Shiva Rajkumar: ಮತದಾನ ಮಾಡಲು ಮರೆಯಬೇಡಿ: ಶಿವರಾಜ್ ಕುಮಾರ್
ಹಾಸನಕ್ಕೆ ಭೇಟಿ ನೀಡಿದ್ದ ನಟ ಶಿವರಾಜ್ ಕುಮಾರ್ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ, ಮತ ಚಲಾವಣೆ ನಿಮ್ಮ ಹಕ್ಕು ಎಂದು ನೆನಪಿಸಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ (ಮಾರ್ಚ್ 31) ಹಾಸನಕ್ಕೆ ಭೇಟಿ ನೀಡಿದ್ದ ನಟ ಶಿವರಾಜ್ ಕುಮಾರ್ (Shiva Rajkumar), ಮಾಧ್ಯಮಗಳೊಟ್ಟಿಗೆ ಮಾತನಾಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮಾತುಗಳನ್ನಾಡಿದರು. ಜೆಡಿಎಸ್ ಮುಖಂಡರಾದ ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜೊತೆಗೂಡಿ ಹೋಟೆಲ್ ಒಂದನ್ನು ಉದ್ಘಾಟಿಸಿದ ಶಿವಣ್ಣ, ಹಾಸನದ ಮೇಲೆ ತಮಗಿರುವ ಪ್ರೀತಿಯನ್ನು ಇದೇ ಸಮಯದಲ್ಲಿ ವ್ಯಕ್ತಪಡಿಸಿದರು.
”ಚುನಾವಣೆ ಬಗ್ಗೆ ಜನಗಳಿಗೆ ಹೇಳಿಕೊಡಬೇಕಾದ ಅಗತ್ಯವಿಲ್ಲ. ಎಲ್ಲರಿಗೂ ಆ ಜವಾಭ್ದಾರಿಯ ಅರಿವಿದೆ. ಜನಗಳಿಗೆ ಗೊತ್ತಿರುತ್ತದೆ ಏನು ಮಾಡಬೇಕು ಅಂತ, ಯಾವ-ಯಾವ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೊ ಅವರಿಗೆಲ್ಲ ಒಳ್ಳೆಯದಾಗಲಿ, ಜನಗಳು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದೇ ನಮ್ಮ ನಿರ್ಧಾರ ಸಹ. ಖಂಡಿತವಾಗಿಯೂ ಎಲ್ಲರೂ ಮತ ಚಲಾವಣೆ ಮಾಡುತ್ತಾರೆ, ಯಾರೋ ಹೇಳಿಕೊಡಬೇಕಾದ ಅಗತ್ಯವಿಲ್ಲ. ಮತಚಲಾಯಿಸುವುದು ಪ್ರತಿಯೊಬ್ಬರ ಹಕ್ಕು, ಅದನ್ನು ಮರಿಬೇಡಿ, ಯಾವುದಾದರೂ ಒಂದು ಪಕ್ಷ ಗೆಲ್ಲಲೇ ಬೇಕು ಸರ್ಕಾರ ನಡೆಸಲೇ ಬೇಕು ದಯವಿಟ್ಟು ನಿಮ್ಮ ಹಕ್ಕನ್ನು ಮರೆಯಬೇಡಿ, ಓಟನ್ನು ಚಲಾಯಿಸಿ, ಮತವನ್ನು ಪೋಲಾಗಲು ಬಿಡಬೇಡಿ, ಮರೆಯದೇ ಮತ ಚಲಾಯಿಸಿ” ಎಂದಿದ್ದಾರೆ ಶಿವರಾಜ್ ಕುಮಾರ್.
ಇದೇ ಸಮಯದಲ್ಲಿ ಹಾಸನದ ಬಗ್ಗೆ ಮಾತನಾಡಿದ ಶಿವಣ್ಣ, ”ಹಾಸನದ ಬಗ್ಗೆ ಯಾವಾಗಲೂ ಹೇಳುತ್ತಲೇ ಇರುತ್ತೀನಿ, ಮಂಗಳೂರು, ಸಕಲೇಶಪುರ, ಚಿಕ್ಕಮಗಳೂರಿಗೆ ಹೋಗಬೇಕಾದರೆ ಹಾಸನ ಮೂಲಕವೇ ಹೋಗಬೇಕು, ಹಾಸನದ ಜೊತೆ ಬೇರೆ ತರಹದ ಸಂಬಂಧ ನನಗೆ ಇದೆ. ಹಾಸನದಲ್ಲಿ ನಮಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ಜನಮದ ಜೋಡಿ, ಮ್ಯೂಸಿಕಲ್ ನೈಟ್ ಪಂಕ್ಷನ್‌ಗೂ ಅಪ್ಪಾಜಿ ಅವರ ಜೊತೆಯಲ್ಲಿ ಬಂದಿದ್ದೀನಿ, ಸಾಕಷ್ಟು ವಿಶೇಷತೆ ಹೊಂದಿರುವ ಊರು ಇದು” ಎಂದರು.
ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ 2014 ರಲ್ಲಿ ಜೆಡಿಎಸ್ ಟಿಕೆಟ್ ಮೂಲಕ ಲೋಕಸಭೆ ಚುನಾವಣೆ ಸ್ಪರ್ಧಿಸಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಗೀತಾ ಶಿವರಾಜ್ ಕುಮಾರ್. ಆ ಸಮಯದಲ್ಲಿ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಹಲವರು ಗೀತಾ ಶಿವರಾಜ್ಕುಮಾರ್ ಪರವಾಗಿ ಪ್ರಚಾರ ಮಾಡಿದ್ದರು. ಆದರೆ ಗೀತಾ ಶಿವರಾಜ್ಕುಮಾರ್ ಸೋಲು ಅನುಭವಿಸಿದರು. ಅದಾದ ಬಳಿಕ ಶಿವಣ್ಣ ರಾಜಕೀಯದಿಂದ ಅಂತರ ಕಾಯ್ದುಕೊಂಡರು. ಗೀತಾ ಶಿವರಾಜ್ ಕುಮಾರ್ ಸಹ ರಾಜಕೀಯದಿಂದ ದೂರವೇ ಉಳಿದರು.
ಪೂರ್ಣ ಪ್ರಮಾಣದಲ್ಲಿ ಸಿನಿಮಾದಲ್ಲಿ ತೊಡಗಿಕೊಂಡಿರುವ ಶಿವರಾಜ್ ಕುಮಾರ್ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಾ ಸಾಗಿದ್ದಾರೆ. ಪ್ರಸ್ತುತ ಘೋಸ್ಟ್ ಹೆಸರಿನ ಕನ್ನಡ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದು, ತಮಿಳಿನ ಎರಡು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡದ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ