‘ಸಿನಿಮಾ ನಟರು ಟ್ವೀಟ್ ಮಾಡಿದ್ರೆ ಸಾಲದು’; ಬೆಳಗಾವಿ ಹೋರಾಟದ ಬಗ್ಗೆ ಇಂದ್ರಜಿತ್ ಲಂಕೇಶ್ ಹೇಳಿಕೆ
Indrajit Lankesh: ‘ಸಿನಿಮಾರಂಗಕ್ಕೆ ಉತ್ತಮ ನಾಯಕತ್ವದ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ಶಿವರಾಜ್ಕುಮಾರ್ ಅವರು ನಾಯಕತ್ವ ವಹಿಸಿಕೊಳ್ಳಬೇಕು’ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಎಂಇಎಸ್ (MES) ಕಾರ್ಯಕರ್ತರ ಪುಂಡಾಟಿಕೆ ಮಿತಿ ಮೀರಿದೆ. ಅದನ್ನು ಖಂಡಿಸಿ ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಧ್ವನಿ ಎತ್ತುತ್ತಿದ್ದಾರೆ. ಆದರೆ ಕೇವಲ ಟ್ವೀಟ್ ಮಾಡಿದರೆ ಸಾಲದು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಹೇಳಿದ್ದಾರೆ. ‘ನಾನು ಟ್ವಿಟರ್ ಹೋರಾಟದ’ ವಿರೋಧಿ ಎಂದು ಹೇಳಿರುವ ಅವರು, ಸ್ವತಃ ಬೆಳಗಾವಿಗೆ (Belagavi) ಹೋಗಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಇತರೆ ಸೆಲೆಬ್ರಿಟಿಗಳು ಸಹ ಬೆಳಗಾವಿಗೆ ಬಂದು ಹೋರಾಟ ಮಾಡಬೇಕು ಎಂದು ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.
ಕರ್ನಾಟಕದ ಬಾವುಟ ಸುಟ್ಟು ಹಾಕಿದ ಘಟನೆಯನ್ನು ವಿರೋಧಿಸಿ ಅನೇಕ ಕಲಾವಿದರು ಟ್ವೀಟ್ ಮಾಡಿದ್ದರು. ಈಗ ಬೆಳಗಾವಿಯಲ್ಲಿ ಕನ್ನಡಪರ ಹೋರಾಟದ ಕಿಚ್ಚು ಜೋರಾಗಿದೆ. ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಬರೀ ಟ್ವೀಟ್ ಮಾಡುವುದರಿಂದ ಏನೂ ಆಗುವುದಿಲ್ಲ ಎಂಬುದು ಇಂದ್ರಜಿತ್ ಲಂಕೇಶ್ ಅವರ ಅಭಿಪ್ರಾಯ. ಈ ವಿಚಾರದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಅವರು ತಿಳಿಸಿದ್ದಾರೆ. ಸೆಲೆಬ್ರಿಟಿಗಳು ಟ್ವೀಟ್ ಮಾಡುತ್ತಿರುವ ಕುರಿತು ಮೈಸೂರಿನಲ್ಲಿ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದಾರೆ.
‘ಸಿನಿಮಾ ನಟರು ಕೇವಲ ಟ್ವೀಟ್ ಮಾಡಿ ಸುಮ್ಮನಾಗಬಾರದು. ಸಿನಿಮಾದವರು ಬೆಳಗಾವಿಗೆ ಹೋಗಿ ಹೋರಾಟಕ್ಕೆ ಬೆಂಬಲ ನೀಡಬೇಕು. ಸಿನಿಮಾ ರಂಗದಲ್ಲಿ ಈಗ ನಾಯಕತ್ವದ ಕೊರತೆ ಇದೆ. ಡಾ. ರಾಜ್‌ಕುಮಾರ್ ಮತ್ತು ಅಂಬರೀಷ್ ನಂತರ ಕನ್ನಡ ಚಿತ್ರರಂಗದಲ್ಲಿ ನಾಯಕತ್ವ ಇಲ್ಲದಂತಾಗಿದೆ. ಕನ್ನಡದ ಪರ ಹೋರಾಟಕ್ಕೆ ಬನ್ನಿ ಅಂತಾ ಕರೆಯಬೇಕಾದ ದುಸ್ಥಿತಿ ಇದೆ’ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
‘ಸಿನಿಮಾರಂಗಕ್ಕೆ ಉತ್ತಮ ನಾಯಕತ್ವದ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ಶಿವರಾಜ್ಕುಮಾರ್ ಅವರು ನಾಯಕತ್ವ ವಹಿಸಿಕೊಳ್ಳಬೇಕು. ಅವರ ನಾಯಕತ್ವದಲ್ಲಿ ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು. ನಾನು ಟ್ವಿಟರ್ ಹೋರಾಟದ ವಿರೋಧಿ. ನೇರವಾಗಿ ಬೆಳಗಾವಿಗೆ ಹೋಗುತ್ತೇನೆ. ಈ ಹಿಂದೆ ಗೋಕಾಕ್ ಚಳುವಳಿಗೆ ಡಾ. ರಾಜ್‌ಕುಮಾರ್ ಅವರನ್ನು ಕರೆ ತಂದಿದ್ದು ನಮ್ಮ ತಂದೆ ಲಂಕೇಶ್. ಡಾ. ರಾಜ್ ಅನುಮತಿ ಇಲ್ಲದೆ ಗೋಕಾಕ್ ಹೋರಾಟಕ್ಕೆ ರಾಜ್ ಅಂತ ಲೇಖನ ಬರೆದಿದ್ದರು. ನಂತರ ಡಾ. ರಾಜ್‌ಕುಮಾರ್ ಅವರು ಹೋರಾಟಕ್ಕೆ ಬಂದಿದ್ದರು’ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
‘ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸಿದ ನನಗೆ ಮಸಿ ಬಳಿಯುವುದಾಗಿ ಕೆಲವರು ಹೇಳಿದ್ದರು. ಆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ನನ್ನ ಸಹೋದರಿ ಗೌರಿ ಲಂಕೇಶ್ ಹೋರಾಟ ಮಾಡುತ್ತಲೇ ಕೊಲೆಯಾಗಿ ಹೋದಳು. ನಾನು ಸಹ ಹೋರಾಟ ಮಾಡಿಕೊಂಡು ಬಂದವನು. ನನಗೆ ಮಸಿ ಬಳಿಯುವುದಿರಲಿ, ಕೊಲೆ ಮಾಡುತ್ತೇನೆಂದು ಬೆದರಿಸಿದರೂ ನಾನು ಹೆದರುವುದಿಲ್ಲ’ ಎಂದಿದ್ದಾರೆ ಇಂದ್ರಜಿತ್ ಲಂಕೇಶ್.
ಇದನ್ನೂ ಓದಿ:
‘ಕನ್ನಡದ ಬಾವುಟಕ್ಕೆ ಮರ್ಯಾದೆ ಕೊಡಲೇ ಬೇಕು’; ಧ್ರುವ ಸರ್ಜಾ ಖಡಕ್ ಮಾತು