ಪ್ರಭಾಸ್ (Prabhas) ನಟನೆಯ ‘ಸಲಾರ್’ (Salaar) ಸಿನಿಮಾ ಡಿಸೆಂಬರ್ 22ಕ್ಕೆ ತೆರೆಗೆ ಬರಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದ್ದು, ಟಿಕೆಟ್ ದರವೂ ಜೋರಾಗಿಯೇ ಇದೆ. ‘ಸಲಾರ್’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತಮಿಳುನಾಡಿನಲ್ಲಿ, ತಮಿಳುನಲ್ಲಿಯೂ, ಕೇರಳದಲ್ಲಿ ಮಲಯಾಳಂನಲ್ಲಿ, ಮುಂಬೈ ಭಾಗದಲ್ಲಿ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡದ ಆವೃತ್ತಿಗೆ ಅತ್ಯಂತ ಕಡಿಮೆ ಶೋಗಳನ್ನು ನೀಡಲಾಗಿದೆ. ಇದರ ಹಿಂದೆ ತಂತ್ರವೊಂದಿದೆ ಎಂಬುದು ನೆಟ್ಟಿಗರ ವಾದ.
‘ಸಲಾರ್’ ಸಿನಿಮಾದ ಕನ್ನಡ ಆವೃತ್ತಿಯ ಕೇವಲ 10 ಶೋಗಳಷ್ಟೆ ಈವರೆಗೆ ಬೆಂಗಳೂರಿನಲ್ಲಿ ನೀಡಲಾಗಿದೆ. ನರ್ತಕಿ ಚಿತ್ರಮಂದಿರದಲ್ಲಿ ಮಾತ್ರವೇ ಎಲ್ಲ ನಾಲ್ಕು ಶೋಗಳಲ್ಲಿ ಕನ್ನಡ ಆವೃತ್ತಿ ತೋರಿಸಲಾಗುತ್ತಿದೆ. ಅದರ ಹೊರತಾಗಿ ಇನ್ನುಳಿದ ಆರು ಶೋಗಳು, ಆರು ಭಿನ್ನ ಭಿನ್ನ ಚಿತ್ರಮಂದಿರದಲ್ಲಿ ತಲಾ ಒಂದೊಂದರಂತೆ ಪ್ರದರ್ಶಿತವಾಗುತ್ತಿದೆ. ಈ ಮಾಹಿತಿ ಡಿಸೆಂಬರ್ 17ರಂದು, ದಿನಗಳು ಕಳೆದಂತೆ ಇನ್ನೂ ಕನ್ನಡದ ಶೋಗಳ ಸಂಖ್ಯೆ ಹೆಚ್ಚಬಹುದಾದರೂ ಒಟ್ಟು ಶೋಗಳ ಸಂಖ್ಯೆ 15 ದಾಟುವುದು ಅನುಮಾನ.
ಆದರೆ ಹೀಗೆ ಕನ್ನಡದ ಶೋಗಳ ಸಂಖ್ಯೆಯನ್ನು ಕಡಿಮೆ ಮಾಡಿರುವುದರಲ್ಲಿ ಅಥವಾ ನಿಧಾನಕ್ಕೆ ಶೋಗಳ ಸಂಖ್ಯೆ ಹೆಚ್ಚು ಮಾಡುತ್ತಿರುವುದರ ಹಿಂದೆ ತಂತ್ರವಿದೆ ಎನ್ನಲಾಗುತ್ತಿದೆ. ಅಡ್ವಾನ್ಸ್ ಬುಕಿಂಗ್ ಆರಂಭವಾದಾಗ ಕನ್ನಡಕ್ಕೆ ಕೇವಲ ಒಂದು ಶೋ ಮಾತ್ರವೇ ನೀಡಲಾಗಿತ್ತು, ಕನ್ನಡ ಶೋ ನೋಡಬೇಕು ಎಂದುಕೊಂಡವರು ಸಹ ಒಂದೇ ಶೋ ಇರುವ ಕಾರಣ ಬೇರೆ ಅವಕಾಶ ಇಲ್ಲದೆ ತೆಲುಗು ಶೋ ಅನ್ನೇ ಬುಕ್ ಮಾಡಿಮಾಡಿಕೊಳ್ಳಬೇಕಿತ್ತು. ಹೀಗೆ ತೆಲುಗು ಸಿನಿಮಾವನ್ನೇ ಹೆಚ್ಚು ಬುಕ್ ಮಾಡಿಕೊಳ್ಳಲಿ ಎಂಬ ಕಾರಣಕ್ಕೆ, ಆರಂಭದಲ್ಲಿ ಕಡಿಮೆ ಶೋಗಳನ್ನು ನೀಡಲಾಗಿದೆ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Prabhas: ಪ್ರಭಾಸ್ಗಾಗಿ ‘ಸಲಾರ್’ ಪ್ರಮೋಷನ್ಗೆ ಬರಲಿದ್ದಾರೆ ನಿರ್ದೇಶಕ ರಾಜಮೌಳಿ
ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ‘ಸಲಾರ್’ ಸಿನಿಮಾದ ತೆಲುಗು ಆವೃತ್ತಿಯನ್ನು ಪ್ರದರ್ಶಿಸಲಾಗುತ್ತಿದೆ. ತೆಲುಗು ಆವೃತ್ತಿಯ ಮಾರ್ನಿಂಗ್ ಶೋಗಳ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆಗಿದೆ. ಇತರೆ ಶೋಗಳು ಸಹ ಬೇಗ-ಬೇಗನೇ ಬುಕ್ ಆಗುತ್ತಿವೆ. ಕನ್ನಡದಲ್ಲಿ ಸಿನಿಮಾ ನೋಡೋಣ ಎಂದುಕೊಂಡವರಿಗೆ ಅತ್ಯಂತ ಕಡಿಮೆ ಶೋಗಳು ಅದರಲ್ಲಿಯೂ ಸೂಕ್ತ ಸಮಯಕ್ಕೆ ಇಲ್ಲದೇ ಇರುವ ಕಾರಣ, (ಬಹುತೇಕ ಕನ್ನಡ ಶೋಗಳು ಮಧ್ಯಾಹ್ನಕ್ಕೆ ಇವೆ) ಬೇರೆ ಆಯ್ಕೆ ಇಲ್ಲದೆ ತೆಲುಗು ಶೋ ಅನ್ನೇ ಬುಕ್ ಮಾಡಬೇಕಿದೆ.
‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ಬಿಡುಗಡೆ ಆಗಲಿದೆ. ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆಯ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ನವರೇ ಕರ್ನಾಟಕ ಹಾಗೂ ತೆಲುಗು ರಾಜ್ಯಗಳಲ್ಲಿ ಈ ಸಿನಿಮಾದ ವಿತರಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ