ಕನ್ನಡ ಚಿತ್ರರಂಗಕ್ಕೆ ಬಂದ ಶಿಮ್ಲಾ ಸುಂದರಿ ರೂಪಾಲಿ ಸೂದ್; ‘ವೆಂಕ್ಯಾ’ ಚಿತ್ರಕ್ಕೆ ನಾಯಕಿ

|

Updated on: Apr 03, 2024 | 8:14 PM

ಸಾಗರ್ ಪುರಾಣಿಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ವೆಂಕ್ಯಾ’ ಚಿತ್ರತಂಡಕ್ಕೆ ನಟಿ ರೂಪಾಲಿ ಸೂದ್​ ಅವರು ಸೇರ್ಪಡೆ ಆಗಿದ್ದಾರೆ. ರೂಪಾಲಿ ಅವರು ಶಿಮ್ಲಾ ಮೂಲದವರು ಎಂಬುದು ವಿಶೇಷ. ‘ವೆಂಕ್ಯಾ’ ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕನ್ನಡ ಚಿತ್ರರಂಗಕ್ಕೆ ಬಂದ ಶಿಮ್ಲಾ ಸುಂದರಿ ರೂಪಾಲಿ ಸೂದ್; ‘ವೆಂಕ್ಯಾ’ ಚಿತ್ರಕ್ಕೆ ನಾಯಕಿ
ಸಾಗರ್​ ಪುರಾಣಿಕ್​, ರೂಪಾಲಿ ಸೂದ್, ಪವನ್​ ಒಡೆಯರ್​
Follow us on

ನಿರ್ದೇಶಕ ಸಾಗರ್ ಪುರಾಣಿಕ್ (Sagar Puranik) ಅವರು ಈ ಮೊದಲು ‘ಡೊಳ್ಳು’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುವ ಮೂಲಕ ಗಮನ ಸೆಳೆದಿದ್ದರು. ಆ ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿತ್ತು. ಈಗ ಸಾಗರ್ ಪುರಾಣಿಕ್ ಅವರು ಹೊಸ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ‘ವೆಂಕ್ಯಾ’ (Venkya) ಎಂಬುದು ಈ ಸಿನಿಮಾದ ಶೀರ್ಷಿಕೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ವಿಶೇಷ ಏನೆಂದರೆ, ಈ ಸಿನಿಮಾಗೆ ಸಾಗರ್ ಪುರಾಣಿಕ್​ ಅವರು ನಿರ್ದೇಶನ ಮಾಡುವುದರ ಜೊತೆಗೆ ಹೀರೋ ಆಗಿಯೂ ಬಣ್ಣ ಹಚ್ಚಿದ್ದಾರೆ. ಈ ಚಿತ್ರತಂಡದಿಂದ ಒಂದು ಅಪ್​ಡೇಟ್​ ನೀಡಲಾಗಿದೆ. ನಾಯಕಿ ಆಯ್ಕೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ರೂಪಾಲಿ ಸೂದ್ (Rupali Sood) ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಹೌದು, ‘ವೆಂಕ್ಯಾ’ ಚಿತ್ರತಂಡಕ್ಕೆ ರೂಪಾಲಿ ಸೂದ್​ ಸೇರ್ಪಡೆ ಆಗಿದ್ದಾರೆ. ಇವರು ಶಿಮ್ಲಾ ಸುಂದರಿ ಎಂಬುದು ವಿಶೇಷ. ‘ವೆಂಕ್ಯಾ’ ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿ ಆಗಿದ್ದಾಗಲೇ ರೂಪಾಲಿ ಅವರು ಮಾಡೆಲಿಂಗ್​ನಲ್ಲಿ ಗುರುತಿಸಿಕೊಂಡಿದ್ದರು. ಮಾಡೆಲಿಂಗ್ ಮಾಡುತ್ತಲೇ ಅನೇಕ ಮ್ಯೂಸಿಕ್ ಆಲ್ಬಂಗಳಲ್ಲಿ ಅವರು ನಟಿಸಿದರು. ಹಾರ್ಡಿ ಸಂಧು ಅವರ ಜೊತೆ ‘ಹಾರ್ನ್ ಬ್ಲೋ’ ಸೂಪರ್ ಹಿಟ್ ಹಾಡಿನಲ್ಲಿ ಅವರು ಡ್ಯಾನ್ಸ್​ ಮಾಡಿ ಗಮನ ಸೆಳೆದರು. ಈಗ ಅವರು ‘ವೆಂಕ್ಯಾ’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಉತ್ತರಕಾಂಡ’ ಚಿತ್ರಕ್ಕೆ ‘ಶೈತಾನ್’ ಸಿನಿಮಾ ಸಂಗೀತ ಸಂಯೋಜಕ; ಕನ್ನಡಕ್ಕೆ ಬಂದ ಅಮಿತ್ ತ್ರಿವೇದಿ

ಹಿಮಾಚಲದ ಪಹಾಡಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರೂಪಾಲಿ ಸೂದ್​ ಅವರು ‘ವೆಂಕ್ಯಾ’ ಸಿನಿಮಾದ ಚಿತ್ರೀಕರಣದಲ್ಲಿ ಈಗಾಗಲೇ ಪಾಲ್ಗೊಂಡಿದ್ದಾರೆ. ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿರುವ ಅವರು, ‘ಇತ್ತೀಚೆಗೆ ನಾವು ಮನಾಲಿಯ ಮುಂದೆ ಕೈಲಾಂಗ್ನಲ್ಲಿ ಪರ್ವತಗಳ ನಡುವೆ ಸುಂದರ ಲೊಕೇಷನ್​ನಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ನನ್ನ ವೃತ್ತಿಜೀವನಕ್ಕೆ ಇದು ಅದ್ಭುತ ಪ್ರಾರಂಭ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಿಷಿಯ ‘ರಾಮನ ಅವತಾರ’ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

ರಾಷ್ಟ್ರ ಪ್ರಶಸ್ತಿ ಪಡೆದ ‘ಡೊಳ್ಳು’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಪವನ್ ಒಡೆಯರ್ ಅವರು ‘ವೆಂಕ್ಯಾ’ ಚಿತ್ರಕ್ಕೂ ಸಾಥ್ ನೀಡಿದ್ದಾರೆ. ‘ಒಡೆಯರ್ ಫಿಲ್ಮ್ಸ್’ ಮೂಲಕ ಮೂಡಿಬರುತ್ತಿರುವ ಈ ಸಿನಿಮಾಗೆ ಅವಿನಾಶ್ ವಿ. ರೈ ಹಾಗೂ ಮೋಹನ್ ಲಾಲ್ ಮೆನನ್ ಅವರು ಸಹ ಹಣ ಹಾಕಿದ್ದಾರೆ. ಉತ್ತರ ಕರ್ನಾಟಕ ಭಾಗದ ಕಥೆಯನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ‘ವೆಂಕ್ಯಾ’ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಶ್ರೀನಿಧಿ ಡಿ.ಎಸ್. ಅವರು ಬರೆದಿದ್ದಾರೆ. ಪ್ರಣವ್ ಮುಲೆ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಹೇಮಂತ್ ಜೋಯಿಸ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.