಪಂಚತಂತ್ರ’, ‘ರಾಬರ್ಟ್’ ಮುಂತಾದ ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ. ಈವರೆಗೂ ಅವರು ಮದುವೆ ಬಗ್ಗೆ ಬಾಯಿ ಬಿಟ್ಟಿಲ್ಲ. ಹಾಗಿದ್ದರೂ ಗಾಸಿಪ್ ಹಬ್ಬಿದೆ.
ತರುಣ್ ಸುಧೀರ್ ಮತ್ತು ಸೋನಲ್ ಮಾಂಥೆರೋ ಅವರು ‘ರಾಬರ್ಟ್’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. 2021ರಲ್ಲಿ ತೆರೆಕಂಡ ಆ ಸಿನಿಮಾಗೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದರೆ, ಒಂದು ಪ್ರಮುಖ ಪಾತ್ರದಲ್ಲಿ ಸೋನಲ್ ಮಾಂಥೆರೋ ನಟಿಸಿದ್ದರು. ಇಬ್ಬರೂ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಕಡೆಯಿಂದಲೇ ಅಧಿಕೃತ ಸುದ್ದಿ ಹೊರಬೀಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: ಸೀರೆಯಲ್ಲಿ ಎಷ್ಟು ಚಂದ ನೋಡಿ ಕನ್ನಡದ ನಟಿ ಸೋನಲ್ ಮೊಂತೆರೋ
ಸ್ಯಾಂಡಲ್ವುಡ್ನಲ್ಲಿ ತರುಣ್ ಸುಧೀರ್ ಅವರು ಬಹುಬೇಡಿಕೆ ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ಅವರು ನಿರ್ದೇಶನ ಮಾಡಿದ ‘ರಾಬರ್ಟ್’ ಸಿನಿಮಾದಲ್ಲಿ ದರ್ಶನ್ ಅವರು ನಟಿಸಿದ್ದರು. ಬಳಿಕ ಅವರಿಬ್ಬರ ಕಾಂಬಿನೇಷನ್ನಲ್ಲಿ ‘ಕಾಟೇರ’ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಸಖತ್ ಬೇಡಿಕೆ ಹೊಂದಿರುವ ಅವರು ಇಷ್ಟು ದಿನ ಮದುವೆ ಬಗ್ಗೆ ಗಮನ ಹರಿಸಿರಲಿಲ್ಲ. ಈಗ ಸೋನಲ್ ಮಾಂಥೆರೋ ಜೊತೆ ವಿವಾಹ ಆಗಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ತರುಣ್ ಸುಧೀರ್ ಅವರು ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಬ್ಯುಸಿ ಆಗಿದ್ದಾರೆ. ಕೆಲವು ಸಿನಿಮಾಗಳಿಗೆ ಕ್ರಿಯೇಟಿವ್ ಹೆಡ್ ಆಗಿ ಅವರು ಕೆಲಸ ಮಾಡಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಅಪಾರ ಅನುಭವ ಇದೆ. ‘ಫಿಲ್ಮ್ಫೇರ್’, ‘ಸೈಮಾ’ ಮುಂತಾದ ಪ್ರಶಸ್ತಿಗಳು ಅವರಿಗೆ ಸಿಕ್ಕಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.