ಕನ್ನಡದ ಖ್ಯಾತ ಆರ್ಜೆಗಳಲ್ಲಿ ಒಬ್ಬರಾಗಿದ್ದ ರಚನಾ (RJ Rachana) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಅಕಾಲಿಕ ಮರಣ ಎಲ್ಲರಿಗೂ ತೀವ್ರ ದುಃಖ ತಂದಿತ್ತು. ತಮ್ಮ ಮಾತುಗಳಿಂದ, ನಡೆನುಡಿಯಿಂದ ರಚನಾ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದರು. ಕನ್ನಡದ ಹಿಟ್ ಚಿತ್ರಗಳಲ್ಲಿ ಒಂದಾದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ಯಲ್ಲೂ ಅವರು ಬಣ್ಣಹಚ್ಚಿದ್ದರು. ರಚನಾ ಅವರ ನಿಧನದ ಕುರಿತು ಅವರ ಸ್ನೇಹಿತರು ದುಃಖ ವ್ಯಕ್ತಪಡಿಸಿ, ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ರ್ಯಾಪಿಡ್ ರಶ್ಮಿ (Rapid Rashmi) ರಚನಾ ಅವರನ್ನು ಬಲ್ಲವರು. ಸುದ್ದಿವಾಹಿನಿಯೊಂದರಲ್ಲಿ ಅವರು ಮಾತನಾಡುತ್ತಾ ರಚನಾ ಕುರಿತ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘‘ಆರ್ಜೆಯಾಗಿ ವೃತ್ತಿ ಜೀವನವನ್ನು ಆರಂಭಿಸುವ ಮೊದಲು ನಾವು ಕಾರ್ಯಕ್ರಮ ನಡೆಸಿಕೊಡುತ್ತಿದ್ದೆವು. ಆಗಿನಿಂದ ನಾವು ಉತ್ತಮ ಸ್ನೇಹಿತರಾಗಿದ್ದೆವು’’ ಎಂದಿದ್ದಾರೆ.
ರಚನಾ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು ಎಂದಿರುವ ರಶ್ಮಿ, ಅವರ ಆಹಾರದ ಬಗ್ಗೆಯೂ ಸ್ಪಷ್ಟತೆ ಹೊಂದಿದ್ದರು. ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡುತ್ತಿದ್ದರು. ಸಲಾಡ್ಗಳನ್ನು ತಿನ್ನುವುದನ್ನು ಇಷ್ಟಪಡುತ್ತಿದ್ದರು ಎಂದಿದ್ದಾರೆ. ರಚನಾ ಅವರೊಂದಿಗೆ ದೀರ್ಘಕಾಲದ ಒಡನಾಟ ಇದ್ದರೂ ಕೂಡ ಇತ್ತೀಚೆಗೆ ಅವರೊಂದಿಗೆ ಅಷ್ಟಾಗಿ ಸಂಪರ್ಕದಲ್ಲಿರಲಿಲ್ಲ ಎಂದು ರಶ್ಮಿ ಹೇಳಿದ್ದಾರೆ.
ರಚನಾ ಕುರಿತು ರಶ್ಮಿ ಮತ್ತೊಂದು ವಿಚಾರವನ್ನು ಬಹಿರಂಗಪಡಿಸಿದ್ದಾರೆ. ‘ರಚನಾ ಒಂದು ಮಗುವನ್ನು ದತ್ತು ಪಡೆಯಲು ಯೋಚಿಸಿದ್ದರು. ಆ ಯೋಚನೆಯಿಂದ ನಾನು ಪ್ರಭಾವಿತಳಾಗಿದ್ದೆ. ಮತ್ತು ಆ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದೆ’ ಎಂದು ರಶ್ಮಿ ಹೇಳಿದ್ಧಾರೆ. ಆದರೆ ವಿಧಿಯ ನಿರ್ಧಾರ ಬೇರೆ ಇತ್ತು. ಜೀವನದಲ್ಲಿ ಹೊಸದೇನನ್ನೋ ಮಾಡಲು ಹೋಗುವರಿಗೂ ಹೀಗಾಗುತ್ತದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಆರ್ಜೆ ರಚನಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಕುಟುಂಬಸ್ಥರು ರಚನಾ ಅವರ ಅಂಗಾಂಗವನ್ನು ದಾನ ಮಾಡಿದ್ದರು. ಏಳು ವರ್ಷಗಳ ಕಾಲ ಆರ್ಜೆಯಾಗಿ ಗುರುತಿಸಿಕೊಂಡಿದ್ದ ರಚನಾ, ಕಳೆದ ಮೂರು ವರ್ಷಗಳಿಂದ ಆರ್ಜೆ ಕೆಲಸ ತ್ಯಜಿಸಿದ್ದರು. ತಮ್ಮ ಧ್ವನಿಯಿಂದಲೇ ಕೋಟ್ಯಂತರ ಕೇಳುಗರನ್ನು ಪಡೆದಿದ್ದರು. ನಾಡು ರಚನಾ ಅವರ ನಿಧನಕ್ಕೆ ಕಂಬನಿ ಮಿಡಿದಿದೆ.
ಇದನ್ನೂ ಓದಿ:
RJ Rachana: ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಆರ್ಜೆ ರಚನಾ
ಹೇಗಿತ್ತು ರಚನಾ ವ್ಯಕ್ತಿತ್ವ? ಹೃದಯಾಘಾತದಿಂದ ನಿಧನರಾದ ಆರ್ಜೆ ಬಗ್ಗೆ ಸೆಲೆಬ್ರಿಟಿಗಳ ಭಾವುಕ ಮಾತು