‘ಮರ್ಯಾದೆ ಪ್ರಶ್ನೆ’ಗೆ ಸಿಕ್ತು ಉತ್ತರ; ಮಧ್ಯಮ ವರ್ಗದ ಭಾವನೆಗಳನ್ನು ಹೇಳಲಿದೆ ಸಿನಿಮಾ

|

Updated on: Mar 15, 2024 | 10:10 AM

ಚಾಮಾರಾಜಪೇಟೆಯ ಪ್ರತಿ ಗಲ್ಲಿಯಲ್ಲಿ ಸಿನಿಮಾದ ಶೂಟಿಂಗ್ ನಡೆದಿದೆಯಂತೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಸಿನಿಮಾನ ಪ್ರೇಕ್ಷಕರ ಮುಂದೆ ಇಡುವ ಆಲೋಚನೆ ಪ್ರದೀಪ್ ಅವರದ್ದು. ಈ ಚಿತ್ರಕ್ಕೆ ನಾಗರಾಜ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ.

‘ಮರ್ಯಾದೆ ಪ್ರಶ್ನೆ’ಗೆ ಸಿಕ್ತು ಉತ್ತರ; ಮಧ್ಯಮ ವರ್ಗದ ಭಾವನೆಗಳನ್ನು ಹೇಳಲಿದೆ ಸಿನಿಮಾ
ಮರ್ಯಾದೆ ಪ್ರಶ್ನೆ
Follow us on

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಸಖತ್ ಸುದ್ದಿ ಆಗಿದ್ದು ‘ಮರ್ಯಾದೆ ಪ್ರಶ್ನೆ’ ವಿಚಾರ. ಹಲವು ಸೆಲೆಬ್ರಿಟಿಗಳು ಒಂದಷ್ಟು ವಿಚಾರಗಳನ್ನು ಹೇಳಿಕೊಂಡು ‘ಮರ್ಯಾದೆ ಪ್ರಶ್ನೆ’ (Maryade Prashne) ಎಂದು ಪೋಸ್ಟ್ ಮಾಡಿದ್ದರು. ಎಲ್ಲರೂ ಮರ್ಯಾದೆ ಪ್ರಶ್ನೆ ಬಗ್ಗೆ ಪೋಸ್ಟ್ ಮಾಡುತ್ತಿರುವುದು ಏಕೆ ಎಂಬ ಗೊಂದಲ ಅಭಿಮಾನಿಗಳಿಗೆ ಕಾಡಿತ್ತು. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದು ಚಿತ್ರದ ಶೀರ್ಷಿಕೆ. ಈ ಚಿತ್ರವನ್ನು ‘ಸಕ್ಕತ್​ ಸ್ಟುಡಿಯೋ’ ಮೂಲಕ ಆರ್​ಜೆ ಪ್ರದೀಪ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪೋಸ್ಟರ್​ನಲ್ಲಿರುವ ‘ದುಡ್ಡಿರೋರಿಗೆ ಎಲ್ಲಾ ದುಡಿಯೋರಿಗೆ ಏನೂ ಇಲ್ಲ’ ಲೈನ್ ಸಾಕಷ್ಟು ಗಮನ ಸೆಳೆದಿದೆ. ಇದೊಂದು ಮಧ್ಯಮ ವರ್ಗದ ಕಥೆ ಎಂಬುದು ಪಕ್ಕಾ ಆಗಿದೆ.

ಶೈನ್ ಶೆಟ್ಟಿ, ಸಂಯುಕ್ತಾ ಹೊರನಾಡು ಸೇರಿ ಅನೇಕರು ‘ಮರ್ಯಾದೆ ಪ್ರಶ್ನೆ’ ಬಗ್ಗೆ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಪ್ರದೀಪ್ ಮಾತನಾಡಿದ್ದಾರೆ. ‘ಸದ್ಯದ ಪರಿಸ್ಥಿತಿಯಲ್ಲಿ ಮರ್ಯಾದೆ ಪ್ರಶ್ನೆ ಆಗಿರೋದು ಏನು ಎಂದು ನಾನು ಕೇಳಿದ್ದೆ. ಅದನ್ನು ಅನೇಕರು ಪೋಸ್ಟ್ ಮಾಡಿದ್ದರು. ಇಂದು ಟೈಟಲ್​ನ ರಿವೀಲ್​ ಮಾಡಿದ್ದೇವೆ’ ಎಂದಿದ್ದಾರೆ. ಇದು ಮಧ್ಯಮವರ್ಗದವರ ಭಾವನೆಗಳನ್ನು ಹೇಳುವ ಸಿನಿಮಾ. ‘ದುಡ್ಡಿರೋರಿಗೆ ಎಲ್ಲಾ ದುಡಿಯೋರಿಗೆ ಏನೂ ಇಲ್ಲ’ ಎಂಬ ಲೈನ್ ಮೇಲೆ ಸಿನಿಮಾದ ಕಥೆ ಸಾಗಲಿದೆಯಂತೆ. ‘ಯಾವಾಗಲೋ ಒಮ್ಮೆ ದುಡ್ಡು ಮಾಡುತ್ತೇವೆ. ಆ ಹೋಪ್​ನಲ್ಲೇ ಎಲ್ಲರೂ ಬದುಕುತ್ತಿರುತ್ತೇವೆ. ಆ ಎಮೋಷನ್​ ಸಿನಿಮಾದಲ್ಲಿದೆ’ ಎಂದಿದ್ದಾರೆ ಪ್ರದೀಪ್.

ಮರ್ಯಾದೆ ಪ್ರಶ್ನೆ ಟೈಟಲ್

ಚಾಮಾರಾಜಪೇಟೆಯ ಪ್ರತಿ ಗಲ್ಲಿಯಲ್ಲಿ ಸಿನಿಮಾದ ಶೂಟಿಂಗ್ ನಡೆದಿದೆಯಂತೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಸಿನಿಮಾನ ಪ್ರೇಕ್ಷಕರ ಮುಂದೆ ಇಡುವ ಆಲೋಚನೆ ಪ್ರದೀಪ್ ಅವರದ್ದು. ಈ ಚಿತ್ರಕ್ಕೆ ನಾಗರಾಜ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಅವರು ಈ ಮೊದಲು ಸಂಚಾರಿ ವಿಜಯ್ ನಟನೆಯ ‘ಪುಗ್ಸಟ್ಟೆ ಲೈಫು’ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಇದರ ಜೊತೆಗೆ ಅವರು ‘ಬೆಸ್ಟ್ ಆ್ಯಕ್ಟರ್’ ಹೆಸರಿನ ಮೈಕ್ರೋ ಮೂವಿ ಮಾಡಿದ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ: ಮರ್ಯಾದೆ ಪ್ರಶ್ನೆ: ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಅಂಥದ್ದೇನಾಯ್ತು?

‘ನನ್ನ ತಲೆಯಲ್ಲಿ ಹೀಗೊಂದು ಕಥೆ ಓಡುತ್ತಿತ್ತು. ನಾನು ನಾಗರಾಜ ಅವರ ಜೊತೆ ಚರ್ಚೆ ಮಾಡಿದೆ. ನಂತರ ಅದಕ್ಕೆ ಒಂದು ರೂಪ ನೀಡಲಾಯಿತು. ಇಬ್ಬರಿಗೂ ಕಥೆ ಸ್ಟ್ರಾಂಗ್ ಎನಿಸಿತು. ಬೆಂಗಳೂರಲ್ಲಿ ಎಲ್ಲರಿಗೂ ಸಿನಿಮಾ ಕನೆಕ್ಟ್ ಆಗುತ್ತದೆ ಎನಿಸಿತು. ಹೀಗಾಗಿ, ನಾನು ನಿರ್ಮಾಣಕ್ಕೆ ಇಳಿದೆ, ಅವರು ನಿರ್ದೇಶನ ಮಾಡಿದರು’ ಎಂದಿದ್ದಾರೆ ಪ್ರದೀಪ್. ಪಾತ್ರವರ್ಗದ ಬಗ್ಗೆ ಪ್ರದೀಪ್ ಅವರು ರಹಸ್ಯ ಕಾಪಾಡಿಕೊಂಡಿದ್ದಾರೆ. ‘ಸಿನಿಮಾದಲ್ಲಿ ಆರು ಜನರು ಪ್ರಮುಖ ಪಾತ್ರ ಮಾಡಿದ್ದು, ಎಲ್ಲರೂ ಉತ್ತಮ ಕಲಾವಿದರೇ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತೇವೆ’ ಎಂದಿದ್ದಾರೆ ಪ್ರದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ