ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಪುಂಡಾಟ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕಾರಣಿಗಳು, ಪ್ರಭಾವಿಗಳಿಂದ ಹೆಚ್ಚು ಒತ್ತಡ ಬರುತ್ತಿದೆ ಎಂದು ದೂರುದಾರೆ ಮಂಜುಳಾ ಪುರುಷೋತ್ತಮ್ ಗಂಭೀರ ಆರೋಪ ಮಾಡಿದ್ದಾರೆ. ‘‘ಈವರೆಗೂ ಪೊಲೀಸರು ಹಲ್ಲೆ ಮಾಡಿದವರನ್ನು ಬಂಧಿಸಿಲ್ಲ. ಸಮಯ ಕಳೆದಂತೆ ನಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಲೇ ಇದೆ. ಸಿಸಿಟಿವಿ ರೀ ಕನ್ಸಿಡರ್ ಮಾಡಿ ಎಂದು ನಾನು ಠಾಣೆಗೆ ಹೋಗಿದ್ದೆ. ದೂರು ವಾಪಸ್ ಪಡೆಯಲು ಹೋಗಿರಲಿಲ್ಲ. ಗಲಾಟೆ ನಡೆದ ಬಳಿಕ ಎಲ್ಲವನ್ನು ಪೊಲೀಸರಿಗೆ ಕೊಟ್ಟಿದ್ದೇನೆ. ರೇಖಾ, ಸ್ನೇಹಿತ್ ಹೊಡೆದಿಲ್ಲ ಎಂದು ಮಾಹಿತಿ ನೀಡಿರುವೆ. ಬೌನ್ಸರ್ಗಳ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ’’ ಎಂದು ಬೆಂಗಳೂರಿನಲ್ಲಿ ಮಂಜುಳಾ ಪುರುಷೋತ್ತಮ್ ಹೇಳಿಕೆ ನೀಡಿದ್ದಾರೆ.
ರೇಖಾ ಮತ್ತು ಸ್ನೇಹಿತ್ ಇಬ್ಬರೂ ಜಗಳ ಬಿಡಿಸಲು ಬಂದಿದ್ದರು. ಅವರಿಗೂ ಗಲಾಟೆಗೂ ಯಾವುದೇ ಸಂಬಂಧವಿಲ್ಲ. ಯುವತಿಯನ್ನು ಹೊಡೆದವರಿಗೆ ಖಂಡಿತ ಶಿಕ್ಷೆಯಾಗಲಿ ಎಂದು ಮಂಜುಳಾ ಪುರುಷೋತ್ತಮ್ ಒತ್ತಾಯಿಸಿದ್ದಾರೆ. ಹಿತೈಶಿಗಳಿಂದ ನಮಗೆ ಮನವಿ ಬಂದಿದೆ. ಯಾವುದೇ ಒತ್ತಡ, ಮುಲಾಜಿಗೆ ಬಗ್ಗಿಲ್ಲ. ಸ್ನೇಹಿತ್ ಅವರ ಭವಿಷ್ಯದ ದೃಷ್ಟಿಯಿಂದ ಈ ಬಗ್ಗೆ ನಾವು ನಿರ್ಧರಿಸಿದ್ದೇವೆ. ಯುವತಿಗೆ ಹೊಡೆದವರಿಗೆ ಖಂಡಿತ ಶಿಕ್ಷೆಯಾಗಲಿ ಎಂದು ಮಂಜುಳಾ ತಿಳಿಸಿದ್ದಾರೆ. ಸ್ನೇಹಿತ್ ಹಾಗೂ ರೇಖಾ ಹಲ್ಲೆ ನಡೆಸಿಲ್ಲ ಎಂದು ಮಂಜುಳಾ ಅವರು ಹೇಳಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ತೆರೆಮರೆಯಲ್ಲಿ ರಾಜಿ ಸಂಧಾನ ನಡೆದಿದೆ. ಪ್ರಕರಣದಲ್ಲಿ ಸೌಂದರ್ಯ ಜಗದೀಶ್ ಪತ್ನಿ ರೇಖಾ ಹಾಗೂ ಪುತ್ರ ಸ್ನೇಹಿತ್ ಹೆಸರನ್ನು ಕೈಬಿಡುವಂತೆ ದೂರುದಾರೆ ಮನವಿ ಮಾಡಲಿದ್ದಾರೆ ಎನ್ನಲಾಗಿತ್ತು. ಇದೀಗ ಮಂಜುಳಾ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ದೂರು ವಾಪಸ್ ಪಡೆಯಲು ಹೋಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈಸ್ಟ್ ವೆಸ್ಟ್ ಗ್ರೂಪ್ ಮಾಲಿಕ ರಜತ್ ಕೂಡ ಟಿವಿ9ನೊಂದಿಗೆ ಮಾತನಾಡಿದ್ದು, ದೂರು ವಾಪಸ್ ಪಡೆಯುವುದಿಲ್ಲ ಎಂದಿದ್ದಾರೆ. ಮುಂದಿನದ್ದನ್ನು ಕಾನೂನು ನೋಡಿಕೊಳ್ಳುತ್ತದೆ ಎಂದಿದ್ದಾರೆ.
ರಜತ್ ಮಾತನಾಡಿರುವ ವಿಡಿಯೋ ಇಲ್ಲಿದೆ:
ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಬೆಂಗಳೂರಿನ ಸಿಸಿಹೆಚ್ 46ರಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಸೌಂದರ್ಯ ಜಗದೀಶ್ ಪತ್ನಿ, ಮಗ ಸೇರಿ 8 ಜನರ ವಿರುದ್ಧ ಆರೋಪ ಹೊರಿಸಲಾಗಿದೆ. ಸೌಂದರ್ಯ ಜಗದೀಶ್ ಪತ್ನಿ ರೇಖಾ 6ನೇ ಆರೋಪಿಯಾಗಿದ್ದು, ಮಗ ಸ್ನೇಹಿತ್ ಈ ಪ್ರಕರಣದಲ್ಲಿ 8 ನೇ ಆರೋಪಿಯಾಗಿದ್ದಾರೆ. ಆರೋಪಿಗಳು ಪ್ರಭಾವಿಗಳಾಗಿರುವುದರಿಂದ ನಿರೀಕ್ಷಣಾ ಜಾಮೀನು ನೀಡದಂತೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಮನವಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:
Bhajarangi 2: ಶಿವಣ್ಣನ ‘ಭಜರಂಗಿ 2’ ಚಿತ್ರಕ್ಕೆ ಅಲ್ಲು ಅರ್ಜುನ್ ವಿಶ್; ವಿಡಿಯೋ ವೈರಲ್
Published On - 1:21 pm, Thu, 28 October 21