ದರ್ಶನ್ ವಿರುದ್ಧ ಟ್ರಯಲ್ ಆರಂಭ: ಕೋರ್ಟ್ ವಿಚಾರಣೆ ಹೇಗಿರುತ್ತೆ? ಇಲ್ಲಿದೆ ಪೂರ್ತಿ ಮಾಹಿತಿ..

ದರ್ಶನ್, ಪವಿತ್ರಾ ಗೌಡ ಮುಂತಾದ ಆರೋಪಿಗಳು ಇನ್ನೂ ಎಷ್ಟು ದಿನ ಜೈಲಿನಲ್ಲಿ ಇರಬೇಕಾಗುತ್ತದೆ? ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಾದ-ಪ್ರತಿವಾದ ಯಾವ ರೀತಿ ನಡೆಯಲಿದೆ? ಈ ಕೇಸ್​​​ನಲ್ಲಿ ಯಾವೆಲ್ಲ ಸಾಕ್ಷಿಗಳು ಇವೆ? ವಕೀಲರು ಯಾರು? ಇಂಥ ಎಲ್ಲ ಪಶ್ನೆಗಳಿಗೂ ಈ ಲೇಖನದಲ್ಲಿದೆ ಉತ್ತರ..

ದರ್ಶನ್ ವಿರುದ್ಧ ಟ್ರಯಲ್ ಆರಂಭ: ಕೋರ್ಟ್ ವಿಚಾರಣೆ ಹೇಗಿರುತ್ತೆ? ಇಲ್ಲಿದೆ ಪೂರ್ತಿ ಮಾಹಿತಿ..
Darshan, Pavithra Gowda, Renukaswamy
Edited By:

Updated on: Dec 04, 2025 | 8:40 PM

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (Renukaswamy Murder Case) ಆರೋಪಿಯಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ಡಿಸೆಂಬರ್ 17ರಿಂದ ಕೋರ್ಟ್​​ನಲ್ಲಿ ಟ್ರಯಲ್ ಆರಂಭವಾಗಲಿದೆ. ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿಯಲ್ಲಿ ದಾಖಲಿಸಿದ ಅಂಶಗಳನ್ನು ಕೋರ್ಟ್​​ನಲ್ಲಿ ಸಾಬೀತುಪಡಿಸುವ ಪ್ರಕ್ರಿಯೆಯೇ ಟ್ರಯಲ್. ಪೊಲೀಸರು ಕಲೆ ಹಾಕಿರುವ ಸಾಕ್ಷಿಗಳು ಕೋರ್ಟ್​​ನಲ್ಲಿ ಸಾಬೀತಾದರೆ ಮಾತ್ರ ಆರೋಪಿಗಳನ್ನು ತಪ್ಪಿತಸ್ಥರೆಂದು ಕೋರ್ಟ್ ಪರಿಗಣಿಸಲಿದೆ. ಹೀಗಾಗಿ ಪ್ರಾಸಿಕ್ಯೂಷನ್ ಪಾಲಿಗೆ ಡಿ.17ರಿಂದ ಮಹತ್ವದ ಘಟ್ಟ ಆರಂಭವಾಗಿದೆ. ಎರಡೂ ಕಡೆ ಘಟಾನಾಘಟಿ ವಕೀಲರಿಂದಲೇ ವಿಚಾರಣೆಯಾಗಲಿದೆ. ದರ್ಶನ್ (Darshan) ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಕೇಸ್ ನಡೆಸುವುದು ಬಹುತೇಕ ಪಕ್ಕಾ ಆಗಿದೆ. ಪವಿತ್ರಾ ಗೌಡ ಪರ ವಕೀಲ ಬಾಲನ್ ವಕಾಲತ್ತು ವಹಿಸಿದ್ದಾರೆ. ಇನ್ನು, ಪ್ರಾಸಿಕ್ಯೂಷನ್ ಪರ ಎಸ್‌ಪಿಪಿಯಾಗಿ ಪಿ. ಪ್ರಸನ್ನ ಕುಮಾರ್ ವಕಾಲತ್ತು ವಹಿಸಲಿದ್ದಾರೆ.

ಡಿಸೆಂಬರ್ 17ರಂದು ಟ್ರಯಲ್ ಅಥವಾ ಸಾಕ್ಷ್ಯ ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿರುವ 57ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಇಬ್ಬರು ಸಾಕ್ಷಿಗಳಿಗೆ ಸಮನ್ಸ್ ಜಾರಿಗೆ ಆದೇಶಿಸಿದ್ದಾರೆ. ತನಿಖಾ ಹಂತದಲ್ಲಿ ಪ್ರಾಸಿಕ್ಯೂಷನ್​ನವರು 272 ಸಾಕ್ಷಿಗಳನ್ನು ಆರೋಪಪಟ್ಟಿಯಲ್ಲಿ ನಮೂದಿಸಿದ್ದಾರೆ. ಇದರಲ್ಲಿ ಖಾಸಗಿ ಸಾಕ್ಷಿಗಳ ಸಂಖ್ಯೆ 100, ಪ್ರತ್ಯಕ್ಷ ಸಾಕ್ಷಿಗಳ ಸಂಖ್ಯೆ 2, ಭಾಗಶಃ ಪ್ರತ್ಯಕ್ಷ ಸಾಕ್ಷಿಗಳ ಸಂಖ್ಯೆ 5, ಮಹಜರ್ ಸಾಕ್ಷಿಗಳ ಸಂಖ್ಯೆ 62, ಎಫ್‌ಎಸ್‌ಎಲ್‌ ಸಾಕ್ಷಿಗಳ ಸಂಖ್ಯೆ 15, ವೈದ್ಯ ಸಾಕ್ಷಿ 1, ತಾಂತ್ರಿಕ ಸಾಕ್ಷಿ 04, ಬ್ಯಾಂಕ್ ಸಾಕ್ಷಿಗಳು 17, ಮ್ಯಾಜಿಸ್ಟ್ರೇಟ್ ಸಾಕ್ಷಿಗಳು 2, ಪೊಲೀಸ್ ಸಾಕ್ಷಿಗಳು 64 ಹೀಗೆ ಒಟ್ಟು 272 ಸಾಕ್ಷಿಗಳನ್ನು ಆರೋಪಪಟ್ಟಿಯಲ್ಲಿ ನಮೂದಿಸಲಾಗಿದೆ.

ಇದರಲ್ಲಿ ಪ್ರಮುಖವೆನ್ನಿಸುವ ಸಾಕ್ಷಿಗಳನ್ನು ಕೋರ್ಟ್​ಗೆ ಹಾಜರುಪಡಿಸಲಿದ್ದು, ಅವರ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಳ್ಳಲಿದೆ. ಮೊದಲ ಹಂತವಾಗಿ ಇಬ್ಬರು ಸಾಕ್ಷಿಗಳಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಆರೋಪಪಟ್ಟಿಯಲ್ಲಿ 7 ಮತ್ತು 8ನೇ ಸಾಕ್ಷಿ ಎಂದು ನಮೂದಾಗಿರುವ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು, ತಾಯಿ ರತ್ನಪ್ರಭಾ ಹೇಳಿಕೆಯನ್ನು ಡಿಸೆಂಬರ್ 17ರಂದು ಕೋರ್ಟ್ ದಾಖಲಿಸಿಕೊಳ್ಳಲಿದೆ. ಹೇಳಿಕೆ ದಾಖಲಿಸಿದ ಇನ್ನಿತರ ಸಾಕ್ಷಿಗಳಿಗೂ ಸಮನ್ಸ್ ಜಾರಿಯಾಗಲಿದೆ. ಹೇಳಿಕೆ ನೀಡಿದ ಬಳಿಕ ಆರೋಪಿಗಳ ಪರ ವಕೀಲರು ಎಲ್ಲ ಸಾಕ್ಷಿಗಳನ್ನೂ ಪಾಟೀಸವಾಲಿಗೆ ಒಳಪಡಿಸಲಿದ್ದಾರೆ.

ಇದನ್ನೂ ಓದಿ: ದರ್ಶನ್ ಕ್ಯಾರವಾನ್ ಒಳಗೆ ಏನು ನಡೆಯುತ್ತದೆ? ವಿವರಿಸಿದ ಅಚ್ಯುತ್ ಕುಮಾರ್

ಒಂದು ವೇಳೆ ಪ್ರಾಸಿಕ್ಯೂಷನ್ ಹಾಜರುಪಡಿಸಿ ಸಾಕ್ಷಿಗಳಲ್ಲಿ ಯಾರಾದರೂ ಉಲ್ಟಾ ಹೊಡೆದರೆ ಅವರನ್ನು ಪ್ರತಿಕೂಲ ಸಾಕ್ಷಿಗಳೆಂದು ಪರಿಗಣಿಸಿ, ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಾಟೀಸವಾಲಿಗೆ ಒಳಪಡಿಸಲಿದ್ದಾರೆ. ಎಲ್ಲರ ಸಾಕ್ಷ್ಯ ಹೇಳಿಕೆ ಪಾಟೀಸವಾಲು ಮುಗಿದ ಬಳಿಕ ಕೋರ್ಟ್ ಸಿಆರ್‌ಪಿಸಿ 313 ಅಡಿಯಲ್ಲಿ ಆರೋಪಿಗಳ ವಿವರವಾದ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ. ಕೋರ್ಟ್​​ನಲ್ಲಿ ದಾಖಲಿಸಿಕೊಂಡ ಹೇಳಿಕೆಯನ್ನೇ ಆಧರಿಸಿ ಕೋರ್ಟ್ ಆರೋಪಿಗಳಿಗೆ ಪ್ರಶ್ನೆಗಳನ್ನು ಕೇಳಿ ಅವರ ಉತ್ತರಗಳನ್ನು ಪಡೆದುಕೊಳ್ಳಲಿದೆ.

ಆ ಬಳಿಕ ಆರೋಪಿಗಳ ಸಾಕ್ಷಿಗಳಿದ್ದರೆ ಅದನ್ನೂ ಹಾಜರುಪಡಿಸಲು ಸಮಯ ನೀಡಲಿದೆ. ಅವರ ಸಾಕ್ಷ್ಯ ವಿಚಾರಣೆಯಾದ ಬಳಿಕ ವಾದಮಂಡನೆ ನಡೆಯಲಿದೆ. ಎಲ್ಲರ ವಾದಮಂಡನೆ ಕೇಳಿದ ಬಳಿಕ ಕೋರ್ಟ್ ತೀರ್ಪು ನೀಡಲಿದೆ. ಒಂದು ವೇಳೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳಲ್ಲಿ ಯಾವುದೇ ಆರೋಪಿ ಕೊಲೆಯ ತಪ್ಪಿತಸ್ಥನೆಂದು ಕಂಡುಬಂದರೆ, ಕನಿಷ್ಟ ಜೀವಾವಧಿ ಮತ್ತು ದಂಡ ಅಥವಾ ಅಪರೂಪದಲ್ಲಿ ಅಪರೂಪದ ಕೇಸ್ ಎಂದು ಮನವರಿಕೆಯಾದರೆ ಮಾತ್ರ ಮರಣದಂಡನೆಯನ್ನೂ ವಿಧಿಸುವ ಅಧಿಕಾರ ನ್ಯಾಯಾಧೀಶರಿಗಿರಲಿದೆ!

ಈ ಕೇಸಿನಲ್ಲಿ ದರ್ಶನ್ ಮನೆಯಿಂದ ವಶಕ್ಕೆ ಪಡೆಯಲಾದ ಬಟ್ಟೆಗಳು, ಘಟನೆಯ ದಿನದಂದು ಧರಿಸಿದ್ದ ಶೂಗಳು, ಇವುಗಳಲ್ಲಿ ಕಂಡುಬಂದಿರುವ ರಕ್ತದ ಕಲೆಗಳ ಡಿಎನ್‌ಎ, ಸಿಸಿಟಿವಿ ದೃಶ್ಯಗಳು, ಮೊಬೈಲ್ ಟವರ್ ಲೊಕೇಷನ್​ಗಳು, ರೇಣುಕಾಸ್ವಾಮಿ ದೇಹದಲ್ಲಿ ಆದ ಗಾಯಗಳು, ಘಟನೆಯ ಸ್ಥಳವಾದ ಷೆಡ್ ಬಳಿ ದರ್ಶನ್ ತೆಗೆಸಿಕೊಂಡಿರುವ ಫೋಟೋ ಇವೆಲ್ಲವೂ ಸಾಕ್ಷಿಗಳಾಗಿ ಮಹತ್ವದ ಪಾತ್ರವಹಿಸುತ್ತವೆ.

ಇದನ್ನೂ ಓದಿ: ದರ್ಶನ್ ಜೈಲಿಗೆ ಹೋಗಿದ್ದಕ್ಕೆ ‘ದಿ ಡೆವಿಲ್’ ಬಜೆಟ್ ಜಾಸ್ತಿ ಆಯ್ತಾ? ಉತ್ತರಿಸಿದ ನಿರ್ದೇಶಕ

ಈ ಕೇಸ್​​ನಲ್ಲಿ ಬಹುಮುಖ್ಯವಾದ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿದ್ದು ಅವರು ದರ್ಶನ್ ವಿರುದ್ಧ ಹೇಳಿಕೆ ನೀಡಿದರೆ ದರ್ಶನ್​​ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಒಂದು ವೇಳೆ ಪ್ರತ್ಯಕ್ಷ ಸಾಕ್ಷಿಗಳು ಉಲ್ಟಾ ಹೇಳಿಕೆ ನೀಡಿ ಪ್ರತಿಕೂಲ ಸಾಕ್ಷಿಯಾಗಿ ಬದಲಾದರೆ, ಆಗ ಲಭ್ಯವಿರುವ ಸಾಂದರ್ಭಿಕ ಸಾಕ್ಷಿಗಳು, ತಾಂತ್ರಿಕ ಸಾಕ್ಷಿಗಳು, ಎಫ್‌ಎಸ್ಎಲ್ ಸಾಕ್ಷಿಗಳನ್ನು ಮುಂದಿಟ್ಟು ಶಿಕ್ಷೆ ಕೊಡಿಸಲು ಪ್ರಾಸಿಕ್ಯೂಷನ್ ಯತ್ನಿಸಲಿದೆ. ಇದಕ್ಕೆ ಸವಾಲಾಗಿ ಪ್ರತಿ ಹಂತದಲ್ಲಿ ಆಕ್ಷೇಪ ಎತ್ತಲೂ ಆರೋಪಿಗಳ ಪರ ವಕೀಲರು ಸನ್ನದ್ಧರಾಗಿದ್ದಾರೆ.

ಈ ಕೇಸಿನಲ್ಲಿ ನಟ ಚಿಕ್ಕಣ್ಣ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡಾ ಸಾಕ್ಷಿಗಳಾಗಿದ್ದಾರೆ. ಹೀಗಾಗಿ ಈ ಕೇಸ್ ಬಾರೀ ರೋಚಕ ಟ್ವಿಸ್ಟ್ ಮತ್ತು ಟರ್ನ್​​ಗಳಿಂದ ಕೂಡಿರುವ ಸಾಧ್ಯತೆಯೇ ಹೆಚ್ಚಾಗಿದ್ದು, ತನಿಖಾಧಿಕಾರಿ ಚಂದನ್ ಕುಮಾರ್ ಹಾಗೂ ಎಸ್‌ಪಿಪಿ ಪಿ. ಪ್ರಸನ್ನ ಕುಮಾರ್ ವೃತ್ತಿ ಜೀವನದಲ್ಲಿ ಬಹುದೊಡ್ಡ ಕೇಸ್ ಆಗಲಿದೆ. ದರ್ಶನ್, ಪವಿತ್ರಾ ಗೌಡ ಅವರ ಜಾಮೀನು ಭವಿಷ್ಯ ಕೂಡ ಈ ಟ್ರಯಲ್ ಮೇಲೆಯೇ ತೀರ್ಮಾನವಾಗಲಿದೆ. ಪ್ರತ್ಯಕ್ಷ ಸಾಕ್ಷಿಗಳು, ಭಾಗಶಃ ಪ್ರತ್ಯಕ್ಷ ಸಾಕ್ಷಿಗಳು, ಖಾಸಗಿ ಸಾಕ್ಷಿಗಳ ಹೇಳಿಕೆ ಹಾಗೂ ಪಾಟೀಸವಾಲು ಮುಗಿದ ಬಳಿಕ, ಜಾಮೀನಿಗಾಗಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ಪ್ರಯತ್ನ ನಡೆಸಲಿದ್ದಾರೆ. ಹೀಗಾಗಿ ಬೇಗ ಟ್ರಯಲ್ ನಡೆದರೆ 4-5 ತಿಂಗಳ ಬಳಿಕ ಜಾಮೀನಿಗೆ ದರ್ಶನ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.