ರಿಷಬ್ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾ ಚಿತ್ರೀಕರಣ ಮುಕ್ತಾಯ, ಮತ್ತೊಂದು ಸಿನಿಮಾದ ಕತೆ ಏನಾಯ್ತು?

Pramod Shetty: ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಿಸಿ ಅವರ ಗೆಳೆಯ ಪ್ರಮೋದ್ ಶೆಟ್ಟಿ ನಟಿಸಿರುವ ಲಾಫಿಂಗ್ ಬುದ್ಧ ಕನ್ನಡ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ.

ರಿಷಬ್ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾ ಚಿತ್ರೀಕರಣ ಮುಕ್ತಾಯ, ಮತ್ತೊಂದು ಸಿನಿಮಾದ ಕತೆ ಏನಾಯ್ತು?
ಪ್ರಮೋದ್-ರಿಷಬ್

Updated on: Jun 30, 2023 | 9:07 PM

ಕಾಂತಾರ (Kantara) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ (Rishab Shetty), ಇದೀಗ ಕಾಂತಾರ ಸಿನಿಮಾದ ಪ್ರೀಕ್ವೆಲ್ ನಿರ್ದೇಶಿಸುವುದಾಗಿ ಘೋಷಣೆ ಮಾಡಿದ್ದಾರೆ. ಕಾಂತಾರ 2 ಸಿನಿಮಾದ ಕತೆ ಹೆಣೆಯುವುದರಲ್ಲಿ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ (Shooting) ಬಹುಷಃ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ನಿರ್ದೇಶಕರಾಗಿ ರಿಷಬ್​ರ ಸಿನಿಮಾ ಶುರುವಾಗಿಲ್ಲವಾದರೂ ನಿರ್ಮಾಪಕರಾಗಿ ಒಂದು ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ.

ನಿರ್ದೇಶಕ ರಿಷಭ್ ಶೆಟ್ಟಿ ತಮ್ಮ ರಿಷಭ್ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ “ಲಾಫಿಂಗ್ ಬುದ್ದ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಭದ್ರಾವತಿ, ಕಾರ್ಗಲ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣವಾಗಿದೆ. ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ ಚಿತ್ರೀಕರಣ ಆರಂಭವಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಸಹ ಪ್ರಾರಂಭವಾಗಿದೆ.

ಕಾಮಿಡಿ ಹಾಗೂ ಡ್ರಾಮ ಜಾನರ್ ನ ಈ ಚಿತ್ರವನ್ನು ಎಂ.ಭರತ್ ರಾಜ್ ನಿರ್ದೇಶಿಸಿದ್ದಾರೆ. ಪ್ರಮೋದ್ ಶೆಟ್ಟಿ ಹಾಗೂ ತೇಜು ಬೆಳವಾಡಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ದೇಹಾಕಾರದ ಕುರಿತು ಹಾಸ್ಯಮಯ ಆದರೆ ಸಂದೇಶವನ್ನು ಹೊಂದಿರುವ ಸಿನಿಮಾ ಇದಾಗಿರುವ ಸಾಧ್ಯತೆ ಪೋಸ್ಟರ್​ನಿಂದ ತಿಳಿದುಬರುತ್ತಿದೆ. ಸಿನಿಮಾದಲ್ಲಿ ಠೊಣಪ ಪೊಲೀಸ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಸಿದ್ದಾರೆ. ಎಂ.ಭರತ್ ರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಪ್ರಮೋದ್ ಶೆಟ್ಟಿಯ ಜೊತೆಗೆ ತೇಜು ಬೆಳವಾಡಿ ಸಹ ನಟಿಸುತ್ತಿದ್ದಾರೆ. ಇವರು ಹಿರಿಯ ನಟ ಪ್ರಕಾಶ್ ಬೆಳವಾಡಿ ಪುತ್ರಿ.

ಇದನ್ನೂ ಓದಿ:‘ನಾನು ಪಡೆದ ದೊಡ್ಡ ಪ್ರಶಸ್ತಿ ಕನ್ನಡಿಗರು’; ಅಮೆರಿಕದ ನೆಲದಲ್ಲಿ ನಿಂತು ಹೆಮ್ಮೆಯಿಂದ ಹೇಳಿದ ರಿಷಬ್ ಶೆಟ್ಟಿ

ವಿಷ್ಣುವಿಜಯ್ ಸಂಗೀತ ನಿರ್ದೇಶನ ಹಾಗೂ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಲಾಫಿಂಗ್ ಬುದ್ಧ” ಚಿತ್ರಕ್ಕಿದೆ. ಈ ಸಿನಿಮಾದ ಟೀಸರ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಹಿಂದೆ ವಿಲನ್, ಪೋಷಕ ಪಾತ್ರ ಹಾಗೂ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದ ಪ್ರಮೋದ್ ಶೆಟ್ಟಿ, ಲಾಫಿಂಗ್ ಬುದ್ಧ ಸಿನಿಮಾ ಮೂಲಕ ನಾಯಕ ಆಗಿದ್ದಾರೆ ಎನ್ನಬಹುದು. ಏಕೆಂದರೆ ಈ ಸಿನಿಮಾದ ಪ್ರಧಾನ ಪಾತ್ರ ಅವರೇ ಆಗಿದ್ದು ಅವರ ಪಾತ್ರದ ಸುತ್ತಲೇ ಕತೆಯನ್ನು ಹೆಣೆಯಲಾಗಿದೆ.

ರಿಷಬ್ ಶೆಟ್ಟಿ ಈ ಹಿಂದೆ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸಹಿಪ್ರಾ ಶಾಲೆ ಕಾಸರಗೋಡು, ಲಾಕ್​ಡೌನ್ ಸಮಯದಲ್ಲಿ ಮಾಡಿದ ಹೀರೋ, ನಟೇಶ್ ಹೆಗ್ಡೆ ನಿರ್ದೇಶನದ ಪೆಡ್ರೊ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ರಿಷನ್ ನಿರ್ಮಾಣದ ಪೆಡ್ರೊ ಸಿನಿಮಾವಂತೂ ಹಲವು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ಲಾಫಿಂಗ್ ಬುದ್ಧ ಜೊತೆಗೆ ನಟೇಶ್ ಹೆಗ್ಡೆ ನಿರ್ದೇಶನದ ವಾಘಾಚಿ ಪಾಣಿ ಹೆಸರಿನ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಗೆ ಶಿವಮ್ಮ ಹೆಸರಿನ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ