‘ಭಾಷೆಗಾಗಿ ನನ್ನ ಪ್ರಾಣ ಹೋಗ್ಬೇಕು ಅಂದ್ರೆ ಹೋಗಲಿ ಬಿಡಿ’; ಕನ್ನಡ ಪರ ಹೋರಾಟದ ಬಗ್ಗೆ ಶಿವಣ್ಣ ಮಾತು

| Updated By: ಮದನ್​ ಕುಮಾರ್​

Updated on: Dec 20, 2021 | 8:11 AM

Shivarajkumar: ‘ನಾವು ಸುಮ್ಮನಿದ್ದೇವೆ ಎಂದರೆ ನಮಗೆ ಶಕ್ತಿ ಇಲ್ಲ ಅಂತ ಅಂದುಕೊಳ್ಳಬಾರದು. ಮನುಷ್ಯನಿಗೆ ಕೋಪ ಬಂದರೆ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

‘ಭಾಷೆಗಾಗಿ ನನ್ನ ಪ್ರಾಣ ಹೋಗ್ಬೇಕು ಅಂದ್ರೆ ಹೋಗಲಿ ಬಿಡಿ’; ಕನ್ನಡ ಪರ ಹೋರಾಟದ ಬಗ್ಗೆ ಶಿವಣ್ಣ ಮಾತು
ಶಿವರಾಜ್​ಕುಮಾರ್
Follow us on

ಬೆಳಗಾವಿಯಲ್ಲಿ ಎಂಇಎಸ್​ (MES) ಕಾರ್ಯಕರ್ತರ ಅತಿರೇಕದ ವರ್ತನೆಯನ್ನು ಅನೇಕರು ಖಂಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗ ಕೂಡ ಧ್ವನಿ ಎತ್ತಿದೆ. ಆ ಬಗ್ಗೆ ಶಿವರಾಜ್​ಕುಮಾರ್​ (Shivarajkumar) ಇಷ್ಟು ದಿನ ಬಹಿರಂಗವಾಗಿ ಮಾತನಾಡಿರಲಿಲ್ಲ. ಈಗ ಅವರು ಆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಭಾರತೀಯರಾದ ನಮಗೆಲ್ಲರಿಗೂ ನಮ್ಮ-ನಮ್ಮ ಭಾಷೆ ಮುಖ್ಯ. ಆಯಾ ರಾಜ್ಯದ ಭಾಷೆ ಮತ್ತು ಸಂಸ್ಕೃತಿಗೆ ಮರ್ಯಾದೆ ಕೊಡಬೇಕು. ಬೇರೆಯವರ ಬಾವುಟವನ್ನು ಸುಡುವಂತಹ ಕೃತ್ಯ ಯಾರಿಂದಲೂ ಆಗ ಬಾರದು’ ಎಂದು ಶಿವಣ್ಣ ಹೇಳಿದರು. ಡಾಲಿ ಧನಂಜಯ ನಟನೆಯ ‘ಬಡವ ರಾಸ್ಕಲ್​’ (Badava Rascal) ಸಿನಿಮಾದ ಪ್ರೀ ರಿಲೀಸ್​ ಕಾರ್ಯಕ್ರಮಕ್ಕೆ ಶಿವಣ್ಣ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ನಾನು ಹುಟ್ಟಿದ್ದು ಚೆನ್ನೈನಲ್ಲಿ. ತಮಿಳನ್ನು ಮೂರನೇ ಭಾಷೆಯಾಗಿ ಕಲಿತಿದ್ದೇನೆ. ತಮಿಳು ಸ್ನೇಹಿತರ ಜತೆ ತಮಿಳಿನಲ್ಲಿ ಮಾತನಾಡುತ್ತೇನೆ. ತಮಿಳು, ತೆಲುಗು, ಮಲಯಾಳಂ, ಹಿಂದಿ, ಗುಜರಾತಿ, ಪಂಜಾಬಿ, ಮರಾಠಿ ಸೇರಿದಂತೆ ಎಲ್ಲ ಭಾಷೆಯ ಸಿನಿಮಾ ನೋಡುತ್ತೇನೆ. ಕರ್ನಾಟಕದಲ್ಲಿ ಇದ್ದಾಗ ಕನ್ನಡವನ್ನು ಪ್ರೀತಿಸಬೇಕು’ ಎಂದಿದ್ದಾರೆ ಶಿವರಾಜ್​ಕುಮಾರ್​.

‘ನಮ್ಮ ಮೇಲೆ ದಬ್ಬಾಳಿಕೆ ಮಾಡಬೇಡಿ. ನಾವು ಸುಮ್ಮನಿದ್ದೇವೆ ಎಂದರೆ ನಮಗೆ ಶಕ್ತಿ ಇಲ್ಲ ಅಂತ ಅಂದುಕೊಳ್ಳಬಾರದು. ಮನುಷ್ಯನಿಗೆ ಕೋಪ ಬಂದರೆ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ. ಸರ್ಕಾರದವರು ಇದಕ್ಕಾಗಿ ಫೈಟ್​ ಮಾಡಬೇಕು. ವೋಟಿಂಗ್​ ರಾಜಕಾರಣಕ್ಕಾಗಿ ಅವರು ಸುಮ್ಮನಾಗಬಾರದು. ಘಟನೆ ಬಗ್ಗೆ ತಿಳಿದ ತಕ್ಷಣ ನಾನು ಟ್ವೀಟ್​ ಮಾಡಿದೆ. ಟ್ವೀಟ್​ ಮಾಡುವುದು ಇಂದು ಫ್ಯಾಷನ್​ ಆಗಿ ಬಿಟ್ಟಿದೆ. ಅದರಿಂದ ಏನೂ ಪ್ರಯೋಜನ ಇಲ್ಲ’ ಎಂದು ಶಿವಣ್ಣ ಹೇಳಿದ್ದಾರೆ.

‘ನಮ್ಮ ಭಾಷೆಗೆ ನಾನು ಪ್ರಾಣ ಕೊಡೋಕೂ ಸಿದ್ಧನಿದ್ದೇನೆ. ನನಗೆ 59 ವರ್ಷ ಆಯ್ತು. 60 ವರ್ಷ ನನ್ನನ್ನು ಬೆಳೆಸಿದ್ದೀರಿ. ಈಗ ಭಾಷೆಗಾಗಿಯೇ ಪ್ರಾಣ ಹೋಗಬೇಕು ಎಂದರೆ ಹೋಗಲಿ ಬಿಡಿ. ಜನರು ಯಾವುದೋ ಕಾರಣಕ್ಕೆ ನಿಧನರಾಗ್ತಾರೆ. 46 ವರ್ಷಕ್ಕೆ ಒಬ್ಬ ಹೊರಟು ಹೋಗ್ತಾನೆ ಅಂತ ಯಾರೂ ಊಹಿಸಿರಲಿಲ್ಲ. ಯಾರ ಜೀವಕ್ಕೂ ಗ್ಯಾರಂಟಿ ಇಲ್ಲ. ಪ್ರಾಕ್ಟಿಕಲ್​ ಆಗಿ ನಾನು ಮಾತನಾಡ್ತಾ ಇದೀನಿ. ಹೋಗಿಬಿಡಬೇಕು ಅಂತ ನನಗೆ ಆಸೆ ಇಲ್ಲ. ಇನ್ನೂ 100 ವರ್ಷ ಇರಬೇಕು ಅಂತ ಆಸೆಪಡುತ್ತೇನೆ. ಯಾಕೆಂದರೆ ಬದುಕು ಒಂದು ಉಡುಗೊರೆ. ಅನವಶ್ಯಕವಾಗಿ ಕಳೆದುಹೋಗಬಾರದು’ ಎಂದು ಶಿವಣ್ಣ ಹೇಳಿದರು.

ಇದನ್ನೂ ಓದಿ:

‘ಸಿನಿಮಾ ನಟರು ಟ್ವೀಟ್​ ಮಾಡಿದ್ರೆ ಸಾಲದು’; ಬೆಳಗಾವಿ ಹೋರಾಟದ ಬಗ್ಗೆ ಇಂದ್ರಜಿತ್​ ಲಂಕೇಶ್​ ಹೇಳಿಕೆ

ಪುನೀತ್​ ಅವರ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿದ ಶಿವಣ್ಣ; ಊರಿಗೆ ಕ್ಷೇಮವಾಗಿ ತಲುಪುವಂತೆ ಸಲಹೆ