ರುಕ್ಮಿಣಿ ವಸಂತ್​ಗೆ​ ಖುಲಾಯಸಿದ ಅದೃಷ್ಟ, ತೆಲುಗಿನಲ್ಲಿ ಬಲು ಬ್ಯುಸಿ, ಕೈಲಿರುವ ಸಿನಿಮಾಗಳೆಷ್ಟು?

Rukmini Vasanth: ಕರ್ನಾಟಕದ ನಟಿಯರು ನೆರೆಯ ತೆಲುಗು ಚಿತ್ರರಂಗದಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಮಿಂಚುತ್ತಿದ್ದಾರೆ. ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ, ಶ್ರೀಲೀಲಾ ಬಳಿಕ ಈಗ ರುಕ್ಮಿಣಿ ವಸಂತ್ ಸರದಿ. ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್​ ನಟರ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ಅವರಿಗೆ ಅವಕಾಶಗಳು ಸಿಗುತ್ತಿವೆ.

ರುಕ್ಮಿಣಿ ವಸಂತ್​ಗೆ​ ಖುಲಾಯಸಿದ ಅದೃಷ್ಟ, ತೆಲುಗಿನಲ್ಲಿ ಬಲು ಬ್ಯುಸಿ, ಕೈಲಿರುವ ಸಿನಿಮಾಗಳೆಷ್ಟು?
Rukmini Vasanth

Updated on: May 23, 2025 | 12:02 PM

ಒಬ್ಬರಾದ ಮೇಲೊಬ್ಬರಂತೆ ಕನ್ನಡದ ನಟಿಯರು ನೆರೆಯ ತೆಲುಗು ಚಿತ್ರರಂಗದ (Tollywood) ಟಾಪ್ ನಟಿಯರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸುಮಾರು ಎರಡು ದಶಕಗಳ ಕಾಲ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ಅನುಷ್ಕಾ ಶೆಟ್ಟಿ ಕನ್ನಡತಿ. ಅದಾದ ಬಳಿಕ ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಟಾಪ್ ನಟಿಯಾದರು. ಅವರ ಬೆನ್ನಲ್ಲೆ ನಟಿ ಶ್ರೀಲೀಲಾ ಸಹ ಸ್ಟಾರ್ ನಟಿಯಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಇದೀಗ ಕನ್ನಡತಿ ರುಕ್ಮಿಣಿ ವಸಂತ್ ಅವರೂ ಸಹ ತೆಲುಗು ಸಿನಿಮಾ ಪ್ರೇಕ್ಷಕರ ಹೃದಯದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳಲು ಮುಂದಾಗಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಸಾರಿದ ನಟಿ ರುಕ್ಮಿಣಿ ವಸಂತ್​ಗೆ ಈಗ ನೆರೆಯ ಚಿತ್ರರಂಗಗಳಿಂದ ಸಾಲು-ಸಾಲು ಅವಕಾಶಗಳು ಬರುತ್ತಿವೆ. ಅದೂ ಸ್ಟಾರ್ ನಟರ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ರುಕ್ಮಿಣಿ ವಸಂತ್ ಕೈಯಲ್ಲಿ ಈಗ ಹಲವಾರು ಸಿನಿಮಾಗಳಿವೆ.

ಜೂ ಎನ್​ಟಿಆರ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿರುವುದು ಹಳೆಯ ಸುದ್ದಿ. ಸಿನಿಮಾದ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದೆ. ಇದರ ಜೊತೆಗೆ ಈಗ ಇನ್ನೂ ಮೂವರು ಸ್ಟಾರ್ ನಟರ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸಲಿದ್ದಾರೆ. ಮೂವರೂ ಪ್ಯಾನ್ ಇಂಡಿಯಾ ಸ್ಟಾರ್​ಗಳೇ.

ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮೊದಲಿಗೆ ‘ಸ್ಪಿರಿಟ್’ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿ ಆಗಿದ್ದರು. ಆದರೆ ಅವರ ಸಂಭಾವನೆ ಹೆಚ್ಚಾದ ಕಾರಣಕ್ಕೆ ದೀಪಿಕಾ ಬದಲಿಗೆ ರುಕ್ಮಿಣಿ ವಸಂತ್ ಅವರಿಗೆ ಅವಕಾಶ ನೀಡಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ.

ಇದನ್ನೂ ಓದಿ:ಪ್ರತಿಭಟನೆ ಮುಂದೂಡಿದ ಪ್ರದರ್ಶಕರು, ತೆಲುಗು ಚಿತ್ರರಂಗ ನಿರಾಳ

ಇದೀಗ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಹ ರುಕ್ಮಿಣಿ ವಸಂತ್ ಅವರನ್ನು ಸಂಪರ್ಕ ಮಾಡಿದ್ದು, ಅವರ ನಿರ್ದೇಶನದ ಮುಂದಿನ ಸಿನಿಮಾಕ್ಕೆ ರುಕ್ಮಿಣಿ ವಸಂತ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ತಮ್ಮ ಮುಂದಿನ ಸಿನಿಮಾವನ್ನು ರಾಮ್ ಚರಣ್ ಜೊತೆಗೆ ಮಾಡುತ್ತಿದ್ದು, ಇದೀಗ ರುಕ್ಮಿಣಿ ವಸಂತ್ ರಾಮ್ ಚರಣ್ ಎದುರು ನಾಯಕಿಯಾಗಿ ನಟಿಸಲಿದ್ದಾರೆ. ಇನ್ನು ನಟ ವೆಂಕಟೇಶ್ ಅವರ ಹೊಸ ಸಿನಿಮಾಕ್ಕೂ ಸಹ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರುಕ್ಮಿಣಿ ವಸಂತ್ ಅವರಿಗೆ ತಮಿಳಿನಿಂದಲೂ ಸಾಕಷ್ಟು ಆಫರ್​ಗಳು ಬರುತ್ತಿವೆ. ಪ್ರಸ್ತುತ ಅವರು ವಿಜಯ್ ಸೇತುಪತಿ ನಟನೆಯ ‘ಏಸ್’ ಸಿನಿಮಾನಲ್ಲಿ ನಟಿಸಿದ್ದು, ಚಿತ್ರೀಕರಣ ಮುಗಿದಿದೆ. ತಮಿಳಿನ ‘ಮದರಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಅವರು ತೆಲುಗಿನ ‘ಅಪುಡೊ ಇಪುಡೊ ಎಪುಡೊ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾ ಫ್ಲಾಪ್ ಆಗಿತ್ತು. ಆದರೂ ಸಹ ರುಕ್ಮಿಣಿ ವಸಂತ್ ಅವರಿಗೆ ತೆಲುಗಿನಲ್ಲಿ ದೊಡ್ಡ ಅವಕಾಶಗಳೇ ಅರಸಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ