ಇನ್ನೇನಿದ್ದರೂ ಮಾಸ್, ಕಮರ್ಶಿಯಲ್, ಥ್ರಿಲ್ಲರ್ ಜಾನರ್ನ ಸಿನಿಮಾಗಳದ್ದಷ್ಟೆ ಜಮಾನ, ಪ್ರೇಮಕಥೆಗಳ ಜಮಾನ ಮುಗಿಯಿತು ಎಂದು ಸಿನಿಮಾ ಪ್ರೇಮಿಗಳು ಗೊಣಗುತ್ತಿರುವಾಗಲೆ ಬಿಡುಗಡೆ ಆದ ರಕ್ಷಿತ್ ಶೆಟ್ಟಿ (Rakshit Shetty) ನಟಿಸಿ, ಹೇಮಂತ್ ರಾವ್ ನಿರ್ದೇಶನ ಮಾಡಿರುವ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಮಾಸ್ ಪ್ರೇಕ್ಷನ ಕಣ್ಣಲ್ಲೂ ನೀರು ತರಿಸಿತು. ಸಿನಿಮಾದ ಎರಡೂ ಭಾಗಗಳು ಪ್ರೇಕ್ಷರ ಜೊತೆಗೆ ವಿಮರ್ಶಕರಿಗೂ ಬಹಳ ಇಷ್ಟವಾಗಿದೆ. ಸೈಡ್ ಎ ಹಾಗೂ ಸೈಡ್ ಬಿ ಎರಡೂ ಸಿನಿಮಾಗಳು ಈಗಾಗಲೇ ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಹಾಗಿದ್ದರೂ ಈ ಎರಡೂ ಸಿನಿಮಾಗಳು ಮತ್ತೆ ಚಿತ್ರಮಂದಿರಕ್ಕೆ ಬರುತ್ತಿವೆ.
ಎರಡೂ ಸಿನಿಮಾಗಳು ಒಟಿಟಿಗೆ ಬಂದ ಬಳಿಕವಂತೂ ಹೆಚ್ಚು ಜನರಿಗೆ ತಲುಪಿದ್ದು ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಅನುಭವವನ್ನು ಮಿಸ್ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ಇದೀಗ ಆ ಅವಕಾಶ ಈಗ ಮತ್ತೆ ಬಂದಿದೆ. ಪ್ರೇಮಿಗಳ ದಿನಾಚರಣೆ ಪ್ರಯುಕ್ತ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ವಿಶೇಷವೆಂದರೆ ಸಿನಿಮಾದ ಸೈಡ್ ಎ ಹಾಗೂ ಸೈಡ್ ಬಿ ಒಟ್ಟಿಗೆ ಬಿಡುಗಡೆ ಆಗುತ್ತಿದ್ದು, ಒಂದರ ಹಿಂದೆ ಒಂದು ಸಿನಿಮಾ ವೀಕ್ಷಿಸಬಹುದಾಗಿದೆ.
ಪ್ರೇಮಿಗಳ ದಿನಾಚರಣೆ ಪ್ರಯುಕ್ತವಾಗಿ ಪಿವಿಆರ್-ಐನಾಕ್ಸ್ ಮಲ್ಟಿಪ್ಲೆಕ್ಸ್ಗಳಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಆಸಕ್ತರು ಸಿನಿಮಾವನ್ನು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ನೋಡಿ ಆನಂದಿಸಬಹುದಾಗಿದೆ. ತಮ್ಮ ಸಿನಿಮಾ ಮರು ಬಿಡುಗಡೆ ಆಗುತ್ತಿರುವ ಖುಷಿಯ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ನಿಗದಿತ ಪಿವಿಆರ್-ಐನಾಕ್ಸ್ಗಳಲ್ಲಿ ಮಾತ್ರವೇ ಈ ಸಿನಿಮಾ ಮರು ಬಿಡುಗಡೆ ಆಗಲಿದೆ.
ಇದನ್ನೂ ಓದಿ:ದೈವ ಕೋಲದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದ ರಕ್ಷಿತ್ ಶೆಟ್ಟಿ
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವುದನ್ನು ಮಿಸ್ ಮಾಡಿಕೊಂಡಿದ್ದೀರ? ಇಗೋ ನಿಮಗೆ ಮತ್ತೊಂದು ಅವಕಾಶ, ಮನು, ಪ್ರಿಯಾ, ಸುರಭಿ ಹಾಗೂ ಸೋಮನ ಕತೆಯನ್ನು ಮತ್ತೊಮ್ಮೆ ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಒದಗಿ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ನಟಿ ರುಕ್ಮಿಣಿ ವಸಂತ್.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಗೋಪಾಲ್ ರಾವ್ ದೇಶಪಾಂಡೆ, ಅಚ್ಯುತ್ ಕುಮಾರ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಧನಾತ್ಮಕ ಪ್ರತಿಕ್ರಿಯೆಗಳು ಸಿನಿಮಾ ಪ್ರೇಮಿಗಳಿಂದ ವ್ಯಕ್ತವಾಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ