ಸೋಶಿಯಲ್ ಮೀಡಿಯಾದಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಅದರಲ್ಲೂ ಹೆಣ್ಣುಮಕ್ಕಳ ಬಗ್ಗೆ ಅಸಹ್ಯವಾಗಿ ಪೋಸ್ಟ್ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಟ್ರೋಲ್, ಮೀಮ್ ಎಂಬ ಹೆಸರಿನಲ್ಲಿ ಅನೇಕರು ಇದನ್ನು ಎಂಜಾಯ್ ಮಾಡುತ್ತಿದ್ದಾರೆ ಎಂಬುದು ವಿಪರ್ಯಾಸ. ಆದರೆ ಅಂಥ ಕೆಟ್ಟ ಮನಸ್ಥಿತಿಯನ್ನು ನಟಿ ಶೀತಲ್ ಶೆಟ್ಟಿ ಖಂಡಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಕೆಲವು ಟ್ರೋಲ್ ಪೇಜ್ಗಳ ಬಣ್ಣ ಬಯಲು ಮಾಡಿದ್ದಾರೆ.
ಕನ್ನಡದಲ್ಲಿ ಅನೇಕ ಟ್ರೋಲ್ ಪೇಜ್ಗಳು ಸಕ್ರಿಯವಾಗಿವೆ. ಅವುಗಳಲ್ಲಿ ಕೆಲವು ಪೇಜ್ಗಳು ನಟಿಯರ ಬಗ್ಗೆ ಕೆಟ್ಟದಾಗಿರುವ ಮೀಮ್ಗಳನ್ನು ಪೋಸ್ಟ್ ಮಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳ ಅಂಗಾಂಗಗಳ ಬಗ್ಗೆ ಅಕ್ಷೇಪಾರ್ಹ ರೀತಿಯಲ್ಲಿ ಮೀಮ್ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಪ್ರಸ್ತುತ ಬಿಗ್ ಬಾಸ್ನಲ್ಲಿ ಸ್ಪರ್ಧಿಸುತ್ತಿರುವ ನಟಿಯರ ಬಗ್ಗೆಯೂ ಕೀಳುಮಟ್ಟದ ಪೋಸ್ಟ್ಗಳನ್ನು ಹಾಕಲಾಗಿದೆ. ಇವುಗಳ ಸ್ಕ್ರೀನ್ ಶಾಟ್ ತೆಗೆದು ಶೀತಲ್ ಸಮರ ಸಾರಿದ್ದಾರೆ.
‘ನನ್ನ ಕನ್ನಡತಾಯಿ ನನಗೆ ಬೇರೆಯವರನ್ನು ದ್ವೇಷಿಸಲು ಕಲಿಸಿಲ್ಲ. ನನ್ನ ಕನ್ನಡನಾಡಲ್ಲಿ ಹೆಣ್ಣನ್ನು ಅಸಹ್ಯವಾಗಿ ಬಿಂಬಿಸುವ ಪರಿಪಾಠ ಇಲ್ಲ. ದಯವಿಟ್ಟು ಇವುಗಳಿಗೆ ಕನ್ನಡಮ್ಮನ ಅಭಿಮಾನದ ಹೆಸರು ತರಬೇಡಿ. ಇದು ಒಬ್ಬರ ಬಗ್ಗೆ ನಾನು ಮಾತಾಡ್ತಿರೋದಲ್ಲ. ನಮ್ಮೆಲ್ಲರ ಪರವಾಗಿ ಮಾತಾಡ್ತಿರೋದು. ಟ್ರೋಲ್ ಪೇಜ್ಗಳನ್ನು ನಾನು ಫಾಲೋ ಮಾಡ್ತೀನಿ. ಕ್ರಿಯೇಟಿವ್ ಆಗಿರೋ, ಮಜವಾಗಿರೋ ಮೀಮ್ಗಳನ್ನು ಎಂಜಾಯ್ ಮಾಡ್ತೀನಿ. ಆದರೆ ಇದು ಕ್ರಿಯೇಟಿವಿಟಿ ಅಲ್ಲ. ಇದನ್ನು ನೋಡಿ ಸುಮ್ಮನಿರೋಕೆ ಸಾಧ್ಯವೇ ಇಲ್ಲ. ದಯವಿಟ್ಟು ಇವುಗಳನ್ನು ನೋಡಿ ಎಂಜಾಯ್ ಮಾಡ್ಬೇಡಿ. ಇದು ಸಮಾಜಕ್ಕೆ ಮಾರಕ. ಇಂಥವುಗಳನ್ನು ಕಂಡಾಗ ಖಂಡಿಸಿ. ನಮ್ಮ ನಾಡಿನ ಸ್ವಾಸ್ಥ್ಯ ಕಾಪಾಡಿ. ನನ್ನ ಬೇಸರ ಟ್ರೋಲ್ ಪೇಜ್ಗಳ ವಿರುದ್ಧ ಅಲ್ಲ’ ಎಂದು ಶೀತಲ್ ಪೋಸ್ಟ್ ಮಾಡಿದ್ದಾರೆ.
‘ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ. ಇದರಿಂದ ನನಗೆ ವೈಯಕ್ತಿಕವಾಗಿ ಏನೂ ಆಗಬೇಕಾಗಿದ್ದಿಲ್ಲ. ಆದ್ರೆ ಇದು ನನ್ನ ಜಾತಿಗೆ ಸಂಬಂಧಿಸಿದ್ದು. ಹೆಣ್ಣಾಗಿ ನನಗೆ ಸಹಿಸಲು ಆಗದೇ ಇರುವಂಥದ್ದು. ನನ್ನಂತೆ ಇದನ್ನು ಓದಿದ, ಇಲ್ಲಿಯವರೆಗೆ ನೋಡಿಕೊಂಡು ಬಂದಿರೋ ಎಲ್ಲ ಹೆಣ್ಣುಮಕ್ಕಳಿಗೂ ಸಹಿಸೋಕೆ ಸಾಧ್ಯವಾಗಿರೋದಿಲ್ಲ. ಅದಕ್ಕೇ ಮಾತಾಡೋ ಧೈರ್ಯ ಮಾಡಿದೀನಿ’ ಎಂದು ಶೀತಲ್ ಬರೆದುಕೊಂಡಿದ್ದಾರೆ.
‘ನನ್ನ ಆಯ್ಕೆಗಳನ್ನು ದಿಟ್ಟವಾಗಿ ಮಾಡಿಕೊಂಡು ಮುಂದೆ ಹೋಗುತ್ತಿರುವ ಯಾರೋ ಹೆತ್ತ ಹೆಣ್ಣು ಮಕ್ಕಳಿಗೆ, ಬಟಾ ಬಹಿರಂಗವಾಗಿ ಡಗಾರ್, ಸೂ** ಎನ್ನುತ್ತ, ದೈಹಿಕವಾಗಿ ಅವರನ್ನು ಅವಮಾನ ಮಾಡುತ್ತಿರುವ ಕೆಟ್ಟ ಹುಂಬ ಮನಸ್ಥಿತಿಗಳಿಗೆ, ಹಾಗೇ ಅದನ್ನು ಎಂಜಾಯ್ ಮಾಡುತ್ತಿರುವ ಮನಸ್ಥಿತಿಗಳಿಗೂ ನನ್ನದೊಂದು ಧಿಕ್ಕಾರ. ನಾಳೆಯಿಂದ ಈ ಮನಸ್ಥಿತಿಗಳು ನನ್ನನ್ನು ಹೇಗೆ ಕಾಡಬಹುದು ಅನ್ನೋ ಅರಿವಿದ್ದರೂ ನಂಗ್ಯಾಕೋ ಸುಮ್ಮನಿರೋ ಮನಸ್ತಾಗ್ತಿಲ್ಲ. ಬನ್ನಿ ನೋಡ್ಕೊಳ್ಳೋಣ. ಇಂಥ ಮನಸ್ಥಿತಿಗಳ ಮನೆಯಲ್ಲಿರುವ ಹೆಣ್ಣುಮಕ್ಕಳ ಮೇಲೆ ನನಗೆ ಅನುಕಂಪವಿದೆ’ ಎಂದು ಶೀತಲ್ ಮಾಡಿರುವ ಫೇಸ್ಬುಕ್ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಅನೇಕರು ಶೀತಲ್ಗೆ ಬೆಂಬಲ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: ಮಹಿಳೆಯರಿಗೆ ಅಶ್ಲೀಲ ಮೆಸೇಜು ಕಳಿಸುತ್ತಿದ್ದವನಿಗೆ ಧರ್ಮದೇಟು
(Kannada Actress Sheetal Shetty raises voice against vulgar post of Kannada troll pages)