ಬಿಗ್ ಬಾಸ್ ಖ್ಯಾತಿಯ ರಾಜೀವ್ ನಟನೆಯ ‘ಉಸಿರೇ ಉಸಿರೇ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಸುದೀಪ್
‘ಉಸಿರೇ ಉಸಿರೇ’ ಚಿತ್ರಕ್ಕೆ ಸಿ.ಎಂ. ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ಶೂಟಿಂಗ್ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ರಾಜೀವ್ ನಟನೆಯ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರಿಗೆ ಒಂದು ವಿಶೇಷವಾದ ಪಾತ್ರವಿದೆ. ತಮ್ಮ ಪಾತ್ರಕ್ಕೆ ಅವರು ಡಬ್ಬಿಂಗ್ ಮುಗಿಸಿದ್ದಾರೆ. ಇದರಿಂದ ಚಿತ್ರತಂಡದ ಬಲ ಹೆಚ್ಚಾಗಿದೆ.
ನಟ ಕಿಚ್ಚ ಸುದೀಪ್ (Kichcha Sudeep) ಅವರು ಬಹಳ ಪ್ರೀತಿಯಿಂದ ‘ಬಿಗ್ ಬಾಸ್’ ರಿಯಾಲಿಟಿ ಶೋ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸ್ಪರ್ಧಿಗಳ ಜೊತೆ ಅವರು ಸ್ನೇಹ ಬೆಳೆಸಿದ ಉದಾಹರಣೆ ಸಾಕಷ್ಟಿದೆ. ಕೆಲವರಿಗೆ ನೇರವಾಗಿ ಸುದೀಪ್ ನೆರವಾಗಿದ್ದುಂಟು. ಇನ್ನೂ ಕೆಲವೊಮ್ಮೆ ಬಿಗ್ ಬಾಸ್ (Bigg Boss Kannada) ಮಾಜಿ ಸ್ಪರ್ಧಿಗಳ ಸಿನಿಮಾಗಳಿಗೆ ಸಹಾಯ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಸ್ಪರ್ಧಿ ರಾಜೀವ್ ಅವರಿಗೂ ಸುದೀಪ್ ಇದೇ ರೀತಿ ಸಾಥ್ ನೀಡುತ್ತಿದ್ದಾರೆ. ರಾಜೀವ್ ನಟನೆಯ ‘ಉಸಿರೇ ಉಸಿರೇ’ (Usire Usire Movie) ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ಒಂದು ಪಾತ್ರ ಮಾಡುತ್ತಿದ್ದಾರೆ. ಆ ಪಾತ್ರಕ್ಕೆ ಅವರೀಗ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಆ ಮೂಲಕ ಚಿತ್ರತಂಡಕ್ಕೆ ಅವರು ಸ್ಟಾರ್ ಮೆರುಗು ತುಂಬಿದ್ದಾರೆ.
‘ಉಸಿರೇ ಉಸಿರೇ’ ಎಂಬ ಶೀರ್ಷಿಕೆಯೇ ಆಕರ್ಷಕವಾಗಿದೆ. ಇದು ‘ಹುಚ್ಚ..’ ಸಿನಿಮಾದ ಫೇಮಸ್ ಗೀತೆಯ ಮೊದಲ ಸಾಲು ಕೂಡ ಹೌದು. ‘ಉಸಿರೇ ಉಸಿರೇ’ ಸಿನಿಮಾ ಅನೌನ್ಸ್ ಆದಾಗಲೇ ನಿರೀಕ್ಷೆ ಮೂಡಿತ್ತು. ಅದರಲ್ಲಿ ಸುದೀಪ್ ಅವರು ಒಂದು ಪಾತ್ರ ಮಾಡುತ್ತಾರೆ ಎಂದಾಗ ಆ ನಿರೀಕ್ಷೆ ಡಬಲ್ ಆಯಿತು. ಇಷ್ಟು ದಿನಗಳ ಕಾಲ ‘ಮ್ಯಾಕ್ಸ್’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದ ಸುದೀಪ್ ಅವರು ಈಗ ಬಿಡುವು ಮಾಡಿಕೊಂಡು ‘ಉಸಿರೇ ಉಸಿರೇ’ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಅವರ ಹುಟ್ಟುಹಬ್ಬದ ಹಿಂದಿನ ದಿನ ಡಬ್ಬಿಂಗ್ ಕೆಲಸ ಮುಗಿದಿದೆ.
ಇದನ್ನೂ ಓದಿ: ಸುಮಲತಾ ತಾಯಿ, ನಾನೂ, ದರ್ಶನ್ ಮಕ್ಕಳು: ಸಿನಿಮಾ ಬಗ್ಗೆ ಕೇಳಿದ್ದಕ್ಕೆ ಸುದೀಪ್ ತಮಾಷೆಯ ಉತ್ತರ
ಸುದೀಪ್ ಮಾತ್ರವಲ್ಲದೇ ಇನ್ನೂ ಅನೇಕ ಕಲಾವಿದರು ‘ಉಸಿರೇ ಉಸಿರೇ’ ಸಿನಿಮಾದಲ್ಲಿದ್ದಾರೆ. ರಾಜೀವ್ ಅವರಿಗೆ ಜೋಡಿಯಾಗಿ ಶ್ರೀಜಿತಾ ಅಭಿನಯಿಸಿದ್ದಾರೆ. ಸುದೀಪ್ ಅವರಿಗೆ ವಿಶೇಷವಾದ ಪಾತ್ರವಿದೆ. ತೆಲುಗಿನ ಜನಪ್ರಿಯ ನಟರಾದ ಆಲಿ ಹಾಗೂ ಬ್ರಹ್ಮಾನಂದಂ ಅವರು ಈ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದಾರೆ. ‘ಡೈನಾಮಿಕ್ ಸ್ಟಾರ್’ ದೇವರಾಜ್, ಮಂಜು ಪಾವಗಡ, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ತಾರಾ, ಶೈನಿಂಗ್ ಸೀತಾರಾಮು, ರಾಜೇಶ್ ನಟರಂಗ, ಜಗಪ್ಪ, ಸುಶ್ಮಿತಾ ಸೇರಿದಂತೆ ಅನೇಕರು ಇದರಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಚಕ್ರವರ್ತಿ ಚಂದ್ರಚೂಡ್ ಬಗ್ಗೆ ಸುದೀಪ್ಗೆ ಇದ್ದ ಅಭಿಪ್ರಾಯ ಏನು? ಅದು ಬದಲಾಗಿದ್ದೇಕೆ?
‘ಉಸಿರೇ ಉಸಿರೇ’ ಚಿತ್ರಕ್ಕೆ ಸಿ.ಎಂ. ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರದೀಪ್ ಯಾದವ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಈ ಸಿನಿಮಾದಲ್ಲಿ ನವಿರಾದ ಒಂದು ಪ್ರೇಮಕಥೆ ಇದೆ. ಇದು ನನ್ನ ಮೊದಲ ನಿರ್ಮಾಣದ ಸಿನಿಮಾ. ನಾನು ಸಿನಿಮಾ ನಿರ್ಮಿಸಲು ಕಿಚ್ಚ ಸುದೀಪ್ ಅವರೇ ಸ್ಫೂರ್ತಿ. ಅವರು ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅವರಿಗೆ ಮತ್ತು ನನ್ನ ತಂಡಕ್ಕೆ ಧನ್ಯವಾಗಳು’ ಎಂದು ನಿರ್ಮಾಪಕ ಪ್ರದೀಪ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ‘ಕಿಚ್ಚ 46’ ಚಿತ್ರಕ್ಕೆ ‘ಮ್ಯಾಕ್ಸ್’ ಶೀರ್ಷಿಕೆ; ಮತ್ತೆ ಖಾಕಿ ತೊಟ್ಟ ಸುದೀಪ್?
ಮನು ಅವರು ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಮತ್ತು ಕೆ.ಎಂ. ಪ್ರಕಾಶ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಟೈಗರ್ ಶಿವು ಸಾಹಸ ನಿರ್ದೇಶನ ಮಾಡಿದ್ದಾರೆ. ಮೋಹನ್ ಹಾಗೂ ಹೈಟ್ ಮಂಜು ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಶೂಟಿಂಗ್ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ತಿಂಗಳಲ್ಲಿ ‘ಉಸಿರೇ ಉಸಿರೇ’ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.