ರಾಷ್ಟ್ರ ಪ್ರಶಸ್ತಿ ವಿಜೇತ ಕೊರಿಯೋಗ್ರಾಫರ್ ಶೇಖ್ ಜಾನಿ ಬಾಷಾ ಅವರ ಪರಿಚಯ ಅನೇಕರಿಗೆ ಇದೆ. ಅವರು ಜಾನಿ ಮಾಸ್ಟರ್ ಎಂದೇ ಫೇಮಸ್. ಈಗ ಅವರ ವಿರುದ್ಧ ಸೈಬೆರಾಬಾದ್ ಪೊಲೀಸರು ಅತ್ಯಾಚಾರ ಆರೋಪದಡಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಜಾನಿ ಮಾಸ್ಟರ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ ಅನೇಕ ಸಿನಿಮಾಗಳಿಗೆ ಡ್ಯಾನ್ಸ್ ಕೊರಯೋಗ್ರಾಫ್ ಮಾಡಿದ್ದಾರೆ. ಅವರು ಕೊರಿಯೋಗ್ರಾಫಿ ಮಾಡಿದ ‘ವಿಕ್ರಾಂತ್ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ’, ‘ಪುಷ್ಪ’ ಚಿತ್ರದ ‘ಶ್ರೀವಲ್ಲಿ..’ ಸೇರಿ ಅನೇಕ ಹಾಡುಗಳು ಹಿಟ್ ಆಗಿವೆ. ಈಗ ಅವರು ಗಂಭೀರ ಆರೋಪ ಎದುರಿಸುವಂತೆ ಆಗಿದೆ.
ಜಾನಿ ಮಾಸ್ಟರ್ ಜೊತೆ ಕೆಲಸ ಮಾಡುತ್ತಿರುವ 21 ವರ್ಷದ ಯುವತಿ ಈ ಆರೋಪ ಮಾಡಿದ್ದಾರೆ. ಹಲವು ವರ್ಷಗಳಿಂದ ಅವರು ಜಾನಿ ಮಾಸ್ಟರ್ ಜೊತೆ ಕೆಲಸ ಮಾಡುತ್ತಿದ್ದಾರೆ. ಅವರು ದೇಶದ ನಾನಾ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಕ್ಕಾಗಿ ತೆರಳಿದಾಗ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಾರೆ. ಇದನ್ನು ಬಿಚ್ಚಿಟ್ಟರೆ ತೊಂದರೆ ಎದುರಿಸಬೇಕಾಗಿ ಬರಹುದು ಎಂದು ಅವರು ಬೆದರಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನಂತರ ಇದನ್ನು ರಂಗರೆಡ್ಡಿ ಜಿಲ್ಲೆಯ ನರ್ಸಿಂಗಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ‘ಜಾನಿ ಮಾಸ್ಟರ್ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದೇವೆ. ಭಾನುವಾರ ರಾತ್ರಿ ಈ ಕೇಸ್ ದಾಖಲು ಮಾಡಲಾಗಿದೆ’ ಎಂದು ನರ್ಸಿಂಗಿ ಪೊಲೀಸ್ ಠಾಣೆಯ ಎಸ್ಎಚ್ಒ ಹರಿ ಕೃಷ್ಣ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಯುವರತ್ನದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಕುಣಿಸಿದ ಜಾನಿ ಮಾಸ್ಟರ್ ಸಹ ಅಗಲಿದ ನಟನ ಅಂತಿಮ ದರ್ಶನ ಪಡೆದರು
ಈ ಮೊದಲು 2015ರಲ್ಲಿ ಸಹೋದ್ಯೋಗಿ ಜೊತೆ ನಡೆದ ಜಗಳದ ಪ್ರಕರಣದಲ್ಲಿ ಅವರಿಗೆ 2019ರಲ್ಲಿ ಆರು ತಿಂಗಳು ಜೈಲು ಶಿಕ್ಷೆ ಆಗಿತ್ತು. ಜಾನಿ ಮಾಸ್ಟರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೆಲೆಬ್ರಿಟಿಗಳ ಜೊತೆ ಇವರು ಫೋಟೋ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.