ರಿಷಬ್ ಶೆಟ್ಟಿ ಅವರು ನಟ, ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಮೂಲಕ ಅವರು ‘ಶಿವಮ್ಮ’ ಸಿನಿಮಾ (Shivamma Kannada Movie) ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಗ್ರಾಮೀಣ ಸೊಗಡಿನ ಕಹಾನಿ ಇದೆ. ಈ ಸಿನಿಮಾ ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ಪ್ರಪಂಚದ 17ಕ್ಕೂ ಅಧಿಕ ಫಿಲ್ಮ್ ಫೆಸ್ಟ್ಗಳಲ್ಲಿ ಪ್ರದರ್ಶನ ಕಂಡಿದೆ. ಅಲ್ಲದೇ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಇಂಥ ಹೆಗ್ಗಳಿಕೆ ಇರುವ ‘ಶಿವಮ್ಮ’ (Shivamma) ಸಿನಿಮಾ ಈಗ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಜೂನ್ 14ಕ್ಕೆ ರಾಜ್ಯಾದ್ಯಂತ ಈ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕ ರಿಷಬ್ ಶೆಟ್ಟಿ (Rishab Shetty) ನಿರ್ಧರಿಸಿದ್ದಾರೆ.
‘ಶಿವಮ್ಮ’ ಸಿನಿಮಾದ ಟ್ರೇಲರ್ ಇತ್ತೀಚಿಗೆ ಬಿಡುಗಡೆ ಆಯಿತು. ಈ ವೇಳೆ ಚಿತ್ರದ ರಿಲೀಸ್ ದಿನಾಂಕವನ್ನು ತಿಳಿಸಲಾಯಿತು. ‘ನಮ್ಮ ಕಥಾ ಸಂಗಮ ಸಿನಿಮಾ ನಿರ್ದೇಶಕರಲ್ಲಿ ಜೈಶಂಕರ್ ಕೂಡ ಒಬ್ಬರು. ಆ ಬಳಿಕ ಜೈಶಂಕರ್ ಅವರು ‘ಶಿವಮ್ಮ’ ಚಿತ್ರದ ಕಥೆ ಬಗ್ಗೆ ಹೇಳಿದರು. ಅದು ನನಗೆ ಇಷ್ಟವಾಯ್ತು. ನಿರ್ಮಾಣ ಶುರು ಮಾಡಿದೆವು. ಕೊವಿಡ್ ಬರುವುದಕ್ಕೂ ಮುನ್ನ ಆರಂಭವಾದ ಸಿನಿಮಾ ಇದು. ಈ ಸಿನಿಮಾದಲ್ಲಿ ಅಭಿನಯಿಸಿರುವ ಶಿವಮ್ಮ ಪಾತ್ರಧಾರಿ ಶರಣಮ್ಮ ಚಟ್ಟಿ ಅವರು ಉತ್ತರ ಕರ್ನಾಟಕದ ಯರೇಹಂಚಿನಾಳ ಊರಿನವರು. ಜನರಿಗೆ ಈ ಸಿನಿಮಾ ಇಷ್ಟ ಆಗಲಿದೆ’ ಎಂದರು ರಿಷಬ್ ಶೆಟ್ಟಿ.
‘ನಾನು ಈ ಸಿನಿಮಾ ನೋಡಿದ್ದೇನೆ. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಚಿತ್ರಕ್ಕೆ ಸಿಕ್ಕ ಪ್ರಶಂಸೆ ನೋಡಿ ಖುಷಿಯಾಯಿತು. ಈಗ ಇದನ್ನು ಜನರ ಮುಂದೆ ತರುತ್ತಿದ್ದೇವೆ. ಜೂನ್ 14ರಂದು ಕರ್ನಾಟಕದಾದ್ಯಂತ ಸಿನಿಮಾ ಬಿಡುಗಡೆ ಆಗುತ್ತಿದೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಶಿವಮ್ಮ ಎಂಬ ಹೊಸ ನಾಯಕಿಯನ್ನು ಈ ಚಿತ್ರದ ಮೂಲಕ ಪರಿಚಯ ಮಾಡುತ್ತಿದ್ದೇವೆ’ ಎಂದು ರಿಷಬ್ ಶೆಟ್ಟಿ ಹೇಳಿದರು.
ಜೈಶಂಕರ್ ಆರ್ಯರ್ ಮಾತನಾಡಿ ಸಿನಿಮಾ ಬಗ್ಗೆ ವಿವರಿಸಿದರು. ‘ನಾನು ಮೂಲತಃ ಐಟಿ ಕ್ಷೇತ್ರದ ಉದ್ಯೋಗಿ. ಬೆಂಗಳೂರಿನಲ್ಲೇ ಬೆಳೆದಿದ್ದು. ಆದರೆ ನನ್ನ ತಂದೆಯ ಊರು ಯರೇಹಂಚಿನಾಳ. ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ನನ್ನ ಊರಿನ ಬಗ್ಗೆ ಸಿನಿಮಾ ಮಾಡುವ ಆಸೆ ಉಂಟಾಯಿತು. ಆದ್ದರಿಂದ ನಮ್ಮ ಊರಿಗೆ ಹೋದೆ. ಕೊವಿಡ್ ಕಾರಣದಿಂದ 1 ವರ್ಷ ಅಲ್ಲೇ ಇರಬೇಕಾಯ್ತು. ಅದರಿಂದ ನನಗೆ ಅನುಕೂಲ ಆಯಿತು. ಅಲ್ಲಿನ ಜನರ ಬಗ್ಗೆ ಮತ್ತು ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಸಮಯ ಸಿಕ್ಕಿತ್ತು. ರಿಷಬ್ ಶೆಟ್ಟಿ ಅವರು ನಿರ್ಮಾಣಕ್ಕೆ ಮುಂದೆ ಬಂದರು. ನಮ್ಮೂರಿನ ಶರಣಮ್ಮ ಚಟ್ಟಿ ಅವರು ಶಿವಮ್ಮನ ಪಾತ್ರಕ್ಕೆ ಆಯ್ಕೆಯಾದರು. ಆ ಊರಿನ ಹೆಚ್ಚಿನ ಜನರು ಈ ಸಿನಿಮಾದಲ್ಲಿ ನಟಿಸಿದ್ದಾರೆ’ ಎಂದು ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ: ತಾವು ಓದಿದ ಕೆರಾಡಿ ಕನ್ನಡ ಮಾಧ್ಯಮ ಶಾಲೆ ದತ್ತು ಪಡೆದ ನಟ, ನಿರ್ದೇಶಕ ರಿಷಬ್ ಶೆಟ್ಟಿ
ಶರಣಮ್ಮ ಚಟ್ಟಿ ಮಾತನಾಡಿ, ‘ನಿರ್ದೇಶಕ ಜೈಶಂಕರ್ ಅವರ ತಾಯಿಯನ್ನು ನಾನು ಮಾತನಾಡಿಸಲು ಹೋಗಿದ್ದೆ. ಆಗ ನನ್ನನ್ನು ನೋಡಿದ ಜೈಶಂಕರ್ ಅವರು ‘ಸಿನಿಮಾದಲ್ಲಿ ನಟಿಸುತ್ತೀರಾ’ ಅಂತ ಕೇಳಿದ್ರು. ನಮಗೆ ಇದೆಲ್ಲ ಹೊಸತು. ಯಾವಾಗಲಾದ್ರೂ ಒಮ್ಮೆ ಸಿನಿಮಾ ನೋಡಿ ಗೊತ್ತಿದೆ ಅಷ್ಟೇ. ಬಳಿಕ ನಮ್ಮ ಮನೆಯವರ ಹಾಗು ಊರಿನ ಹಿರಿಯರ ಅನುಮತಿ ಪಡೆದು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ಚಿತ್ರತಂಡದವರು ನಮ್ಮನ್ನೆಲ್ಲ ಚೆನ್ನಾಗಿ ನೋಡಿಕೊಂಡಿದ್ದಾರೆ’ ಎಂದರು. ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶೃತಿ ಕೊಂಡೇನಹಳ್ಳಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.