ನಟ ಉಪೇಂದ್ರ ಅವರಿಗೆ ಇಂದು (ಸೆಪ್ಟೆಂಬರ್ 18) ಜನ್ಮದಿನ. ಅನೇಕ ಭಿನ್ನ ಸಿನಿಮಾಗಳನ್ನು ನೀಡಿದ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು ‘ಯುಐ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇಂದು ಸಿನಿಮಾದ ಸುದ್ದಿಗೋಷ್ಠಿ ನಡೆಯುತ್ತಿದೆ. ಸಾಕಷ್ಟು ಜನ ಶಿಷ್ಯರನ್ನು ಸಿದ್ಧಪಡಿಸಿದ್ದು ಇದೇ ಉಪೇಂದ್ರ. ಉಪೇಂದ್ರ ಅವರು ಸಾಧು ಕೋಕಿಲ ಅವರನ್ನು ಹಾಸ್ಯ ಕಲಾವಿದನಾಗಿ ಮಾಡಿದ್ದರು. ಆ ಬಗೆಗಿನ ಅಪರೂಪದ ವಿಚಾರವನ್ನು ನಾವು ನಿಮಗೆ ಹೇಳುತ್ತಾ ಇದ್ದೇವೆ.
‘ಶ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಉಪೇಂದ್ರ. ಈ ಸಿನಿಮಾಗೆ ಸಾಧು ಕೋಕಿಲ ಅವರೇ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಕೂಡ ಮಾಡಿದ್ದರು. ಇದಕ್ಕೆ ಕಾರಣ ಆಗಿದ್ದು ಉಪೇಂದ್ರ ಅವರೇ. ನಂತರ ಹಾಸ್ಯ ಪಾತ್ರಗಳ ಮೂಲಕ ಮಿಂಚಲು ಶುರು ಮಾಡಿದರು ಸಾಧು.
ವಿ. ಮನೋಹರ್ ಅವರಿಂದ ಉಪೇಂದ್ರಗೆ ಸಾಧು ಪರಿಚಯ ಆಯಿತು. ‘ಶ್’ ಸಂಗೀತ ಸಂಯೋಜನೆಯ ಜವಾಬ್ದಾರಿ ಅವರಿಗೆ ಸಿಕ್ಕಿತ್ತು. ಒಮ್ಮೆ ಅವರು ಸಾಧುಗೆ ಸೆಟ್ಗೆ ಬರೋಕೆ ಹೇಳಿದ್ದರು. ಅದರಂತೆ ಸಾಧು ಸೆಟ್ಗೆ ಹೋಗಿದ್ದರು. ಆಗ ಅವರು ನಟನೆ ಮಾಡುವಂತೆ ಸೂಚಿಸಿದರು. ಅದರಂತೆ ಸಾಧು ‘ಶ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದರು. ಅಲ್ಲಿಂದ ಸಾಧುವಿನ ನಟನಾ ರಂಗ ಆರಂಭ. ಹೀಗಾಗಿ ಸಾಧುಗೆ ಉಪೇಂದ್ರ ಅವರೇ ಗಾಡ್ ಫಾದರ್.
ಇದನ್ನೂ ಓದಿ: ಉಪೇಂದ್ರ ಸಿನಿಮಾಗಳ ಹೆಸರೇಕೆ ವಿಚಿತ್ರ, ಅದರ ಹಿಂದಿದೆ ಕಾರಣ
ಕೋಕಿಲ ಟೈಟಲ್ ನೀಡಿದ್ದೂ ಕೂಡ ಉಪೇಂದ್ರ ಅವರೇ. ಕೋಕಿಲ ಎಂದರೆ ಕೋಗಿಲೆ ಎಂಬ ಅರ್ಥ ಇದೆ. ಕೋಗಿಲೆ ಕೂಗು ಎಲ್ಲರಿಗೂ ಇಷ್ಟ. ‘ನಾನು ಉತ್ತಮವಾಗಿ ಮ್ಯೂಸಿಕ್ ಮಾಡುತ್ತೇನೆ ಎಂಬ ಕಾರಣಕ್ಕೆ ಕೋಕಿಲ ಎಂದು ನನ್ನ ಹೆಸರಿಗೆ ಸೇರ್ಪಡೆ ಮಾಡಿದ್ದು ಉಪೇಂದ್ರ. ನನ್ನ ಹೆಸರು ಮೊದಲು ಸಾಧು ಎಂದು ಇತ್ತು. ಕೋಗಿಲೆ ಚೆನ್ನಾಗಿ ಹಾಡುತ್ತದೆ. ನೀವು ಸೂಪರ್ ಆಗಿ ಮ್ಯೂಸಿಕ್ ಮಾಡುತ್ತೀರಾ. ಹೀಗಾಗಿ, ನಿಮ್ಮ ಹೆಸರಿಗೆ ಕೋಕಿಲ ಅನ್ನೋದನ್ನು ಸೇರಿಸಿ ಎಂದಿದ್ದರು’ ಎಂಬುದಾಗಿ ಸಾಧು ಹೇಳಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಸಾಧು ಅವರು ಸಾಧು ಕೋಕಿಲ ಎಂದೇ ಫೇಮಸ್ ಆಗಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಅವರು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:45 am, Wed, 18 September 24