‘ಜೈಲರ್’, ‘ಭೋಲಾ ಶಂಕರ್’ ಬಂದರೂ ತಗ್ಗಿಲ್ಲ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ ಹವಾ
Kausalya Supraja Rama: ರಜನೀಕಾಂತ್ ನಟನೆಯ 'ಜೈಲರ್' ಚಿರಂಜೀವಿ ನಟನೆಯ 'ಭೋಲಾ ಶಂಕರ್' ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದ್ದರೂ ಸಹ ಕನ್ನಡ ಸಿನಿಮಾಗಳು ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿವೆ.
ಪರಭಾಷಾ ಸಿನಿಮಾಗಳ ಮುಂದೆ ಕನ್ನಡದ ಸಿನಿಮಾಗಳು ಮಂಕಾಗುತ್ತವೆ, ಕನ್ನಡ ಪ್ರೇಕ್ಷಕ, ಪರಭಾಷೆ ಸಿನಿಮಾಗಳನ್ನು ನೋಡುವುದೇ ಹೆಚ್ಚು ಎಂಬಿತ್ಯಾದಿ ಆರೋಪಗಳು ಮೊದಲಿನಿಂದಲೂ ಇವೆ. ಆದರೆ ಈಗ ಕಾಲ ತುಸು ಬದಲಾಗಿದೆ. ಕನ್ನಡ ಸಿನಿಮಾಗಳು ಸತತವಾಗಿ ಗಟ್ಟಿ ಸಿನಿಮಾಗಳನ್ನು ಕೊಡುತ್ತಿವೆ, ಇದೀಗ ರಜನೀಕಾಂತ್ ನಟನೆಯ ‘ಜೈಲರ್‘ (Jailer) ಹಾಗೂ ಚಿರಂಜೀವಿ ನಟನೆಯ ‘ಭೋಲಾ ಶಂಕರ್‘ ಸಿನಿಮಾ ಬಿಡುಗಡೆ ಆಗಿದೆ. ಇವುಗಳ ನಡುವೆಯೂ ಕನ್ನಡ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಎರಡು ವಾರಗಳ ಹಿಂದೆ ಬಿಡುಗಡೆ ಆಗಿದ್ದ ಡಾರ್ಲಿಂಗ್ ಕೃಷ್ಣ ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಮೂರನೇ ವಾರವೂ ಅಲ್ಲಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಹಜವಾಗಿಯೇ ಚಿತ್ರತಂಡ ಈ ಬಗ್ಗೆ ಸಂತಸಗೊಂಡಿದೆ. ಹೌಸ್ಫುಲ್ ಆಗಿರುವ ಶೋಗಳ ಮಾಹಿತಿಯನ್ನು ಬುಕ್ಮೈ ಶೋನಿಂದ ಹೆಕ್ಕಿ ತಮ್ಮ ಇನ್ಸ್ಟಾಗ್ರಾಂನಲ್ಲಿ ನಟಿ ಮಿಲನಾ ನಾಗರಾಜ್ ನಾಗರಾಜ್ ಹಂಚಿಕೊಂಡಿದ್ದಾರೆ.
ಮಿಲನಾ ನಾಗರಾಜ್ ಇನ್ಸ್ಟಾಗ್ರಾಂ ಪೋಸ್ಟ್
View this post on Instagram
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಿತ್ತು. ಶಶಾಂಕ್ ನಿರ್ದೇಶನದ ಈ ಸಿನಿಮಾ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿದ್ದವು. ಪ್ರೇಮಕತೆ, ಕೌಟುಂಬಿಕ ಕತೆ, ಹಾಸ್ಯ, ಆಕ್ಷನ್, ಮಾಸ್ ಎಲಿಮೆಂಟ್ ಜೊತೆಗೆ ಒಂದೊಳ್ಳೆ ಸಂದೇಶ ಹದವಾಗಿ ಬೆರೆಸಿ ಮಾಡಿದ ಸದಭಿರುಚಿಯ ಸಿನಿಮಾ ಇದೆಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತ್ತು. ಅಂತೆಯೇ ಸಿನಿಮಾವನ್ನು ಫ್ಯಾಮಿಲಿ ಆಡಿಯನ್ಸ್ ಉತ್ತಮ ಸಂಖ್ಯೆಯಲ್ಲಿ ಬಂದು ನೋಡಿ ಮೆಚ್ಚಿದ್ದರು.
ಇದನ್ನೂ ಓದಿ:‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಅನ್ಯಾಯ; ಪರಭಾಷೆಗೆ ಮಣೆ ಹಾಕಿದ ಮಲ್ಟಿಪ್ಲೆಕ್ಸ್ ವಿರುದ್ಧ ಚಿತ್ರತಂಡದ ಆಕ್ರೋಶ
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಪುರುಷ ಅಹಂಕಾರದ ಬಗ್ಗೆ ಸಂದೇಶವುಳ್ಳ ಸಿನಿಮಾ ಆಗಿದೆ. ಸಿನಿಮಾದ ನಾಯಕ ಡಾರ್ಲಿಂಗ್ ಕೃಷ್ಣ, ಪುರುಷ ಅಹಂಕಾರದಲ್ಲಿ ಮೆರೆಯುವ ವ್ಯಕ್ತಿಯಾಗಿ ಆತನ ಜೀವನದಲ್ಲಿ ಬರುವ ಯುವತಿಯರು ಹಾಗೂ ಆತನ ತಾಯಿ ನಾಯಕನ ಮನಸ್ಥಿತಿಯನ್ನು ಹೇಗೆ ಬದಲಾಯಿಸುತ್ತಾರೆ ಎಂಬುದನ್ನು ನಿರ್ದೇಶಕ ಶಶಾಂಕ್ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆಗೆ ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಪತ್ನಿ ಮಿಲನಾ ನಾಗರಾಜ್ ಸಹ ಇದ್ದಾರೆ. ಅವರು ನಟಿಸಿರುವ ಎಣ್ಣೆ ಹಾಡು ಸಖತ್ ಹಿಟ್ ಆಗಿದೆ. ಜೊತೆಗೆ ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ್ ಇನ್ನೂ ಕೆಲವು ಉತ್ತಮ ನಟರುಗಳು ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ಶಶಾಂಕ್, ಬಿ.ಸಿ.ಪಾಟೀಲ್ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ