
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮಹತ್ವದ ಘಟ್ಟದಲ್ಲಿದೆ. ಆರೋಪಿ ಪ್ರದೋಶ್, ಈಗಾಗಲೇ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಪ್ರಕರಣಕ್ಕೆ ಮಹತ್ವದ ತಿರುವನ್ನು ನೀಡಿದೆ. ಅಂದು ನಡೆದ ಘಟನೆಯ ಹಲವು ಮಹತ್ವದ ಮಾಹಿತಿಯನ್ನು ಪ್ರದೋಶ್ ಈಗಾಗಲೇ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಇದರ ನಡುವೆ ಪ್ರತ್ಯಕ್ಷ ಸಾಕ್ಷಿ ಆಗಿದ್ದ ಪುನೀತ್ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದು, ಪ್ರತಿಕೂಲ ಸಾಕ್ಷಿಯಾಗಿ ಪರಿಣಮಿಸಿದ್ದಾರೆ. ಇದು ಸರ್ಕಾರಿ ವಕೀಲರಿಗೆ ತಲೆನೋವಾಗಿದೆ.
ಪ್ರತಿಕೂಲ ಸಾಕ್ಷಿ ಪುನೀತ್ರ ಪಾಟಿಸವಾಲನ್ನು ಎಸ್ಪಿಪಿ ಪ್ರಸನ್ನ ಕುಮಾರ್ ನಡೆಸಿದ್ದು, ವಕೀಲರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಪುನೀತ್ ‘ಗೊತ್ತಿಲ್ಲ’ ಎಂಬ ಉತ್ತರವನ್ನೇ ನೀಡಿದ್ದಾರೆ. ಅಲ್ಲದೆ, ತಾನು ಪ್ರಕರಣದ ಬಗ್ಗೆ ಟಿವಿಯಲ್ಲಿ ಮಾತ್ರವೇ ನೋಡಿದ್ದಾಗಿ ಹೇಳಿದ್ದಾರೆ. ಈ ಹಿಂದೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾಗ ತಾನು ಹೆದರಿದ್ದು, ಅದೇ ಕಾರಣಕ್ಕೆ ಆ ರೀತಿ ಹೇಳಿಕೆ ದಾಖಲಿಸಿದ್ದಾಗಿಯೂ, ಆ ಹೇಳಿಕೆಗಳು ಟಿವಿಯಲ್ಲಿ ನೋಡಿ ತಿಳಿದ ಮಾಹಿತಿಯನ್ನೇ ಆಧರಿಸಿವೆ ಎಂದು ಪುನೀತ್ ಹೇಳಿದ್ದಾನೆ. ಸಿಆರ್‌ಪಿಸಿ 164 ಹೇಳಿಕೆಯನ್ನೂ ಸಹ ಪುನೀತ್ ನಿರಾಕರಿಸಿದ್ದಾನೆ.
ಪುನೀತ್, ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ರೇಣುಕಾ ಸ್ವಾಮಿ ಮೇಲೆ ನಡೆದ ಹಲ್ಲೆಯನ್ನು ನೋಡಿದ್ದ. ಈ ಹಿಂದೆ ನೀಡಿದ್ದ ಹೇಳಿಕೆಗಳಲ್ಲಿ ಪುನೀತ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದ. ಆದರೆ ಈಗ ತನ್ನ ಹೇಳಿಕೆಯನ್ನು ಬದಲಾವಣೆ ಮಾಡಿದ್ದಾನೆ. ಶೆಡ್ನ ಮಾಲೀಕ ವಿನಯ್ ಅನ್ನು ಹೊರತಾಗಿ ಇನ್ಯಾರನ್ನೂ ಪುನೀತ್ ಗುರುತಿಸಿಲ್ಲ. ಉಳಿದವರ್ಯಾರೂ ತನಗೆ ಗೊತ್ತಿಲ್ಲ ಎಂದಿದ್ದಾನೆ. ಪುನೀತ್, ತನ್ನ ಹೇಳಿಕೆ ಬದಲಾವಣೆ ಮಾಡಿದ್ದು ಪ್ರಕರಣವನ್ನು ಇನ್ನಷ್ಟು ಕುತೂಹಲಗೊಳಿಸಿದೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಕೇಸ್: ವಿಚಾರಣೆಗೆ ಗೈರು, ಪ್ರತ್ಯಕ್ಷ ಸಾಕ್ಷಿ ಪುನೀತ್ ಬಂಧನಕ್ಕೆ ವಾರೆಂಟ್
ಇನ್ನು ದರ್ಶನ್ ಮತ್ತೆ ಬೆನ್ನು ನೋವಿನಿಂದ ಬಳಲುತ್ತಿದ್ದು, ಫಿಸಿಯೋಥೆರಪಿಗಾಗಿ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಜೈಲಿನಲ್ಲೇ ಚಿಕಿತ್ಸೆ ಪಡೆಯಲು ಅನುಮತಿ ನೀಡಿದೆ. ಜೊತೆಗೆ ದರ್ಶನ್ ಆರೋಗ್ಯದ ಕುರಿತು ವರದಿ ನೀಡುವಂತೆ ಸಹ ಸೂಚಿಸಿತ್ತು. ಜೈಲಿನ ವೈದ್ಯಾಧಿಕಾರಿಗಳು ದರ್ಶನ್ ಆರೋಗ್ಯದ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ