
ಪುನೀತ್ ರಾಜ್ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ಅ.28ಕ್ಕೆ ರಿಲೀಸ್ ಆಗಲಿದೆ. ಅದರ ಸಲುವಾಗಿ ಇಂದು (ಅ.21) ಅದ್ದೂರಿಯಾಗಿ ಪ್ರೀ ರಿಲೀಸ್ ಇವೆಂಟ್ ಮಾಡಲಾಗಿದೆ. ಡಾ. ರಾಜ್ಕುಮಾರ್ ಕುಟುಂಬದವರು ‘ಪುನೀತ ಪರ್ವ’ (Puneetha Parva) ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಬಹಳ ಕಾಳಜಿಯಿಂದ ಮಾಡಿದ್ದಾರೆ. ಅಣ್ಣಾವ್ರ ಕುಟುಂಬದ ಎಲ್ಲರೂ ಇದರಲ್ಲಿ ಭಾಗಿ ಆಗಿದ್ದಾರೆ. ಶಿವರಾಜ್ಕುಮಾರ್ (Puneeth Rajkumar) ಅವರು ವೇದಿಕೆ ಮೇಲೆ ಡ್ಯಾನ್ಸ್ ಮಾಡುವ ಮೂಲಕ ಸಹೋದರ ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಬಳಿಕ ಗಂಧದ ಗುಡಿ’ ಹಾಗೂ ಪುನೀತ್ ಬಗ್ಗೆ ಅವರು ವಿಶೇಷ ಮಾತುಗಳನ್ನು ಹಂಚಿಕೊಂಡರು.
ಶಿವರಾಜ್ಕುಮಾರ್ ಜೊತೆ ಪರಭಾಷೆ ಕಲಾವಿದರಾದ ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ, ಸಿದ್ದಾರ್ಥ್ ಕೂಡ ವೇದಿಕೆಗೆ ಬಂದು ಅಪ್ಪು ಬಗ್ಗೆ ಮಾತನಾಡಿದರು. ಅವರಿಗೆ ಕನ್ನಡದ ಹೀರೋಗಳಾದ ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ ಸಾಥ್ ನೀಡಿದರು.
‘ಈ ಸಮಾರಂಭದಲ್ಲಿ ಮಾತಾಡೋದು ಬಹಳ ಕಷ್ಟ. ಒಂದು ವರ್ಷ ಹೇಗೆ ಕಳೆದು ಹೋಯಿತು ಎಂಬುದು ನೆನಪಿಸಿಕೊಂಡರೆ ಸಂಕಟ, ನೋವು ಆಗುತ್ತದೆ. ಆ ನೋವು ಎಲ್ಲರಿಗೂ ಇದೆ. ಬೇರೆ ಭಾಷೆಯವರಿಗೆ ಅಪ್ಪು ಬಗ್ಗೆ ಪ್ರೀತಿ ಇದೆ. ಹಾಗಾಗಿ ಅವರೆಲ್ಲ ಇಲ್ಲಿಗೆ ಬಂದಿದ್ದಾರೆ. ದುಃಖದಲ್ಲಿ ನಮ್ಮ ಜೊತೆಯಲ್ಲಿ ನೀವೆಲ್ಲ ಇದ್ದಿದ್ದು ಒಂದು ನೈತಿಕ ಬಲ ಆಯ್ತು. ಇಲ್ಲ ಅಂದಿದ್ದರೆ ನಾವು ಕುಗ್ಗಿ ಹೋಗುತ್ತಿದ್ದೆವು’ ಎಂದರು ಶಿವರಾಜ್ಕುಮಾರ್.
‘ಗಂಧದ ಗುಡಿ ಎಂದಾಗ ಮೊದಲು ನೆನಪು ಬರೋದು ಅಪ್ಪಾಜಿ ಸಿನಿಮಾ. ವಿಷ್ಣುವರ್ಧನ್ ಮತ್ತು ಅಪ್ಪಾಜಿ ಅವರು ಮೊದಲ ಜೊತೆಯಾಗಿ ಮಾಡಿದ ಸಿನಿಮಾ ಅದು. ಗಂಧದ ಗುಡಿ ಪಾರ್ಟ್ 2 ಮಾಡುವ ಭಾಗ್ಯ ನನಗೆ ಸಿಕ್ತು. ಈಗ ಅಪ್ಪು ಮಾಡಿದ್ದಾನೆ. ಕಾಡು ತುಂಬ ಮುಖ್ಯ. ನಾವು ಪರಿಸರಕ್ಕೆ ಎಷ್ಟು ದ್ರೋಹ ಮಾಡ್ತೀವಿ, ಪ್ರಕೃತಿ ಅಷ್ಟೇ ಸೇಡು ತೀರಿಸಿಕೊಳ್ಳುತ್ತೆ. ಪ್ರಾಣಿಗಳನ್ನು ಉಳಿಸಿ, ಮರ ಬೆಳೆಸಿ ಅಂತ ಕೇಳಿಕೊಳ್ಳುತ್ತೇನೆ’ ಎಂದು ಶಿವಣ್ಣ ಮನವಿ ಮಾಡಿಕೊಂಡರು.
‘ಅಪ್ಪು ನಮ್ಮ ಜೊತೆ ಇಲ್ಲ ಅಂತ ನಾನು ಯಾವಾಗಲೂ ಹೇಳಲ್ಲ. ಅವನು ನನ್ನ ಜೊತೆಯೇ ಇದ್ದಾನೆ. ನಾನೇಕೆ ಮಿಸ್ ಮಾಡಿಕೊಳ್ಳಲಿ? ಗಂಧದ ಗುಡಿಗೆ ಒಳ್ಳೆಯದಾಗಲಿ’ ಎಂದರು ಶಿವರಾಜ್ಕುಮಾರ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.