
ಸಾಲು ಮರದ ತಿಮ್ಮಕ್ಕ (Saalumarada Thimmakka) ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ಪರಿಸರ ರಕ್ಷಣೆಯಲ್ಲಿ ಅವರು ನೀಡಿದ ಕೊಡುಗೆಯನ್ನು ಎಲ್ಲರೂ ಸ್ಮರಿಸುತ್ತಾರೆ. ಉಸಿರಿರುವರೆಗೂ ಹಸಿರು ಬೆಳೆಸುವ ಶಪಥವನ್ನು ಅವರು ಮಾಡಿದ್ದಾರೆ. ಈಗ ಸಾಲು ಮರದ ತಿಮ್ಮಕ್ಕನ ಮೇಲೆ ಸಿನಿಮಾ ಮಾಡಲು ತಂಡವೊಂದು ಹೊರಟಿತ್ತು. ಇದಕ್ಕೆ ‘ವೃಕ್ಷ ಮಾತೆ’ ಎಂಬ ಶೀರ್ಷಿಕೆ ಇಡಲಾಗಿದೆ. ಆದರೆ, ಈ ಸಿನಿಮಾ ಮಾಡಬಾರದು ಎಂದು ಸ್ವತಃ ತಿಮ್ಮಕ್ಕ ಅವರೇ ಫಿಲ್ಮ್ ಚೇಂಬರ್ಗೆ ಬಂದು ದೂರು ಕೊಟ್ಟಿದ್ದಾರೆ.
‘ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ‘ವೃಕ್ಷಮಾತೆ’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ದಿಲೀಪ್ ಕುಮಾರ್ ಎಚ್.ಆರ್., ಸೌಜನ್ಯ ಡಿ.ವಿ, ಎ. ಸಂತೋಷ್ ಮುರಳಿ, ಒರಟ ಶ್ರೀ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಒರಟ ಶ್ರೀ ನಿರ್ದೇಶನ ಮಾಡುತ್ತಿದ್ದಾರೆ. ಸಿದ್ದೇಶ್ ಅವರು ಬರೆದಿರುವ ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಕೃತಿಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ. ಆದರೆ, ಇದಕ್ಕೆ ಸಾಲು ಮರದ ತಿಮ್ಮಕ್ಕ ಅವರೇ ವಿರೋಧ ಹೊರಹಾಕಿದ್ದಾರೆ.
ಎರಡು ದಿನಗಳ ಹಿಂದೆ ಚಿತ್ರತಂಡ ಸಿನಿಮಾದ ಶೂಟಿಂಗ್ ಮಾಡುತ್ತಿತ್ತು. ಈ ವೇಳೆ ತಂಡವನ್ನು ಸ್ಟೇಷನ್ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ‘ವೃಕ್ಷಮಾತೆ’ ಸಿನಿಮಾಗೆ ಸಾಲು ಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಅವರಿಂದ ಅನುಮತಿ ಪಡೆದಿಲ್ಲ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದರು. ಈಗ ಫಿಲ್ಮ್ ಚೇಂಬರ್ಗೆ ಆಗಮಿಸಿ ಸಾಲು ಮರದ ತಿಮ್ಮಕ್ಕ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ: ‘ಸಾಲುಮರದ ತಿಮ್ಮಕ್ಕ’ನ ಸಿನಿಮಾಕ್ಕೆ ಸಾಕು ಮಗ ಸಮಸ್ಯೆ?
ಸಾಲುಮರದ ತಿಮ್ಮಕ್ಕ ಅವ್ರ ಸಾಕು ಮಗ ಉಮೇಶ್ ಈ ಬಗ್ಗೆ ಮಾತನಾಡಿದ್ದಾರೆ. ‘ಸಾಲುಮರದ ತಿಮ್ಮಕ್ಕ ಅವ್ರ ಬಯೋಪಿಕ್ ಮಾಡೋದಾಗಿ ಸಾಕಷ್ಟು ನಿರ್ದೇಶಕರು ಬಂದಿದ್ದರು. ಆದರೆ, ನಾವು ಮಾಡೋದು ಬೇಡ ಎಂದು ಹೇಳಿದ್ದೇವೆ. ದಿಲೀಪ್ ಕೂಡ ಸಿನಿಮಾ ಮಾಡುತ್ತೇನೆ ಎಂದಿದ್ದರು. ಅವರಿಗೂ ಬೇಡ ಎಂದು ಹೇಳಿದ್ದೆವು. ಈ ತಂಡಕ್ಕೆ ನಾವು ಸಿನಿಮಾ ಮಾಡೋಕೆ ಬಿಡುವುದಿಲ್ಲ’ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
‘ಸಾಲುಮರದ ತಿಮ್ಮಕ್ಕ ಇವತ್ತು ಬಂದು ದೂರು ಕೊಟ್ಟಿದ್ದಾರೆ. ನಮ್ಮ ಅನುಮತಿ ಇಲ್ಲದೇ ಸಿನಿಮಾ ಮಾಡ್ತಿದಾರೆ ಎಂದು ಹೇಳಿದ್ದಾರೆ. ಇಲ್ಲಿ ವೃಕ್ಷಮಾತೆ ಸಿನಿಮಾ ರಿಜಿಸ್ಟರ್ ಆಗಿಲ್ಲ. ಸಿನಿಮಾ ತಂಡವನ್ನು ಕರೆದು ಮಾತನಾಡುತ್ತೇವೆ. ಸಾಲುಮರದ ತಿಮ್ಮಕ್ಕ ಅವ್ರಿಗೆ ನಾವು ಸ್ಪಂದಿಸುತ್ತೇವೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.