ಜನ ನಾಯಕ ಗುಮ್ಮಡಿ ನರಸಯ್ಯನಾಗಿ ಶಿವಣ್ಣ: ಯಾರು ಈ ಕ್ರಾಂತಿಕಾರಿ?
Gummadi Narsaiah-Shiva Rajkumar: ಎಲ್ಲ ಸ್ಟಾರ್ ಹೀರೋಗಳು ಮಾಸ್ ಕತೆಗಳುಳ್ಳ ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆಗೆ ಹೋಗುತ್ತಿದ್ದರೆ ಶಿವರಾಜ್ ಕುಮಾರ್ ಮಾತ್ರ ಬಡಜನರ ನಾಯಕ ಎಂದೇ ಕರೆಸಿಕೊಂಡಿದ್ದ ಈಗಲೂ ಹಾಗೆಯೇ ಕನಿಷ್ಟ ಸೌಲಭ್ಯಗಳಲ್ಲೇ ಬದುಕುತ್ತಿರುವ ರಾಜಕೀಯ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ‘ಗುಮ್ಮಡಿ ನರಸಯ್ಯ’.

ಸಣ್ಣ ಪುಟ್ಟ ನಟರೂ ಸಹ ಮಾಸ್ ಸಿನಿಮಾಗಳು, ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿರುವ ಸಮಯದಲ್ಲಿ ಶಿವಣ್ಣ ಮಾತ್ರ ಈ ವಯಸ್ಸಿನಲ್ಲೂ ಭಿನ್ನ-ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ತಾವೊಬ್ಬ ನಿಜವಾದ ‘ನಟ’ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಾರೆ. ಇದೀಗ ಶಿವರಾಜ್ ಕುಮಾರ್ ಅವರು ಭಿನ್ನ ಕತೆಯುಳ್ಳ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ. ಜನಗಳ ನಾಯಕ ಎಂದೇ ಹೆಸರಾಗಿರುವ ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಶಿವಣ್ಣ ನಟಿಸಲಿದ್ದು, ಇಂದು ಪೋಸ್ಟರ್ ಬಿಡುಗಡೆ ಆಗಿದೆ.
ಗುಮ್ಮಡಿ ನರಸಯ್ಯ, ತೆಲುಗು ರಾಜ್ಯಗಳಲ್ಲಿ ಜನಪ್ರಿಯವಾಗಿರುವ ಶಾಸಕ (ಈಗ ಮಾಜಿ), ಹೋರಾಟಗಾರ. ಜನ ಸೇವೆಯಲ್ಲೇ ಜೀವನ ಸವೆಸಿರುವ ವ್ಯಕ್ತಿ. ಈಗಿನ ತೆಲಂಗಾಣ ರಾಜ್ಯಕ್ಕೆ ಸೇರಿರುವ ಖಮ್ಮಂ ಜಿಲ್ಲೆಯ ಇಲ್ಲಂದು ಕ್ಷೇತ್ರದಿಂದ ಬರೋಬ್ಬರು ಐದು ಬಾರಿ ಶಾಸಕರಾಗಿರುವ ವ್ಯಕ್ತಿ. ಸಿಪಿಐ (ಎಂಎಲ್-ನ್ಯೂ ಡೆಮಾಕ್ರಸಿ) ಪಕ್ಷಕ್ಕೆ ಸೇರಿದ ಗುಮ್ಮಡಿ ನರಸಯ್ಯ, ತಮ್ಮ ಸೇವೆಯ ಜೊತೆಗೆ ತಮ್ಮ ಸರಳತೆಯಿಂದಲೂ ಮನೆ ಮಾತಾಗಿರುವವರು.
ಗುಮ್ಮಡಿ ನರಸಯ್ಯ, ಕಾಲ್ನಡಿಗೆಯಲ್ಲಿ ಹೈದರಾಬಾದ್ಗೆ ವಿಧಾನಸಭೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದರು. ಅದರ ಬಳಿಕ ಒಂದು ಸೈಕಲ್ ಖರೀದಿ ಮಾಡಿ ಸೈಕಲ್ನಲ್ಲಿ ಅಸೆಂಬ್ಲಿಗೆ ಬರುತ್ತಿದ್ದರು. ಶಾಸಕನಾಗಿ ಬರುವ ಸಂಬಳವನ್ನೆಲ್ಲ ತಮ್ಮ ಪಕ್ಷಕ್ಕೆ ನೀಡಿ ಬಿಡುತ್ತಿದ್ದ ಗುಮ್ಮಡಿ ನರಸಯ್ಯ ತಮ್ಮ ಜೀವಿತ ಕಾಲದಲ್ಲಿ ಒಂದೇ ಒಂದು ಆಸ್ತಿಯನ್ನು ಸಹ ಖರೀದಿಸಿಲ್ಲ. ಈಗಲೂ ಬ್ಯಾಂಕ್ ಖಾತೆಯಲ್ಲಿ ಏನೆಂದರೆ ಏನೂ ಹಣವಿಲ್ಲ. ಆದರೆ ಕೋಟ್ಯಂತರ ಜನರ ಪ್ರೀತಿ, ಅಭಿಮಾನವನ್ನು ಗುಮ್ಮಡಿ ನರಸಯ್ಯ ಗಳಿಸಿದ್ದಾರೆ. ಅವರ ಜೀವನ ಕತೆಯನ್ನು ಸಿನಿಮಾ ಮಾಡಲಾಗುತ್ತಿದ್ದು ಶಿವರಾಜ್ ಕುಮಾರ್ ಅವರು ಗುಮ್ಮಡಿ ನರಸಯ್ಯನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:ದಸರಾನಲ್ಲಿ ಡ್ಯಾನ್ಸ್ ಮಾಡಿ ಜನರ ರಂಜಿಸಿದ ಶಿವರಾಜ್ ಕುಮಾರ್: ವಿಡಿಯೋ
ಈ ತೆಲುಗು ರಾಜಕೀಯ ನಾಯಕನ ಸಿನಿಮಾ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣ ಆಗಲಿದೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ಶಿವರಾಜ್ ಕುಮಾರ್ ಅವರು ಸಿಪಿಐ ಬಾವುಟ ಕಟ್ಟಿದ ಸೈಕಲ್ ತಳ್ಳಿಕೊಂಡು ಅಸೆಂಬ್ಲಿಗೆ ಹೋಗುತ್ತಿರುವ ಚಿತ್ರ ಅದಾಗಿದೆ.
View this post on Instagram
1983 ರಲ್ಲಿ ಎನ್ಟಿಆರ್ ಅವರು ರಾಜಕೀಯಕ್ಕೆ ಧುಮುಕಿದಾಗ ಇಡೀ ರಾಜ್ಯದಲ್ಲಿ ಅವರ ಅಲೆ ಎದ್ದಿತ್ತು ಅವರ ಪಕ್ಷದ 202 ಅಭ್ಯರ್ಥಿಗಳು ಗೆದ್ದಿದ್ದರು. ಇಡೀ ರಾಜ್ಯದಲ್ಲಿ ಎನ್ಟಿಆರ್ ಅಲೆ ಇದ್ದಾಗಲೂ ಸಹ ಬರಿಗೈ ಮಾಲೀಕ ಗುಮ್ಮಡಿ ನರಸಯ್ಯ ಗೆದ್ದು ಬಂದಿದ್ದರು. ಜನರೇ ಹಣ ಹಾಕಿ ಅವರನ್ನು ಗೆಲ್ಲಿಸಿ ಕಳಿಸುತ್ತಿದ್ದರು. ಗುಮ್ಮಡಿ ನರಸಯ್ಯ ಗೆದ್ದು ಶಾಸಕ ಆದರೂ ಸಹ ಅವರ ಪತ್ನಿ ಸೌದೆ ಮಾರುವ, ಸಗಣಿ ಭೆರಣಿಗಳನ್ನು ತಲೆ ಮೇಲೆ ಹೊತ್ತು ಊರುಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದರಂತೆ. ಆದರೆ 2009 ರಲ್ಲಿ ಅವಿಭಜಿತ ಆಂಧ್ರ ಒಡೆದು ಎರಡು ಹೋಳಾಗಿ ಗುಮ್ಮಡಿ ನರಸಯ್ಯ ಸ್ಪರ್ಧಿಸುತ್ತಿದ್ದ ಇಲ್ಲಂದು ಕ್ಷೇತ್ರದ ವಿಭಜನೆಯೂ ಆದ ಬಳಿಕ ಗುಮ್ಮಡಿ ಅವರು ಗೆಲ್ಲಲಿಲ್ಲ. ಆದರೆ ಈಗಲೂ ಸಹ ತಮ್ಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಈಗಲೂ ಸಹ ಜನ ಅವರನ್ನು ‘ಶಾಸಕ’ ಎಂದೇ ಕರೆಯುತ್ತಾರೆ. ಇಂಥಹಾ ಮಹನೀಯ ರಾಜಕಾರಣಿಯ ಪಾತ್ರದಲ್ಲಿ ಶಿವಣ್ಣ ಇದೀಗ ನಟಿಸುತ್ತಿದ್ದಾರೆ.
ಸಿನಿಮಾ ಅನ್ನು ಎನ್ ಸುರೇಶ್ ರೆಡ್ಡಿ ಎಂಬುವರು ನಿರ್ಮಾಣ ಮಾಡುತ್ತಿದ್ದು, ಪರಮೇಶ್ವರ್ ಹಿವರಾಲೆ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




