ಸಂಚಾರಿ ವಿಜಯ್​ ಬದುಕುಳಿಯುವ ಸಾಧ್ಯತೆ ಕಡಿಮೆ, ಆತನ ಅಂಗಾಂಗ ದಾನ ಮಾಡುತ್ತೇವೆ: ಸಹೋದರ ಸಿದ್ದೇಶ್​ ಗದ್ಗದಿತ

| Updated By: Digi Tech Desk

Updated on: Jun 14, 2021 | 12:49 PM

Sanchari Vijay: ಅಪಘಾತಕ್ಕೆ ಒಳಗಾಗಿರುವ ನನ್ನ ಸಹೋದರ ಬದುಕುವ ಸಾಧ್ಯತೆ ಕಡಿಮೆ ಇದೆ. ಏನಾದರೂ ಆದರೆ ಆತನ ಅಂಗಾಂಗ ದಾನ ಮಾಡುತ್ತೇವೆ ಎಂದು ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ಗದ್ಗದಿತರಾಗಿ ನುಡಿದಿದ್ದಾರೆ.

ಸಂಚಾರಿ ವಿಜಯ್​ ಬದುಕುಳಿಯುವ ಸಾಧ್ಯತೆ ಕಡಿಮೆ, ಆತನ ಅಂಗಾಂಗ ದಾನ ಮಾಡುತ್ತೇವೆ: ಸಹೋದರ ಸಿದ್ದೇಶ್​ ಗದ್ಗದಿತ
ಸಂಚಾರಿ ವಿಜಯ್
Follow us on

ಬೆಂಗಳೂರು: ನಟ ಸಂಚಾರಿ ವಿಜಯ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಸಹೋದರ ಸಿದ್ದೇಶ್ ಹೇಳಿಕೆ ನೀಡಿದ್ದು, ವೈದ್ಯರು ಹೇಳುವ ಪ್ರಕಾರ ಸಂಚಾರಿ ವಿಜಯ್ ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದು ಭಾವುಕರಾಗಿದ್ದಾರೆ. ಅಪಘಾತಕ್ಕೆ ಒಳಗಾಗಿರುವ ನನ್ನ ಸಹೋದರ ಬದುಕುವ ಸಾಧ್ಯತೆ ಕಡಿಮೆ ಇದೆ. ಏನಾದರೂ ಆದರೆ ಆತನ ಅಂಗಾಂಗ ದಾನ ಮಾಡುತ್ತೇವೆ ಎಂದು ಗದ್ಗದಿತರಾಗಿ ನುಡಿದಿದ್ದಾರೆ.

ವೈದ್ಯರು ಹೇಳುವ ಪ್ರಕಾರ ವಿಜಯ್​ ಬದುಕುವ ಸಾಧ್ಯತೆ ಕಡಿಮೆ ಇದೆ. ಚಿಕಿತ್ಸೆಗೆ ನೆರವು ನೀಡಿದವರಿಗೆ, ರಾಜ್ಯ ಸರ್ಕಾರಕ್ಕೆ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಸಂಚಾರಿ ವಿಜಯ್ ನನ್ನ ಸ್ಟ್ರೆಂಥ್, ಅವನೇ ನನಗೆಲ್ಲಾ. ಅವನಿಲ್ಲದೆ ನನ್ನಿಂದ ಮಾತನಾಡುವುದಕ್ಕೂ ಆಗುತ್ತಿಲ್ಲ ಎಂದು ಸಹೋದರ ಸಿದ್ದೇಶ್ ಗದ್ಗದಿತರಾಗಿ ಹೇಳಿಕೆ ನೀಡಿದ್ಧಾರೆ.

ಇತ್ತ ಅವರ ಆರೋಗ್ಯದ ಕುರಿತು ಸುದ್ದಿಗೋಷ್ಠಿ ನಡೆಸಿರುವ ಅಪೋಲೋ ಆಸ್ಪತ್ರೆಯ ವೈದ್ಯರು ಸಂಚಾರಿ ವಿಜಯ್​ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ ಎಮದಿರುವುದು ಆತಂಕಕ್ಕೆ ಕಾರಣವಾಗಿದೆ. ಅಪಘಾತ ನಡೆದಾಗ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ, ಐಸಿಯುನಲ್ಲಿ ಇರಿಸಲಾಗಿದೆ. ಆದರೆ ಅವರು ಚಿಕಿತ್ಸೆಗೆ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ ಎಂದಿದ್ದಾರೆ.ಮೆದುಳಿನ ಬಲಭಾಗದಲ್ಲಿ ಹೆಚ್ಚು ಹೊಡೆತ ಬಿದ್ದು ತೀವ್ರ ರಕ್ತಸ್ರಾವ ಆಗಿತ್ತು. ನಿನ್ನೆ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಸರ್ಜರಿ ಮಾಡಿದೆವು. ಅದಾಗಿ 36 ಗಂಟೆ ಕಳೆದರೂ ಅವರ ಬ್ರೇನ್​ ಕಡೆಯಿಂದ ಪ್ರತಿಕ್ರಿಯೆ ಇಲ್ಲ. ಮೆದುಳಿನ ಕೆಲಸಗಳು ನಿಂತು ಹೋಗಿದೆ. ಇದನ್ನು ಬ್ರೇನ್​ ಫೇಲ್ಯೂರ್​ ಎನ್ನುತ್ತೇವೆ. ಇದು ಮುಂದುವರಿದರೆ ಚೇತರಿಕೆ ಸಾಧ್ಯತೆ ಕಡಿಮೆ ಆಗುತ್ತದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಶನಿವಾರ (ಜೂ.12) ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಅವರಿಗೆ ಆಕ್ಸಿಡೆಂಟ್​ ಆಗಿತ್ತು. ಸ್ನೇಹಿತ ನವೀನ್​ ಅವರ ಬೈಕ್​ನಲ್ಲಿ ಹಿಂಬದಿ ಕುಳಿತು ವಿಜಯ್​ ಪ್ರಯಾಣ ಮಾಡುತ್ತಿದ್ದರು. ಅಪಘಾತದ ತೀವ್ರತೆಗೆ ಅವರು ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. 36 ಗಂಟೆಗಳು ಕಳೆದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ.

ಇದನ್ನೂ ಓದಿ:
Sanchari Vijay: ಸಂಚಾರಿ ವಿಜಯ್ ಮೆದುಳಿನ ಕೆಲಸಗಳು ನಿಂತಿದೆ; ಅಪೋಲೋ ವೈದ್ಯರಿಂದ ಆತಂಕಕಾರಿ ಮಾಹಿತಿ

Published On - 11:43 am, Mon, 14 June 21