ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯ (Leelavathi) ಅಗಲಿಕೆಗೆ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಲೀಲಾವತಿ ಅವರು ಎಂಥಹಾ ಮೇರು ವ್ಯಕ್ತಿತ್ವದ ನಟಿಯಾಗಿದ್ದರು ಎಂಬುದನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳುತ್ತಿದ್ದಾರೆ. ಉಮಾಶ್ರೀ, ವಿನಯಾ ಪ್ರಸಾದ್, ಕೆ ಕಲ್ಯಾಣ್ ಸೇರಿದಂತೆ ಹಲವರು ತಾವು ಕಂಡಂತೆ, ಕೇಳಿದಂತೆ ತಮ್ಮ ಹಿರಿಯ ತಲೆಮಾರಿನ ನಟಿಯ ಬಗ್ಗೆ ಮಾತನಾಡಿದ್ದಾರೆ. ಲೀಲಾವತಿ ಅವರೊಟ್ಟಿಗೆ ಕೆಲಸ ಮಾಡಿದ, ಹಲವು ವರ್ಷಗಳ ಕಾಲ ಆತ್ಮೀಯ ಅನುಬಂಧ ಹೊಂದಿದ್ದ ನಿರ್ಮಾಪಕ, ನಟ ದ್ವಾರಕೀಶ್, ಲೀಲಾವತಿ ಅವರ ಬಗ್ಗೆ ಕೆಲ ಅಪರೂಪದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
‘‘ಲೀಲಾವತಿಯವರನ್ನು ಕಳೆದುಕೊಂಡ ಚಿತ್ರರಂಗ ನಷ್ಟದಲ್ಲಿದೆ, ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿಯರಲ್ಲಿ ಶ್ರೇಷ್ಠ ನಟಿ ಲೀಲಾವತಿಯವರು. ಅವರು ಇಡೀ ಚಿತ್ರರಂಗಕ್ಕೆ ತಾಯಿಯಾಗಿದ್ದರು. ನಾನು ಅವರನ್ನು ಲೀಲಮ್ಮ ಎಂದೇ ಕರೆಯುತ್ತಿದ್ದೇ. ಲೀಲಮ್ಮ ನನ್ನ ತಾಯಿ ಪಾತ್ರ ಮಾಡಬೇಕೆಂಬ ಆಸೆ ನನಗೆ ಇತ್ತು, ‘ಕಳ್ಳ-ಕುಳ್ಳ‘ ಸಿನಿಮಾದಲ್ಲಿ ನನ್ನ ತಾಯಿಯ ಪಾತ್ರವನ್ನು ಅವರಿಂದಲೇ ಮಾಡಿಸಿದೆ. ‘ಇಂದಿನ ರಾಮಾಯಣ’ ಎಂಬ ಸಿನಿಮಾ ನಿರ್ಮಾಣ ಮಾಡಿ ಲೀಲಾವತಿ ಅವರಿಗೆ ಒಳ್ಳೆಯ ಪಾತ್ರ ನೀಡಿದ್ದೆ ಅದ್ಭುತವಾಗಿ ಆ ಸಿನಿಮಾದಲ್ಲಿ ಅವರು ನಟಿಸಿದ್ದರು. ರಾಜ್ಕುಮಾರ್-ಲೀಲಾವತಿ ಜೋಡಿ ಅತ್ಯಂತ ಜನಪ್ರಿಯ ಜೋಡಿ, ಆ ರೀತಿಯ ಇನ್ನೊಂದು ಜೋಡಿ ಬರಲಿಲ್ಲ, ಲೀಲಾವತಿ ಪ್ರತಿಭೆ ನೋಡಬೇಕೆಂದರೆ ಭಕ್ತ ಕುಂಬಾರ ಸಿನಿಮಾ ನೋಡಬೇಕು’’ ಎಂದು ಅಗಲಿದ ಹಿರಿಯ ನಟಿಯನ್ನು ದ್ವಾರಕೀಶ್ ಕೊಂಡಾಡಿದರು.
ಇದನ್ನೂ ಓದಿ:Leelavathi: ನಟಿ ಲೀಲಾವತಿ ಇನ್ನಿಲ್ಲ: ಬಡ ಕಲಾವಿದರಿಗೆ ಪ್ರತಿ ತಿಂಗಳು ಹಣ ಕಳಿಸುತ್ತಿದ್ದ ಹಿರಿಯ ಕಲಾವಿದೆ
ನಮ್ಮದೂ ಹಾಗೂ ಲೀಲಾವತಿ ಅವರದ್ದು ಬರೀ ನಟ-ನಟಿಯರ ಸಂಬಂಧ ಆಗಿರಲಿಲ್ಲ. ಮದ್ರಾಸ್ನಲ್ಲಿ ಅವರ ಮನೆ ನಮ್ಮ ಮನೆ ಹತ್ತಿರವೇ ಇತ್ತು. ನಮ್ಮ ನಡುವೆ ಬಹಳ ಆತ್ಮೀಯತೆ ಇತ್ತು. ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅನ್ನು ಹಾಕಿಕೊಂಡು ಎರಡು ಸಿನಿಮಾ ಮಾಡಿದೆ. ‘ಡ್ಯಾನ್ಸ್ ರಾಜಾ, ‘ಕೃಷ್ಣ ನೀ ಕುಣಿದಾಗ’, ಆಗೆಲ್ಲ ಬಹಳ ಭೇಟಿ ಆಗುತ್ತಿದ್ದೆವು, ಮಾತನಾಡುತ್ತಿದ್ದೆವು. ನಮ್ಮದು ಕೇವಲ ಕಲಾವಿದರ ನೆಂಟಸ್ತನ ಮಾತ್ರವೇ ಆಗಿರಲಿಲ್ಲ’’ ಎಂದರು ದ್ವಾರಕೀಶ್.
ಅವರು ಸಿನಿಮಾ ಸೆಟ್ಗೆ ಬರಬೇಕೆಂದರೆ ಕೇವಲ ನಟಿಯಾಗಿ ಬರುತ್ತಿರಲಿಲ್ಲ. ಸೆಟ್ನಲ್ಲಿದ್ದವರಿಗೆಲ್ಲ ಊಟ ತಯಾರು ಮಾಡಿಕೊಂಡು, ತಿಂಡಿ ಮಾಡಿಕೊಂಡು ಡಬ್ಬಗಳಲ್ಲಿ ಹಾಕಿಕೊಂಡು ಬರುತ್ತಿದ್ದರು. ಅವರಿಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟ. ಜೊತೆಗೆ ಅವರಿಗೆ ತೋಟ ಮಾಡುವುದೆಂದರೆ ಅಚ್ಚು-ಮೆಚ್ಚು. ಮದ್ರಾಸ್ನಲ್ಲಿ ದೊಡ್ಡ ತೋಟ ಮಾಡಿದ್ದರು. ಆ ತೋಟವೆಂದರೆ ಅವರಿಗೆ ಪ್ರಾಣ. ದೊಡ್ಡದಾಗಿ ತೋಟ ಮಾಡಿದ್ದರು. ಹಲವು ಕಲಾವಿದರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತೋಟ ತೋರಿಸಿದ್ದರು. ನಾವೂ ಸಹ ಅಲ್ಲಿಗೆ ಹೋಗಿ ತೋಟ ನೋಡಿ ಬಂದಿದ್ದೆವು’’ ಎಂದು ನೆನಪು ಮಾಡಿಕೊಂಡಿದ್ದಾರೆ ದ್ವಾರಕೀಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:33 pm, Fri, 8 December 23