ಶಿವರಾಜ್ ಕುಮಾರ್ ನೂತನ ಫಾರ್ಮ್ ಹೌಸ್ ಅದ್ಧೂರಿ ಗೃಹ ಪ್ರವೇಶ

Shiva Rajkumar farm house: ಸ್ಯಾಂಡಲ್​ವುಡ್​ನ ಬ್ಯುಸಿ ಸ್ಟಾರ್ ನಟ ಶಿವರಾಜ್ ಕುಮಾರ್ ಕೆಲ ವರ್ಷಗಳ ಹಿಂದೆ ಖರೀದಿ ಮಾಡಿದ್ದ ಕನಕಪುರದ ಬಳಿಯ ಜಮೀನಿನಲ್ಲಿ ವಿಶಾಲವಾದ ಫಾರ್ಮ್ ಹೌಸ್ ನಿರ್ಮಾಣ ಮಾಡಿದ್ದಾರೆ.

ಶಿವರಾಜ್ ಕುಮಾರ್ ನೂತನ ಫಾರ್ಮ್ ಹೌಸ್ ಅದ್ಧೂರಿ ಗೃಹ ಪ್ರವೇಶ

Updated on: Nov 06, 2024 | 12:36 PM

ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ಸ್ಟಾರ್ ನಟ ಶಿವರಾಜ್ ಕುಮಾರ್. ಇದೀಗ ‘ಭೈರತಿ ರಣಗಲ್’ ಸಿನಿಮಾದ ಬಿಡುಗಡೆ ಹೊಸ್ತಿಲಲ್ಲಿದ್ದಾರೆ. ಇದರ ನಡುವೆಯೇ ಶಿವರಾಜ್ ಕುಮಾರ್ ಮನೆಯಲ್ಲಿ ಶುಭಕಾರ್ಯವೊಂದು ನಡೆದಿದೆ. ಶಿವರಾಜ್ ಕುಮಾರ್ ಅವರು ನೂತನ ಫಾರ್ಮ್ ಹೌಸ್ ನಿರ್ಮಿಸಿದ್ದು ಅದರ ಗೃಹ ಪ್ರವೇಶ ಇತ್ತೀಚೆಗಷ್ಟೆ ನಡೆದಿದೆ. ಕುಟುಂಬಸ್ಥರು ಕೆಲವೇ ಆತ್ಮೀಯರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ಗೃಹ ಪ್ರವೇಶ ನಡೆದಿದೆ.

ಕೆಲ ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರುಗಳು ಕನಕಪುರದ ಬಳಿ ಜಮೀನು ಖರೀದಿ ಮಾಡಿದ್ದರು. ಅಲ್ಲಿ ಈಗ ಬೃಹತ್ ಫಾರ್ಮ್ ಹೌಸ್ ನಿರ್ಮಾಣ ಮಾಡಿದ್ದಾರೆ. ಈ ಫಾರ್ಮ್ ಹೌಸ್​ ಗೃಹಪ್ರವೇಶವನ್ನು ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಮಾಡಿದ್ದಾರೆ. ಪೂಜೆ ಮಾಡಿ, ತಮ್ಮ ಮನೆ ದೇವರ ಫೋಟೊ ಹಿಡಿದುಕೊಂಡು ಶಿವರಾಜ್ ಕುಮಾರ್ ಫಾರ್ಮ್ ಹೌಸ್ ಪ್ರವೇಶ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗೋ ಪೂಜೆಯನ್ನು ಸಹ ಶಿವರಾಜ್ ಕುಮಾರ್ ದಂಪತಿ ಮಾಡಿದ್ದಾರೆ. ಆತ್ಮೀಯರು ಮತ್ತು ಕುಟುಂಬದ ಸದಸ್ಯರುಗಳು ಈ ಪೂಜೆಯಲ್ಲಿ ಭಾಗಿಯಾಗಿದ್ದರು.

ಶಿವರಾಜ್ ಕುಮಾರ್ ಫಾರ್ಮ್ ಹೌಸ್ ವಿಶಾಲವಾಗಿದ್ದು, ಭಿನ್ನವಾದ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಮನೆಯ ಮುಂದೆ ವಿಶಾಲ ಜಾಗವಿದ್ದು, ಅಲ್ಲಿ ಉದ್ಯಾನ, ತೋಟಗಳನ್ನು ಬೆಳೆಸುವ ಯೋಜನೆ ಶಿವಣ್ಣ ದಂಪತಿಗೆ ಇದ್ದಂತಿದೆ. ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಗಾಜನೂರಿಗೆ ಭೇಟಿ ನೀಡಿದ್ದರು. ತಮ್ಮ ನೂತನ ಫಾರ್ಮ್​ ಹೌಸ್ ಗೃಹ ಪ್ರವೇಶಕ್ಕೆ ಮುಂಚೆ ತಮ್ಮ ಗ್ರಾಮ ದೇವರಿಗೆ ನಮಿಸಿ ಬಂದಿದ್ದರು. ಅಲ್ಲಿನ ಕುಟುಂಬ ಸದಸ್ಯರಿಗೆ ಆಹ್ವಾನವನ್ನೂ ಸಹ ನೀಡಿದ್ದರು.

ಇದನ್ನೂ ಓದಿ:ಗಾಜನೂರಿನಲ್ಲಿ ದೀಪಾವಳಿ ಆಚರಿಸಿದ ಶಿವರಾಜ್ ಕುಮಾರ್, ಇಲ್ಲಿವೆ ಚಿತ್ರಗಳು

ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರಿಗೆ ಸಾಕಷ್ಟು ಕಡೆ ಜಮೀನು ಇದೆ. ಈ ಹಿಂದೆ ಗೀತಾ ಶಿವರಾಜ್ ಕುಮಾರ್ ಚುನಾವಣೆಗೆ ಸ್ಪರ್ಧಿಸಿದ್ದಾಗ ಸಲ್ಲಿಸಿದ್ದ ನಾಮಪತ್ರದಲ್ಲಿ ಈ ವಿಷಯಗಳು ಬಹಿರಂಗಗೊಂಡಿದ್ದವು. ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಶಿವರಾಜ್ ಕುಮಾರ್ ಅದನ್ನು ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ, ಆಭರಣ ಇನ್ನಿತರೆಗಳಲ್ಲಿ ಹೂಡಿಕೆ ಮಾಡುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:51 am, Tue, 5 November 24