ರಜನೀಕಾಂತ್, (Rajinikanth) ಶಿವರಾಜ್ ಕುಮಾರ್ (Shiva Rajkumar) ಒಟ್ಟಿಗೆ ನಟಿಸಿರುವ ‘ಜೈಲರ್’ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆ ಆಗಿದ್ದು ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ. ಕೇವಲ ಎರಡು ದಿನಕ್ಕೆ ನೂರು ಕೋಟಿ ಕಲೆಕ್ಷನ್ ಗಡಿಯನ್ನು ದಾಟಿದ್ದು 200 ಕೋಟಿ ಗಳಿಕೆಯತ್ತ ದಾಪುಗಾಲು ಹಾಕಿದೆ. ಸಿನಿಮಾದಲ್ಲಿ ರಜನೀಕಾಂತ್ರಷ್ಟೆ ಶಿವರಾಜ್ ಕುಮಾರ್ ಪಾತ್ರವೂ ಜನರನ್ನು ಸೆಳೆದಿದೆ. ಸಣ್ಣ ಅತಿಥಿ ಪಾತ್ರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರಾದರೂ ಅದರ ಪರಿಣಾಮ ದೊಡ್ಡದಾಗಿಯೇ ಆಗಿದೆ. ‘ಜೈಲರ್‘ (Jailer) ಸಿನಿಮಾದ ಭಾರಿ ದೊಡ್ಡ ಯಶಸ್ಸು ಹಾಗೂ ತಮ್ಮ ಪಾತ್ರಕ್ಕೆ ಸಿಗುತ್ತಿರುವ ಪ್ರೀತಿಯ ಬಗ್ಗೆ ಶಿವರಾಜ್ ಕುಮಾರ್, ಟಿವಿ9 ಜೊತೆ ಮಾತನಾಡಿದ್ದಾರೆ.
‘ರಜನೀಕಾಂತ್ಗಿಂತಲೂ ನಿಮ್ಮನ್ನು ನೋಡಲೆಂದೇ ಜನ ಥಿಯೇಟರ್ಗೆ ಬರುತ್ತಿದ್ದಾರೆ’ ಎಂದಿದ್ದಕ್ಕೆ ಮುಜುಗರದಿಂದಲೇ ಉತ್ತರಿಸಿದ ಶಿವಣ್ಣ ”ಅಯ್ಯೋ ಹಾಗನ್ನಬೇಡಿ, ನಮಗೆ ರಜನೀಕಾಂತ್ ಅವರನ್ನು ನೋಡುವುದೆಂದರೆ ಖುಷಿ, ಆಸೆ, ಇನ್ನು ಅವರ ಅಭಿಮಾನಿಗಳಿಗೆ ಹೇಗಿರಬೇಡ. ಅವರು ಈ ವಯಸ್ಸಿನಲ್ಲಿಯೂ ಶಕ್ತಿ ಇಟ್ಟುಕೊಂಡು ಪಾತ್ರಗಳನ್ನು ಮಾಡುತ್ತಿದ್ದಾರೆ. ಅವರಿಗೆ ಮಾತ್ರವೇ ಸಾಧ್ಯ, ಅಪ್ಪಾಜಿ ಇದ್ದರು ಅವರೂ ಸಹ ವಯಸ್ಸಾದರೂ ಸಿನಿಮಾಗಳಲ್ಲಿ ಮಾಡುತ್ತಿದ್ದರು. ರಜನೀ-ರಾಜ್ಕುಮಾರ್ ಇಬ್ಬರ ಹೆಸರೂ ಆರ್ ಇಂದ ಪ್ರಾರಂಭವಾಗುತ್ತದೆ. ಅವರಿಗೆ ರಾಜಯೋಗವಿದೆ. ಆರ್ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳವೆರೆಲ್ಲ ರಾಜರೇ” ಎಂದಿದ್ದಾರೆ ಶಿವರಾಜ್ ಕುಮಾರ್.
”ರಜನೀಕಾಂತ್ ಅವರೊಟ್ಟಿಗೆ ನಟಿಸಲು ಸಾಧ್ಯವಾಗಿದ್ದೇ ನಮ್ಮ ಪುಣ್ಯ ಎಂದು ನಾನು ಭಾವಿಸುತ್ತೇನೆ. ಅತಿಥಿ ಪಾತ್ರ ಮಾಡಿ, ಅವರೊಟ್ಟಿಗೆ ತೆರೆ ಹಂಚಿಕೊಂಡಿದ್ದು ನನಗೆ ಬಹಳ ಖುಷಿ, ಅದನ್ನು ನೋಡಿ ಜನ ಖುಷಿ ಪಡುತ್ತಿದ್ದಾರಲ್ಲ ಅದು ನನಗೆ ಇನ್ನೂ ಖುಷಿ ಕೊಟ್ಟಿದೆ. ಜನರ ಈ ಖುಷಿ ಹೀಗೆಯೇ ಮುಂದುವರೆಸಿಕೊಂಡು ಹೋಗಬೇಕು ಎಂಬುದೇ ನನ್ನ ಆಸೆ. ಆ ಖುಷಿ ಪಾಸಿಟಿವ್ ಆಗಿ ಎಲ್ಲೆಡೆ ಹಬ್ಬಬೇಕು ಆಗಷ್ಟೆ ನಮಗೂ ಖುಷಿ ಇರುತ್ತದೆ” ಎಂದಿದ್ದಾರೆ ಶಿವಣ್ಣ.
ಇದನ್ನೂ ಓದಿ:ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ ‘ಜೈಲರ್’ ಸಿನಿಮಾ; ಮೊದಲ ದಿನದ ಕಲೆಕ್ಷನ್ ವಿವರ ಇಲ್ಲಿದೆ
‘ತಮಿಳುನಾಡಿನ ಸಿನಿಮಾ ಪ್ರೇಮಿಗಳು ಶಿವರಾಜ್ ಕುಮಾರ್ ಅವರನ್ನು ನಮಗೆ ಕೊಟ್ಟುಬಿಡಿ ಎನ್ನುತ್ತಿದ್ದಾರಲ್ಲ?’ ಎಂಬ ಪ್ರಶ್ನೆಗೆ ”ಅದೆಲ್ಲ ದೊಡ್ಡ ಮಾತು, ನಾವು ಎಲ್ಲೆ ಇದ್ದರೂ ನಾವು ಭಾರತೀಯರು, ಭಾರತದವರೆಲ್ಲರೂ ಒಂದೇ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಉತ್ತರ ಭಾರತವೇ ಆಗಲಿ ಆ ಹೆಮ್ಮೆ ಭಾರತಕ್ಕೆ ಸೇರುತ್ತದೆಯೇ ಹೊರತು ವ್ಯಕ್ತಿಗಳಿಗೆ ಅಲ್ಲ ಅಥವಾ ಒಂದು ರಾಜ್ಯಕ್ಕೆ ಸೀಮಿತ ಅಲ್ಲ. ಎಲ್ಲರೂ ನಮ್ಮ ಜನ, ಎಲ್ಲರೂ ಭಾರತೀಯರು ಅಷ್ಟೆ. ಅಲ್ಲದೆ ಕಲೆಗೆ ಭಾಷೆ ಇರಬಾರದು ಎಂಬುದೇ ನನ್ನ ಅಭಿಪ್ರಾಯ” ಎಂದರು.
ಟಿಶ್ಯೂ ಕೊಡೋ ಸೀನ್ ಆಗಿರಲಿ, ಎಂಟ್ರಿ ಸೀನ್ಗಳು ಸಖತ್ ಟ್ರೆಂಡ್ ಆಗುತ್ತಿವೆ ಎಂಬುದಕ್ಕೆ, ”ನೀವೆಲ್ಲ ಹೇಳುತ್ತಿರುವಾಗಲೇ ನನಗೆ ಅದೆಲ್ಲ ಗೊತ್ತಾಗುತ್ತಿದೆ. ನಾನು ಈಗ ಸಿನಿಮಾ ನೋಡಲು ಬಂದಿದ್ದೇನೆ. ಅದನ್ನೆಲ್ಲ ನಾನು ಮಾಡಿದ್ದಲ್ಲ, ನಿರ್ದೇಶಕರು ನನ್ನಿಂದ ಮಾಡಿಸಿದ್ದು, ಅಷ್ಟೆಲ್ಲ ಚೆನ್ನಾಗಿ ಬಂದಿದೆ ಎಂದರೆ ಅದರಲ್ಲಿ ಎಲ್ಲರ ಶ್ರಮವೂ ಸೇರಿದೆ” ಎಂದು ವಿನಯದಿಂದ ಹೇಳಿದರು ಶಿವಣ್ಣ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ