
ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಎಸ್ ನಾರಾಯಣ್ ವರದಕ್ಷಿಣೆ ಕಿರುಕುಳ ಆರೋಪಕ್ಕೆ ಸಿಲುಕಿದ್ದಾರೆ. ಎಸ್ ನಾರಾಯಣ್ ಅವರ ಸೊಸೆ, ಮಾವ ಎಸ್ ನಾರಾಯಣ್ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ. ಎಸ್ ನಾರಾಯಣ್ ಅವರ ಪುತ್ರ ಪವನ್ ಅವರ ಪತ್ನಿ ಪವಿತ್ರಾ ಅವರು ಇದೀಗ ಪತಿ ಪವನ್, ಎಸ್ ನಾರಾಯಣ್ ಮತ್ತು ಅವರ ಪತ್ನಿಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ಇದೀಗ ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಎಸ್ ನಾರಾಯಣ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಟಿವಿ9 ಜೊತೆಗೆ ಮಾತನಾಡಿರುವ ಎಸ್ ನಾರಾಯಣ್, ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಪವಿತ್ರಾ ಮನೆ ಬಿಟ್ಟು ಹೋಗಿ 14 ತಿಂಗಳಾಗಿವೆ. ಮದುವೆ ಆಗಿ ಒಂದು ತಿಂಗಳು ಮಾತುಕತೆ ಸಹ ಇರಲಿಲ್ಲ. ಮನೆ ಬಿಟ್ಟು ಹೋದ ಕೂಡಲೇ ಹೋಗಿ ಕಂಪ್ಲೆಂಟ್ ಕೊಡಬಹುದಿತ್ತಲ್ಲ. ಯಾಕೆ ಇಷ್ಟು ತಡ ಮಾಡಿದ್ದು, ವರದಕ್ಷಿಣೆ ಪಿಡುಗು ತೊಲಗಬೇಕು ಎಂದು ಸಿನಿಮಾ ಮಾಡಿದವನು ನಾನು, ಆದರೆ ಈಗ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ವರದಕ್ಷಿಣೆ ಕೇಸು ಎನ್ನುವುದನ್ನು ಕೆಲ ಮಹಿಳೆಯರು ಅಸ್ತ್ರವಾಗಿ ಬಳಸುತ್ತಿದ್ದಾರೆ’ ಎಂದಿದ್ದಾರೆ.
‘ಸೊಸೆಯ ಈ ದೂರಿನಿಂದ ನನಗೆ ಆಶ್ಚರ್ಯ, ಆಘಾತ ಯಾವುದೂ ಆಗಿಲ್ಲ. ಸೊಸೆಯನ್ನು ತರುವ ಎಲ್ಲ ಹಿರಿಯರಿಗೂ ಇದು ತಪ್ಪಿದ್ದಲ್ಲ. ನಮ್ಮ ತಂದೆ 60ರ ದಶಕದಲ್ಲಿ ವರದಕ್ಷಿಣೆ ವಿರುದ್ಧ ಚಳವಳಿ ಮಾಡಿದವರು. ನಾನು ಸಹ ಸಿನಿಮಾಗಳ ಮೂಲಕ ವರದಕ್ಷಿಣೆಯ ವಿರುದ್ಧ ಜಾಗೃತಿ ಮೂಡಿಸಿರುವ ವ್ಯಕ್ತಿ. ನಾನು ಅಥವಾ ನಮ್ಮ ಮನೆತನದಲ್ಲಿ ಯಾರೂ ಸಹ ವರದಕ್ಷಿಣೆಯ ಪರವಾಗಿ ಇರುವವರಲ್ಲ. ಆದರೆ ಮಹಿಳೆಯರಿಗೆ ವರದಕ್ಷಿಣೆ ದೂರು ಎಂಬುದು ಸುಲಭಕ್ಕೆ ಸಿಕ್ಕುವ ಅಸ್ತ್ರ, ಅದನ್ನೇ ಬಳಸಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ: ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ; ನಿರ್ದೇಶಕ ಎಸ್.ನಾರಾಯಣ್ ವಿರುದ್ಧ ಎಫ್ಐಆರ್
‘ಪವನ್ ಹಾಗೂ ಪವಿತ್ರಾ ಪರಸ್ಪರ ಪ್ರೀತಿಸಿ ಮದುವೆ ಆದರು. ನಾವು ವಿರೋಧ ಮಾಡಿರಲಿಲ್ಲ. ಒಂದು ಕುಟುಂಬಕ್ಕೆ ಸೊಸೆಯಾಗಿ ಬಂದಾಗ ಆ ಕುಟುಂಬದ ಗೌರವ, ಹಿನ್ನೆಲೆ ಅರ್ಥ ಮಾಡಿಕೊಂಡು ಬಾಳುವುದನ್ನು ಕಲಿಯಬೇಕು. ನಾವೆಲ್ಲ ಇವರಿಗೆ ಬುದ್ಧಿ ಹೇಳೋಕೆ ಆಗೊಲ್ಲ. ಇವತ್ತಿನ ಯುವಪೀಳಿಗೆ ನಮ್ಮಂಥಹಾ ಯುವಕರು ಹೇಳುವ ಮಾತುಗಳನ್ನು ಕೇಳಲು ಸಿದ್ಧರಿರೋದಿಲ್ಲ. ಸಂಸ್ಕಾರಬದ್ಧವಾಗಿ ಬದುಕುವ ಕಾಲಘಟ್ಟವೇ ಮುಗಿದು ಹೋಯ್ತೇನೋ ಅನಿಸುತ್ತೆ’ ಎಂದಿದ್ದಾರೆ ಎಸ್ ನಾರಾಯಣ್.
‘ಹಿರಿಯರು ಸಂಸ್ಕಾರ ಕಲಿಸಬೇಕಿತ್ತು, ಅದನ್ನು ಕಲಿಸಿಲ್ಲ. ಇದು ಬಗೆಹರಿಸಲಾಗದ ಕಟ್ಟಂಗಾಟಿ ಹೋಯ್ತು. ಅವರ ಹಿರಿಯರನ್ನು ಕರೆಸಿ ಮಾತನಾಡಿದೆ ಯಾವುದೂ ಸಹ ಸರಿಬರಲಿಲ್ಲ. ಮಾತು ಫಲಕಾರಿ ಆಗಲಿಲ್ಲ. ಅದಾದ ಬಳಿಕ ಅವರಿಗೂ ಅನಿಸಿರಬಹುದು, ಹೇಗಾದರೂ ಇವರಿಗೆ ತೊಂದರೆ ಕೊಡೋಣ ಎಂದು ಹಾಗಾಗಿ ಈ ಒಂದು ವರ್ಷ ಆದ ಮೇಲೆ ದೂರು ಕೊಟ್ಟಿದ್ದಾರೆ. ನಾನು ಸಮಾಜದಲ್ಲಿ ಪ್ರಾಮಾಣಿಕವಾಗಿ ಬದುಕಿದವನು, ಸಮಾಜದ ಸ್ವಚ್ಛತೆಯಲ್ಲಿ ತೊಡಗಿಕೊಂಡವನು, ನನ್ನ ಮೇಲೆ ಮಾಡಿರುವ ಆರೋಪ ಹುರುಳಿಲ್ಲದ್ದು’ ಎಂದಿದ್ದಾರೆ.
‘ನಾನೇ ದುಡಿದು ಸಾಕುತ್ತಿದ್ದೆ’ ಎಂದು ಪವಿತ್ರಾ ಹೇಳಿರುವ ಮಾತಿಗೆ ವ್ಯಂಗ್ಯವಾಗಿ ಉತ್ತರಿಸಿರುವ ಎಸ್ ನಾರಾಯಣ್, ‘ಹೌದು, ನಾನು ಕೈ-ಕಾಲು ಮುರಿದುಕೊಂಡು ಮನೆಯಲ್ಲಿ ಕೂತಿದ್ದೀನಿ. ನನ್ನನ್ನು, ನನ್ನ ಮನೆಯವರನ್ನು ಅವರೇ ಸಾಕುತ್ತಿದ್ದಾರೆ’ ಎಂದರು. ಮುಂದುವರೆದು, ‘ನನ್ನನ್ನು ಯಾರೂ ಸಾಕುವ ಅಗತ್ಯ ಇಲ್ಲ. ಎಂಟು ಮಂದಿಗೆ ನಾನೇ ಕೆಲಸ ಕೊಟ್ಟಿದ್ದೇನೆ. ನನ್ನ ಕುಟುಂಬದ ಹೆಣ್ಣು ಮಕ್ಕಳು ಹೊರಗೆ ಹೋಗಿ ಕೆಲಸ ಮಾಡುವ ಅವಶ್ಯಕತೆಯೇ ಇಲ್ಲ. ಹಾಗಾಗಿ ನಾನು ಅದರ ವಿರುದ್ಧ. ಆರಾಮವಾಗಿ ಮನೆಯಲ್ಲಿರಲಿ, ಪುಸ್ತಕ ಓದಲಿ, ಮನೆಯಿಂದಲೇ ಏನಾದರೂ ಮಾಡಲಿ’ ಎಂದಿದ್ದಾರೆ ಎಸ್ ನಾರಾಯಣ್.
‘ಗಾಯ ಆಗಿದ್ದರೆ ಮುಲಾಮು ಹಚ್ಚಬಹುದು, ಗಾಯವೇ ಇಲ್ಲದೆ ನೋವು-ನೋವು ಎಂದರೆ ಏನು ಮಾಡುವುದು’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಎಸ್ ನಾರಾಯಣ್, ‘ಪ್ರಕರಣ ಈಗ ಕೋರ್ಟ್ನಲ್ಲಿದೆ. ಹಾಗಾಗಿ ಆ ಯುವತಿಯ ಬಗ್ಗೆ ನಾನು ಹೆಚ್ಚು ಮಾತನಾಡುವಂತಿಲ್ಲ. ಅವರು ಕೋರ್ಟ್ಗೆ ಹೋಗಿದ್ದಾರೆ. ಸರಿ ನಾವೂ ಸಹ ಕೋರ್ಟ್ಗೆ ಹೋಗುತ್ತೇವೆ, ಅಲ್ಲಿ ಗೆಲ್ಲುವ ವಿಶ್ವಾಸ ನನಗೆ ಇದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ