ಕನ್ನಡ ಬಾವುಟ ಸುಟ್ಟು ಹಾಕಿದ ಘಟನೆ ಬಗ್ಗೆ ನಟ ಶಿವರಾಜ್ಕುಮಾರ್ (Shivarajkumar) ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಡಾಲಿ ಧನಂಜಯ ನಟನೆಯ ‘ಬಡವ ರಾಸ್ಕಲ್’ (Badava Rascal) ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು. ಕನ್ನಡ ಚಿತ್ರರಂಗಕ್ಕೆ (Kannada Film Industry) ನಾಯಕತ್ವದ ಕೊರತೆ ಇದೆ ಎಂಬ ಮಾತು ಪದೇಪದೇ ಕೇಳಿಬರುತ್ತಿದೆ. ಶಿವಣ್ಣ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಅವರು ‘ನನಗೆ ಲೀಡರ್ಶಿಪ್ ಬೇಡ. ನಿಮ್ಮ ಜತೆ ನಾನೂ ಒಬ್ಬನಾಗಿ ಇರುತ್ತೇನೆ. ನಮಗೆ ಲೀಡರ್ ಯಾವತ್ತಿದ್ದರೂ ಅಪ್ಪಾಜಿಯೇ. ಅವರ ಹಿಂದೆ ನಾವೆಲ್ಲಾ ನಿಂತುಕೊಳ್ಳೋಣ’ ಎಂದಿದ್ದಾರೆ. ಎಂಇಸ್ ಕಾರ್ಯಕರ್ತರ ಪುಂಡಾಟ ಮಿತಿ ಮೀರಿದೆ. ಆ ಬಗ್ಗೆ ಶಿವಣ್ಣ ಇಷ್ಟು ದಿನ ಬಹಿರಂಗವಾಗಿ ಮಾತನಾಡಿರಲಿಲ್ಲ. ಈಗ ಅವರು ಆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
‘ಕನ್ನಡವನ್ನು ಇಷ್ಟು ಕೀಳಾಗಿ ನೋಡೋದಾ? ಕನ್ನಡ ಬಾವುಟ ಸುಟ್ಟರೆ ಕನ್ನಡದ ತಾಯಿಯನ್ನೇ ಸುಟ್ಟಂತೆ ಅಲ್ವಾ? ಅಂಥವರನ್ನು ಬಿಟ್ಟು ಬಿಡುತ್ತೇವಾ? ತಾಯಿಗೆ ಏನಾದ್ರೂ ತೊಂದರೆ ಆದರೆ ಸುಮ್ಮನೆ ಇರುತ್ತೇವಾ? ಭಾರತೀಯರಾದ ನಮಗೆಲ್ಲರಿಗೂ ನಮ್ಮ-ನಮ್ಮ ಭಾಷೆ ಮುಖ್ಯ. ಆಯಾ ರಾಜ್ಯದ ಭಾಷೆ ಮತ್ತು ಸಂಸ್ಕೃತಿಗೆ ಮರ್ಯಾದೆ ಕೊಡಬೇಕು. ಬೇರೆಯವರ ಬಾವುಟವನ್ನು ಸುಡುವಂತಹ ಕೃತ್ಯ ಯಾರಿಂದಲೂ ಆಗ ಬಾರದು’ ಎಂದು ಶಿವಣ್ಣ ಹೇಳಿದರು.
ಡಾ. ರಾಜ್ಕುಮಾರ್ ಮತ್ತು ಅಂಬರೀಷ್ ಅವರ ನಿಧನದ ನಂತರ ಕನ್ನಡ ಚಿತ್ರರಂಗಕ್ಕೆ ಲೀಡರ್ ಇಲ್ಲದಂತಾಗಿದೆ. ಈ ಮಾತನ್ನು ಎಲ್ಲರೂ ಹೇಳುತ್ತಿದ್ದಾರೆ. ಡಿ.19ರಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೇ ರೀತಿ, ‘ಬಡವ ರಾಸ್ಕಲ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಭಾಗವಹಿಸಿದ್ದ ದುನಿಯಾ ವಿಜಯ್, ರಂಗಾಯಣ ರಘು ಮುಂತಾದವರು ಕೂಡ ಶಿವಣ್ಣನ ನಾಯಕತ್ವ ಬೇಕು ಎಂದು ಹೇಳಿದರು.
ದುನಿಯಾ ವಿಜಯ್ ಅವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ‘ಶಿವಣ್ಣನ ಎನರ್ಜಿ ಮತ್ತು ಒಳ್ಳೆಯತನ ನಮಗೆ ಗೊತ್ತು. ಶಿವಣ್ಣನ ಟೀಮ್ನಲ್ಲಿ ನಾವೆಲ್ಲರೂ ಇದ್ದೇವೆ. ನಾವು ಯಾವತ್ತೂ ಅವರನ್ನು ಬಿಟ್ಟುಕೊಡುವುದಿಲ್ಲ. ಯಾವುದೇ ಹೋರಾಟಕ್ಕೆ ಅವರು ಸಿದ್ಧ ಅಂತ ಹೇಳಿದ ತಕ್ಷಣ ನಾವೆಲ್ಲರೂ ಅವರ ಜತೆ ನಿಂತುಕೊಳ್ಳುತ್ತೇವೆ. ಎಲ್ಲರೂ ಕೇಳಿಕೊಳ್ಳುವಂತೆ ನಾನೂ ಸಹ ಮನವಿ ಮಾಡಿಕೊಳ್ಳುತ್ತೇನೆ. ನೀವು ನಾಯಕತ್ವನ್ನು ವಹಿಸಿಕೊಂಡಿದ್ದೀರಿ. ನಾನಿದ್ದೇನೆ ಅಂತ ಒಮ್ಮೆ ಹೇಳಿ ಸಾಕು. ಉಳಿದ ನಾವೆಲ್ಲರೂ ನಿಮ್ಮ ಜೊತೆಯಲ್ಲಿ ಬರುತ್ತೇವೆ. ಈ ಚಿತ್ರರಂಗದಲ್ಲಿ ಶಿವಣ್ಣ ಅವರದ್ದು ನೇರ ನಡೆ-ನುಡಿಯ ವ್ಯಕ್ತಿತ್ವ’ ಎಂದರು ದುನಿಯಾ ವಿಜಯ್.
ಇದನ್ನೂ ಓದಿ:
‘ಭಾಷೆಗಾಗಿ ನನ್ನ ಪ್ರಾಣ ಹೋಗ್ಬೇಕು ಅಂದ್ರೆ ಹೋಗಲಿ ಬಿಡಿ’; ಕನ್ನಡ ಪರ ಹೋರಾಟದ ಬಗ್ಗೆ ಶಿವಣ್ಣ ಮಾತು
‘ಸಿನಿಮಾ ನಟರು ಟ್ವೀಟ್ ಮಾಡಿದ್ರೆ ಸಾಲದು’; ಬೆಳಗಾವಿ ಹೋರಾಟದ ಬಗ್ಗೆ ಇಂದ್ರಜಿತ್ ಲಂಕೇಶ್ ಹೇಳಿಕೆ
Published On - 9:58 am, Mon, 20 December 21