ಕೊರೊನಾ ವೈರಸ್ನಿಂದಾಗಿ ಆಗುತ್ತಿರುವ ಕಷ್ಟಗಳು ಒಂದೆರಡಲ್ಲ. ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ರೋಗಿಗಳು ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಪರದಾಡುವಂತಾಗಿದೆ. ಸೂಕ್ತ ಸಮಯಕ್ಕೆ ಆಕ್ಸಿಜನ್ ಸಿಗುತ್ತಿಲ್ಲ. ಇಂಥ ಕಠಿಣ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ಐಷಾರಾಮಿ ಬಂಗಲೆಗಳಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಸ್ಯಾಂಡಲ್ವುಡ್ ನಟ ಅರ್ಜುನ್ ಗೌಡ ಅವರು ಬರೀ ಬಾಯಿ ಮಾತಿನಲ್ಲಿ ಸ್ಟೇ ಹೋಮ್ ಸ್ಟೇ ಸೇಫ್ ಎಂಬುದನ್ನು ಬಿಟ್ಟು ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡದಲ್ಲಿ ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ದರ್ಶನ್ ಮುಂತಾದ ಸ್ಟಾರ್ ನಟರ ಚಿತ್ರಗಳಲ್ಲಿ ಅಭಿನಯಿಸಿರುವ ಅರ್ಜುನ್ ಗೌಡ ಅವರಿಗೆ ಫಿಟ್ನೆಸ್ ಬಗ್ಗೆ ಅಪಾರ ಆಸಕ್ತಿ. ರುಸ್ತುಂ, ಒಡೆಯ, ಯುವರತ್ನ ಮುಂತಾದ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಆದರೆ ಈಗ ಅವರು ಆ್ಯಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಸೆಲೆಬ್ರಿಟಿಗಳು ಕೊರೊನಾ ವೈರಸ್ ಹಾವಳಿಗೆ ಹೆದರಿಕೊಂಡು ಮನೆಯಲ್ಲಿ ಕುಳಿತಿರುವಾಗ ಅರ್ಜುನ್ ಗೌಡ ಅವರು ದೇವರು ಮೆಚ್ಚುವ ಕೆಲಸ ಮಾಡುತ್ತಿದ್ದಾರೆ.
ರೋಗಿಗಳನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಮೃತ ರೋಗಿಗಳ ದೇಹವನ್ನು ಸ್ಮಶಾನಕ್ಕೆ ತಲುಪಿಸುವ ಕೆಲಸದಲ್ಲಿ ಅರ್ಜುನ್ ಗೌಡ ಮಗ್ನರಾಗಿದ್ದಾರೆ. ಅವರು ಮಾಡುತ್ತಿರುವ ಈ ಕೆಲಸದ ಬಗ್ಗೆ ಸ್ವತಃ ಅವರ ಕುಟುಂಬದವರಿಗೆ ಗೊತ್ತೇ ಇರಲಿಲ್ಲ. ಆದರೆ ಈಗ ಈ ವಿಚಾರ ಜಗಜ್ಜಾಹೀರಾಗುತ್ತಿರುವುದರಿಂದ ಮನೆಯವರಿಗೆ ವಿಷಯ ಮುಟ್ಟಿದೆ. ಮೊದಲಿಗೆ ತೀವ್ರವಾಗಿ ವಿರೋಧಿಸಿದ್ದ ಕುಟುಂಬದವರು ಈಗ ಮಗನ ಕೆಲಸಕ್ಕೆ ಬೆಂಬಲ ಸೂಚಿಸಿದ್ದಾರೆ. ಅರ್ಜುನ್ ಗೌಡ ಮಾಡುತ್ತಿರುವ ಈ ಕೆಲಸಕ್ಕೆ ಸ್ಯಾಂಡಲ್ವುಡ್ನ ಅನೇಕರು ಭೇಷ್ ಎನ್ನುತ್ತಿದ್ದಾರೆ. ನಿರ್ದೇಶಕ ಪನ್ನಗ ಭರಣ, ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಹಲವರು ಅರ್ಜುನ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಸದ್ಯಕ್ಕಂತೂ ಕೊರೊನಾ ಕಾಟ ನಿಲ್ಲುವಂತೆ ಕಾಣುತ್ತಿಲ್ಲ. ಜನರ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಹಾಗಾಗಿ ಅರ್ಜುನ್ ಗೌಡ ಅವರಂತಹ ವ್ಯಕ್ತಿಗಳ ಸಹಾಯ ಈ ಸಮಾಜಕ್ಕೆ ಹೆಚ್ಚು ಅಗತ್ಯವಿದೆ. ಅದನ್ನು ಅರ್ಥ ಮಾಡಿಕೊಂಡಿರುವ ಅವರು ಇನ್ನೂ ಕೆಲವು ತಿಂಗಳ ಕಾಲ ಈ ಕೆಲಸವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಸದ್ಯಕ್ಕಂತೂ ಬೆಂಗಳೂರಿನಲ್ಲಿ ಜನರು ಅಂತ್ಯ ಸಂಸ್ಕಾರಕ್ಕೂ ಕಷ್ಟಪಡುತ್ತಿದ್ದಾರೆ. ಅಂಥ ಅನೇಕರಿಗೆ ಅರ್ಜುನ್ ಗೌಡ ಸಹಾಯ ಮಾಡುವ ಮೂಲಕ ಮೆಚ್ಚುಗೆ ಗಳಿಸುತ್ತಿದ್ದಾರೆ.
ಇದನ್ನೂ ಓದಿ: Ramu Death: ನಿಧನಕ್ಕೂ ಮುನ್ನ ಫೋನ್ನಲ್ಲಿ ಕೊವಿಡ್ ಕಷ್ಟ ವಿವರಿಸಿದ್ದ ಕೋಟಿ ರಾಮು
ಬೀದಿಗೆ ಬಂತು ಶ್ರೀಕೃಷ್ಣ ಧಾರಾವಾಹಿ ನಟನ ಬದುಕು; ಕಣ್ಣೀರಿಟ್ಟ ಸುನಿಲ್ ನಗರ್
Published On - 12:33 pm, Fri, 30 April 21