ರಂಗಾಯಣ ರಘು (Rangayana Raghu), ಗೋಪಾಲ ದೇಶಪಾಂಡೆ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ‘ಶಾಖಾಹಾರಿ’ ಸಿನಿಮಾ ನಾಲ್ಕು ವಾರಗಳ ಹಿಂದೆ ಬಿಡುಗಡೆ ಆಗಿ ಪ್ರೇಕ್ಷಕರಿಂದ ಧನಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಮರ್ಶಕರ ಮೆಚ್ಚುಗೆ ಪಡೆದುಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾವನ್ನು ಮಲಯಾಳಂ ಸಿನಿಮಾಕ್ಕಾಗಿ ಬಲಿ ಕೊಡಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಮಲ್ಟಿಪ್ಲೆಕ್ಸ್ ನವರು ಚಿತ್ರತಂಡಕ್ಕೆ, ಆಮೂಲಕ ಇಡೀ ಕನ್ನಡ ಚಿತ್ರರಂಗಕ್ಕೆ ಅಪಮಾನ ಮಾಡಿದ್ದಾರೆ ಎಂದು ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕ ಆರೋಪ ಮಾಡೊದ್ದಾರೆ.
‘ಶಾಖಾಹಾರಿ’ ಸಿನಿಮಾದ ನಿರ್ದೇಶಕ ಸಂದೀಪ್ ಸುಂಕದ ಜೊತೆಗೆ ಫೇಸ್ ಬುಕ್ನಲ್ಲಿ ಲೈವ್ ಬಂದಿದ್ದ ‘ಶಾಖಾಹಾರಿ’ ಸಿನಿಮಾದ ನಿರ್ಮಾಪಕ ರಾಜೇಶ್ ಕಿಳಂಬಿ, ‘ನಮ್ಮ ಸಿನಿಮಾ ಲುಲು ಮಾಲ್ನ ಸಿನೆಪೋಲೀಸ್ನಲ್ಲಿ ನಾಲ್ಕನೇ ವಾರ ಪ್ರದರ್ಶನ ಕಾಣುತ್ತಿತ್ತು. ಶುಕ್ರವಾರ 22 ಜನ ಸಿನಿಮಾ ನೋಡಿದ್ದರು, ಶನಿವಾರ 111 ಜನ ಸಿನಿಮಾ ನೋಡಿದ್ದರು, ಭಾನುವಾರ 68 ಜನ ಸಿನಿಮಾ ನೋಡಿದ್ದರು. ಮತ್ತೆ ಸೋಮವಾರ 20 ಕ್ಕೂ ಹೆಚ್ಚು ಜನ ಸಿನಿಮಾ ನೋಡಿದ್ದರು. ಆದರೆ ಮಂಗಳವಾರ ಅಚಾನಕ್ಕಾಗಿ ನಮ್ಮ ಸಿನಿಮಾದ ಶೋಗಳನ್ನು ರದ್ದು ಮಾಡಲಾಯ್ತು. ನಮ್ಮ ಸಿನಿಮಾದ ಬದಲಿಗೆ, ಅದಾಗಲೇ ನಾಲ್ಕು ಶೋ ನೀಡಲಾಗಿದ್ದ ಮಲಯಾಳಂ ಸಿನಿಮಾ ಒಂದನ್ನು ಪ್ರದರ್ಶಿಸಲಾಯ್ತು’ ಎಂದಿದ್ದಾರೆ.
ಇದನ್ನೂ ಓದಿ:Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್; ರಂಗಾಯಣ ರಘು ಬೆಸ್ಟ್
‘ಬೇರೆ ಕೆಲವು ಸಿನಿಮಾಗಳಿಗೆ ಹೋಲಿಸಿದರೆ ನಮ್ಮ ಸಿನಿಮಾದ ಪ್ರದರ್ಶನ ಚೆನ್ನಾಗಿಯೇ ಇತ್ತು. ಪ್ರೇಕ್ಷಕರು ಸಹ ಬರುತ್ತಿದ್ದರು, ಹಾಗಿದ್ದರೂ ನಮ್ಮ ಸಿನಿಮಾವನ್ನು ಕೊಂದು, ಮಲಯಾಳಂ ಸಿನಿಮಾಕ್ಕೆ ಅವಕಾಶ ಕೊಡಲಾಯ್ತು. ನಾವು ಲುಲು ಮಾಲ್ ನ ಸಿನೆಪೊಲೀಸ್ ಮುಖ್ಯಸ್ಥ ಕಾರ್ತಿಕ್ ಅನ್ನು ಈ ಬಗ್ಗೆ ಪ್ರಶ್ನೆ ಮಾಡಿದೆವು. ಅದಕ್ಕೆ ಆತ ಇಲ್ಲ ತಾಂತ್ರಿಕ ಸಮಸ್ಯೆ ಆಗಿರಬಹುದು ಎಂಬ ಉತ್ತರ ಕೊಟ್ಟ. ಮತ್ತೆ ಶೋ ಕೊಡಬಹುದು ಎಂದು ಕಾದೆವು, ಆದರೆ ಶೋ ಕೊಡಲಿಲ್ಲ’ ಎಂದಿದ್ದಾರೆ ನಿರ್ಮಾಪಕ.
‘ಬಳಿಕ ಈ ವಿಷಯವನ್ನು ನಾವು ನಿರ್ಮಾಪಕ, ಹಿರಿಯ ವಿತರಕ ಜಯಣ್ಣ ಅವರ ಗಮನಕ್ಕೆ ತಂದೆವು, ಜಯಣ್ಣ., ಕಾರ್ತಿಕ್ ಗೆ ಕರೆ ಮಾಡಿದಾಗಲೂ ಅದೇ ಸುಳ್ಳು ಉತ್ತರವನ್ನು ಕಾರ್ತಿಕ್ ನೀಡಿದರು. ಆಗ ನಾನು ಇದು ಸುಳ್ಳು, ನಮ್ಮ ಶೋ ಅನ್ನು ಮಲಯಾಳಂ ಸಿನಿಮಾಕ್ಕೆ ಕೊಟ್ಟಿದ್ದೀರಿ ಎಂದೆ. ಆಗ ಕಾರ್ತಿಕ್, ನೀವು ಶೋ ಉಳಿಸಿಕೊಳ್ಳಲು ಅಡ್ಡದಾರಿಯಲ್ಲಿ ಟಿಕೆಟ್ ಖರೀದಿ ಮಾಡಿದ್ದೀರಿ. ಅಸಲಿಗೆ ನಿಮ್ಮ ಶೋಗೆ ಜನವೇ ಇರಲಿಲ್ಲ ಎಂದಿದ್ದಾನೆ. ನಮ್ಮ ಮೇಲೆ ಮೋಸದ ಆರೋಪ ಮಾಡಿದ್ದಾನೆ. ನಾವು ಮಾಸ್ ಟಿಕೆಟ್ ಖರೀದಿ ಮಾಡಿಲ್ಲ, ಈ ವರೆಗೆ ಸಿನಿಮಾ ನೋಡಿದವರು ನಿಜವಾದ ಪ್ರೇಕ್ಷಕರು. ನಮ್ಮ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ಮಲ್ಟಿಪ್ಲೆಕ್ಸ್ ನವರು ಅವಮಾನ ಮಾಡಿದ್ದಾರೆ. ಕನ್ನಡ ಸಿನಿಮಾವನ್ನು ಕೊಲ್ಲುವ ಉದ್ದೇಶದಿಂದಲೇ ಈ ಸುಳ್ಳು ಆರೋಪವನ್ನು ಅವರು ಮಾಡಿದ್ದಾರೆ’ ಎಂದಿದ್ದಾರೆ ನಿರ್ಮಾಪಕ ರಾಜೇಶ್.
ನಿರ್ದೇಶಕ ಸಂಕೇತ್ ಮಾತನಾಡಿ, ನಾವು ಇಷ್ಟೆಲ್ಲ ಪ್ರಶ್ನೆ ಮಾಡಿದ ಬಳಿಕ ಬುಧವಾರ ಸಂಜೆ 6 ಗಂಟೆಗೆ ಒಂದು ಶೋ ಬುಕಿಂಗ್ ಓಪನ್ ಮಾಡಿದರು. ಅದರ ಶೋ ಟೈಮ್ 7:15 ಕ್ಕೆ ನಿಗದಿ ಪಡಿಸಲಾಗಿತ್ತು. ಕೇವಲ 1:15 ಗಂಟೆಯ ಕಾಲಾವಧಿಯಲ್ಲಿ ಜನ ಟಿಕೆಟ್ ಖರೀದಿಸಿ ಚಿತ್ರಮಂದಿರಕ್ಕೆ ಬರಲಾಗುತ್ತದೆಯೇ? ಬುಧವಾರ ಬೆಳಿಗಿನಿಂದ ಸಿನಿಮಾಕ್ಕಾಗಿ ಬುಕ್ಮೈಶೋನಲ್ಲಿ ಸರ್ಚ್ ಮಾಡಿದವರಿಗೆ ಸಿನಿಮಾ ಕಾಣಿಸಿಲ್ಲ, ಬಳಿಕ ಕೇವಲ ಒಂದು ಗಂಟೆ ಅವಧಿಗೆ ಶೋ ನಿಗದಿ ಮಾಡಿದರೆ ಯಾರು ಬರುತ್ತಾರೆ? ನಮ್ಮ ಸಿನಿಮಾಕ್ಕೆ ಪೆಟ್ಟು ಕೊಡಲೆಂದೇ ಹೀಗೆ ಮಾಡಲಾಗಿದೆ. ದಯವಿಟ್ಟು ಪ್ರೇಕ್ಷಕರು ನಮ್ಮ ಜೊತೆಗೆ ನಿಲ್ಲಿ’ ಎಂದು ಮನವಿ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ