ಎಸ್. ನಾರಾಯಣ್ ನಿರ್ದೇಶನದಲ್ಲಿ ‘ಒಂದ್ಸಲ ಮೀಟ್ ಮಾಡೋಣ’ ಅಂತಿದ್ದಾರೆ ಶ್ರೇಯಸ್​ ಮಂಜು

| Updated By: ರಾಜೇಶ್ ದುಗ್ಗುಮನೆ

Updated on: Sep 05, 2023 | 6:34 AM

‘ಒಂದ್ಸಲ ಮೀಟ್ ಮಾಡೋಣ’ ಸಿನಿಮಾದಲ್ಲಿ ಶ್ರೇಯಸ್​ ಮಂಜು ಅವರು ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಇದೊಂದು ಜರ್ನಿ ಸಿನಿಮಾ ಆಗಿದ್ದು, ಆ ಕುರಿತು ನಿರ್ದೇಶಕ ಎಸ್​. ನಾರಾಯಣ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ತಾರಾ ಅನುರಾಧಾ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಎಸ್. ನಾರಾಯಣ್ ನಿರ್ದೇಶನದಲ್ಲಿ ‘ಒಂದ್ಸಲ ಮೀಟ್ ಮಾಡೋಣ’ ಅಂತಿದ್ದಾರೆ ಶ್ರೇಯಸ್​ ಮಂಜು
‘ಒಂದ್ಸಲ ಮೀಟ್​ ಮಾಡೋಣ’ ಚಿತ್ರದ ಮುಹೂರ್ತ ಸಮಾರಂಭ
Follow us on

ನಿರ್ದೇಶಕ ಎಸ್​. ನಾರಾಯಣ್​ (S Narayan) ಅವರು ಕನ್ನಡ ಚಿತ್ರರಂಗದಲ್ಲಿ ಅನೇಕ ಗಮನಾರ್ಹ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ರೆಟ್ರೋ ಕಾಲದ ದಿಗ್ಗಜ ನಟರಿಂದ ಹಿಡಿದು, ಈಗಿನ ಕಾಲಘಟ್ಟದ ಹೊಸ ನಟರ ಜೊತೆಗೂ ಅವರು ಕೆಲಸ ಮಾಡಿದ್ದಾರೆ. ಸ್ಯಾಂಡಲ್​ವುಡ್​ ಲೆಜೆಂಡರಿ ಕಲಾವಿದರಾದ ಡಾ. ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮುಂತಾದ ನಟರ ಸಿನಿಮಾಗಳಿಗೆ ಎಸ್. ನಾರಾಯಣ್ ಡೈರೆಕ್ಷನ್​ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಹೊಸ ಸಿನಿಮಾ ಸೆಟ್ಟೇರಿದೆ. ಇದಕ್ಕೆ ಕ್ಯಾಚಿ ಆದಂತಹ ಶೀರ್ಷಿಕೆ ಇಡಲಾಗಿದೆ. ‘ಒಂದ್ಸಲ ಮೀಟ್ ಮಾಡೋಣ’ (Ondsala Meet Madona) ಎಂಬುದು ಈ ಸಿನಿಮಾ ಟೈಟಲ್​. ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್​ ಮಂಜು (Shreyas Manju) ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನಟ ಶ್ರೇಯಸ್ ಮಂಜು ಅವರು ಚಿತ್ರರಂಗದಲ್ಲಿ ಒಂದು ಗೆಲುವಿಗಾಗಿ ಕಾದಿದ್ದಾರೆ. ಈ ಬಾರಿ ಅವರು ನಿರ್ದೇಶಕ ಎಸ್​. ನಾರಾಯಣ್​ ಜೊತೆ ಕೈ ಜೋಡಿಸಿದ್ದಾರೆ. ‘ಒಂದ್ಸಲ ಮೀಟ್ ಮಾಡೋಣ’ ಸಿನಿಮಾಗೆ ಶೂಟಿಂಗ್​ ಆರಂಭ ಆಗಿದೆ. ಚಿಕ್ಕಮಗಳೂರಿನಲ್ಲಿ ಇರುವ ಶ್ರೀದೇವಿರಮ್ಮ ದೇವಾಲಯದಲ್ಲಿ ಈ ಸಿನಿಮಾದ ಮುಹೂರ್ತ ಮಾಡಲಾಗಿದೆ. ನಿರ್ಮಾಣ ಸಹಾಯಕ ಮಹದೇವ ಅವರು ಕ್ಯಾಮೆರಾ ಚಾಲನೆ ಮಾಡಿದರು. ಶ್ರೇಯಸ್ ಮಂಜು ಮತ್ತು ಹಿರಿಯ ನಟಿ ತಾರಾ ಅನುರಾಧಾ ಅವರ ಕಾಂಬಿನೇಷನ್​ನಲ್ಲಿ ಇರುವ ಮೊದಲ ಸನ್ನಿವೇಶಕ್ಕೆ ಶಾಸಕ ಹೆಚ್.ಡಿ. ತಮ್ಮಯ್ಯ ಆರಂಭ ಫಲಕ ತೋರಿದ್ದಾರೆ.

ಇದನ್ನೂ ಓದಿ: ‘ಜಲಂಧರ’ ಸಿನಿಮಾಗೆ ಪ್ರಮೋದ್​ ಶೆಟ್ಟಿ ಹೀರೋ; ಶೂಟಿಂಗ್ ಮುಗಿಸಿ ಪೋಸ್ಟರ್​ ಹಂಚಿಕೊಂಡ ಚಿತ್ರತಂಡ

ಅಂದಹಾಗೆ, ಇದೊಂದು ಜರ್ನಿ ಸಿನಿಮಾ. ಈ ಬಗ್ಗೆ ನಿರ್ದೇಶಕ ಎಸ್​. ನಾರಾಯಣ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಚಿಕ್ಕಮಗಳೂರಿನಿಂದ ಈ ಸಿನಿಮಾದ ಶೂಟಿಂಗ್​ ಪ್ರಾರಂಭ. ನಂತರ ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ, ಗೋವಾ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಆ ರೀತಿಯ ಒಂದು ಟ್ರಾವೆಲಿಂಗ್ ಪ್ರೇಮಕಥೆ ಈ ಚಿತ್ರದಲ್ಲಿ ಇದೆ’ ಎಂದು ಅವರು ಹೇಳಿದ್ದಾರೆ.‘ಒಂದ್ಸಲ ಮೀಟ್ ಮಾಡೋಣ’ ಸಿನಿಮಾದಲ್ಲಿ ಶ್ರೇಯಸ್ ಮಂಜುಗೆ ಜೋಡಿಯಾಗಿ ಬೃಂದಾ ಆಚಾರ್ಯ ನಟಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ತಾರಾ ಅನುರಾಧಾ, ಪ್ರಮೋದ್ ಶೆಟ್ಟಿ, ಸಾಧುಕೋಕಿಲ, ಕಲ್ಯಾಣಿ, ಮಂಜು ಪಾವಗಡ, ರಂಗಾಯಣ ರಘು, ಸುಜಯ್ ಶಾಸ್ತ್ರಿ, ಜಯರಾಮ್, ಗಿರಿ ಸೇರಿದಂತೆ ಅನೇಕರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಖ್ಯಾತಿಯ ರಾಜೀವ್​ ನಟನೆಯ ‘ಉಸಿರೇ ಉಸಿರೇ’ ಚಿತ್ರಕ್ಕೆ ಡಬ್ಬಿಂಗ್​ ಮುಗಿಸಿದ ಸುದೀಪ್​

ಎಸ್. ನಾರಾಯಣ್ ಅವರೇ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಹಾಡುಗಳಿಗೆ ಸಾಹಿತ್ಯ ಕೂಡ ಅವರದ್ದೇ. ಜಸ್ಸಿ ಗಿಫ್ಟ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕುಮಾರ್ ಗೌಡ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಶಿವಪ್ರಸಾದ್ ಯಾದವ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅರ್ಜುನ್ ಅವರ ಸಾಹಸ ನಿರ್ದೇಶನ ಮತ್ತು ಸಂತು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ. ಆನಂದ್ ಅವರು ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಬಿ.ಪಿ. ತ್ಯಾಗರಾಜ್ ಅವರು ‘ಈಶಾ ಪ್ರೊಡಕ್ಷನ್ಸ್’ ಮೂಲಕ ಅರ್ಪಿಸುತ್ತಿರುವ ಈ ಸಿನಿಮಾವನ್ನು ಕೆ. ಮಂಜು ಮತ್ತು ರಮೇಶ್ ಯಾದವ್ ನಿರ್ಮಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:09 pm, Mon, 4 September 23